ADVERTISEMENT

ಮಂಡ್ಯ ಗಾಳಿಯಲ್ಲಿ ಕನ್ನಡ ಅಭಿಮಾನವಿದೆ: ಮನು ಬಳಿಗಾರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:09 IST
Last Updated 24 ಡಿಸೆಂಬರ್ 2017, 5:09 IST

ಮಳವಳ್ಳಿ: ‘ಜಿಲ್ಲೆಯ ಗಾಳಿಯಲ್ಲೂ ಕನ್ನಡಾಭಿಮಾನವಿದೆ. ಸಿಹಿಗೆ ಸುಪ್ರಸಿದ್ಧವಾದ ಜಿಲ್ಲೆಯಲ್ಲಿ ಕನ್ನಡ ಹಬ್ಬ ನಡೆಯುತ್ತಿರುವುದು ಸಂತಸ ತಂದಿದೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮನು ಬಳಿಗಾರ ಹೇಳಿದರು.

ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ‘1974ರಲ್ಲಿ ಇದೇ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಾಗ ನಾನು ವಿದ್ಯಾರ್ಥಿಯಾಗಿ ಭಾಗವಹಿಸಿದ್ದೆ. ಅಂದಿನಿಂದಲೂ ಇಂದಿನಿವರೆಗೂ ಜಿಲ್ಲೆಯಲ್ಲಿ ಕನ್ನಡದ ಅಪ್ಪಟ ಅಭಿಮಾನವನ್ನು ಕಂಡಿದ್ದೇನೆ. ಸರ್ಕಾರಗಳೂ ಕೂಡ ಕನ್ನಡದ ಕೆಲಸಕ್ಕೆ ಅಪಾರ ಧನ ಸಹಾಯ ನೀಡಿವೆ. ದೇಶದಲ್ಲೇ ಅತಿಹೆಚ್ಚು ಅನುದಾನ ಕನ್ನಡದ ಕೆಲಸಕ್ಕೆ ಸಿಕ್ಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡದ ಕೆಲಸಗಳಿಗೆ ಅಪಾರ ಅನುದಾನ ಪಡೆಯುತ್ತಿದೆ. ಅದೆಲ್ಲವೂ ಕನ್ನಡಕ್ಕಾಗಿ ಬಳಕೆಯಾಗುತ್ತದೆ’ ಎಂದು ಹೇಳಿದರು.

‘ಹಳ್ಳಿಗಳಲ್ಲೂ ಬೆಂಗಳೂರಿನಲ್ಲಿರುವ ಇಂಗ್ಲಿಷ್‌ ವಾತಾವರಣ ಹರಿದಾಡುತ್ತಿರುವುದು ದುರದೃಷ್ಟಕರ. ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮದಲ್ಲೇ ಕಲಿಸಬೇಕು ಎಂಬ ಹಟಕ್ಕೆ ಬಿದ್ದಿರುವುದು ಒಳ್ಳೆಯದಲ್ಲ. 2 ಸಾವಿರ ಇತಿಹಾಸವುಳ್ಳ ಕನ್ನಡ ಭಾಷೆಗೆ ತನ್ನದೇ ಆದ ಶಕ್ತಿ ಇದೆ. ಇದನ್ನು ಕನ್ನಡಿಗರೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಶ್ರವಣಬೊಳ ಗೊಳದಂತಹ ಶಿಲ್ಪಕಲೆಯನ್ನು ವಿಶ್ವದಲ್ಲಿ ಎಲ್ಲಿಯೂ ನೋಡಲು ಸಿಗುವುದಿಲ್ಲ. ಹಂಪಿ, ಬೇಲೂರು, ಹಳೆಬೀಡು ಶಿಲ್ಪಕಲೆಗಳನ್ನು ನೋಡಲು ಎರಡೂ ಕಣ್ಣು ಸಾಲುವುದಿಲ್ಲ’ ಎಂದು ಹೇಳಿದರು.

ADVERTISEMENT

ನಿಕಟಪೂರ್ವ ಅಧ್ಯಕ್ಷ ಪ್ರೊ. ಎಂ.ಕೃಷ್ಣೇಗೌಡ ಮಾತನಾಡಿ ‘ಇಂಟರ್‌ನೆಟ್‌ ಎಂಬುದು ಸೃಷ್ಟಿಯ ಪ್ರತಿರೂಪವಾಗಿದೆ. ಇಲ್ಲಿ ಎಲ್ಲವೂ ಸಿಗುತ್ತದೆ. ಮಾಹಿತಿ ಎಂದಿಗೂ ಜ್ಞಾನವಾಗುವುದಿಲ್ಲ. ಮಾಹಿತಿಯನ್ನು ಉಂಡು, ಅರಗಿಸಿಕೊಂಡರೆ ಮಾತ್ರ ಮಾಹಿತಿ ಜ್ಞಾನವಾಗುತ್ತದೆ.

ಮಾಹಿತಿ ಎಷ್ಟು ಒಳ್ಳೆಯದು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದ ವಿವೇಕ ನಮ್ಮ ಮೇಲೆ ಇದೆ. ಕನ್ನಡಿಗರಿಗೆ ಭಾಷೆಯ ಮೇಲೆ ಅಭಿಮಾನ ಬೆಳೆಯಬೇಕು. ಇದನ್ನು ನಾವು ಇಂಗ್ಲಿಷ್‌ನವರಿಂದ ಕಲಿಯಬೇಕು. ಜಗತ್ತಿನ 30 ಸುಂದರ ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ಸಂಶೋಧನೆ ಹೇಳುತ್ತದೆ. ಇದನ್ನು ಅರ್ಥ ಮಾಡಿಕೊಂಡ ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

‘ದೊಡ್ಡ ಪರಂಪರೆಯ ವಾರಸುದಾರರು ನಾವು. ನೆಲದ ಹಾಡು ಹಾಡುವ ಕಲಾವಿದ ಇಲ್ಲಿ ಇದ್ದಾನೆ. ಕನ್ನಡ ಜಗತ್ತನ್ನು ಗ್ರಹಿಸುವ ವಿಧಾನವನ್ನು ಕಲಿಸುತ್ತದೆ. ಜಿಲ್ಲೆಯಲ್ಲಿ ಅಚ್ಚಕನ್ನಡವಿದೆ. ಜಿಲ್ಲೆಯ ಜನರು ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.