ADVERTISEMENT

ಮೇಲುಕೋಟೆಗೆ ಹರಿದುಬಂದ ಭಕ್ತಸಾಗರ

ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ಧನುರ್ಮಾಸ, ಹೊಸ ವರ್ಷದ ವೈಭವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 10:39 IST
Last Updated 2 ಜನವರಿ 2017, 10:39 IST

ಮೇಲುಕೋಟೆ: ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ಭಾನುವಾರ ‘ವೈರಮುಡಿ ಜಾತ್ರೆ’ಯ ನೆನಪಾಯಿತು. ಹೊಸ ವರ್ಷದ ಮೊದಲ ದಿನ,  ಧನುರ್ಮಾಸದ ಅಂಗವಾಗಿ ಲಕ್ಷಕ್ಕೂ ಹೆಚ್ಚು ಭಕ್ತರು ಸ್ವಾಮಿಯ ದರ್ಶನ ಪಡೆದರು.

ಪುಷ್ಪಾಹಾರಗಳಿಂದ ಕಂಗೊಳಿಸಿದ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಸುಡುಬಿಸಿಲಲ್ಲೂ ನಡೆದು ಬಂದ ಜನ, ಸಾಲಿನಲ್ಲಿ ನಿಂತರು. ಜನ ಹಾಗೂ ವಾಹನ ಸಂದಣಿ ಹೆಚ್ಚಿದ್ದರಿಂದ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಟ್ಟರು. ಇನ್ನೊಂದೆಡೆ, ಪುಳಿಯೋಗರೆ ಮಾರಾಟಗಾರರಿಗೆ ಭರ್ಜರಿ ವ್ಯಾಪಾರವಾಯಿತು. ಭಕ್ತರು ‘ಗೋವಿಂದ, ಗೋವಿಂದ’ ಎಂದು ಜಯಘೋಷ ಮೊಳಗಿಸುತ್ತಾ ದರ್ಶನ ಪಡೆದರು.

ಧನುರ್ಮಾಸದ ಪ್ರಯುಕ್ತ ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಚೆಲುವನಾರಾಯಣನಿಗೆ ವಿಶೇಷ ಅಲಂಕಾರ ನೆರವೇರಿಸಿ ತಿರುಪ್ಪಾವೈ ಪಾರಾಯಣದೊಂದಿಗೆ ಪೂಜೆ ಮಾಡಿ, ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು.

ಕಲ್ಯಾಣಿ, ದೇಗುಲದ ಪ್ರಮುಖ ಬೀದಿಗಳು ಭಕ್ತರಿಂದ ತುಂಬಿ­ಹೋಗಿದ್ದವು. ಪ್ರಾಥಮಿಕ ಆರೋಗ್ಯಕೇಂದ್ರ ಮುಂಭಾಗದ ಪಾರ್ಕಿಂಗ್ ಬಹುಬೇಗ ತುಂಬಿದ ಕಾರಣ, ಆಧಿಚುಂಚನಗಿರಿ ಮೈದಾನ, ಬಾಲಕರು ಮತ್ತು ಯದು ಶೈಲಾ ಶಾಲೆ ಮೈದಾನ, ಜಾತ್ರೆಯಲ್ಲಿ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣಗಳ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಲಾಯತು.

ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದ ಭಕ್ತರ ವಾಹನಗಳಿಂದಾಗಿ ಎಲ್ಲಾ ಪಾರ್ಕಿಂಗ್ ಸ್ಥಳ ಭರ್ತಿಯಾದ ಕಾರಣ ವಿಧಿಯಿಲ್ಲದೆ, ರಸ್ತೆಯ ಎರಡೂ ಬದಿ ಹಾಗೂ ಕಣಿವೆ ಬಳಿಯ ಹೊಲಗಳಲ್ಲೂ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಯಿತು.

ದೇವಾಲಯದ ಸತೀಶ್, ಶ್ರೀರಂಗರಾಜನ್, ಹೇಮಂತ್, ಬಾಲಕೃಷ್ಣ ಮತ್ತಿತರರು ಪೊಲೀಸರು ಮತ್ತು ಆರ್.ಎಸ್.ಎಸ್ ಕಾರ್ಯಕರ್ತರ ಸಹಕಾರದಲ್ಲಿ ಸುಗಮ ದೇವರದರ್ಶನಕ್ಕೆ ಶ್ರಮಿಸಿದರು. ಕಾರ್ಯಕರ್ತರಿಗೆ ಶ್ರೀನಿವಾಸನರಸಿಂಹನ್ ಉಚಿತ ಊಟ, ತಿಂಡಿ ವ್ಯವಸ್ಥೆ ಮಾಡಿದ್ದರು.

ಪರದಾಡಿದ ಪೊಲೀಸರು: ಕೆ.ಆರ್.­ಪೇಟೆಯಲ್ಲಿ ಜೆಡಿಎಸ್‌ ಕಾರ್ಯಕರ್ತನ ಕೊಲೆ ನಡೆದ ಹಿನ್ನೆಲೆಯಲ್ಲಿ ಬಹುಪಾಲು ಪೊಲೀಸರನ್ನು ಅಲ್ಲಿಗೆ ನಿಯೋಜಿಸಲಾಗಿತ್ತು. ಉಳಿದ ಏಳೆಂಟು ಮಂದಿ ಸಂಚಾರ ನಿಯಂತ್ರಣ ಮಾಡಲು ಹರಸಾಹಸ ಪಡಬೇಕಾಯಿತು. ಕನಿಷ್ಠ  ದೇವಾಲಯಗಳಲ್ಲಿ ಸರತಿ ಸಾಲು ನಿರ್ವಹಿಸಲೂ ಪೊಲೀಸರು ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.