ADVERTISEMENT

ಮೇವು ವಿತರಣೆಗೆ ತುರ್ತು ಕ್ರಮ: ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 6:10 IST
Last Updated 12 ಏಪ್ರಿಲ್ 2017, 6:10 IST

ನಾಗಮಂಗಲ:  ತಾಲ್ಲೂಕಿನಲ್ಲಿ ಬರದ ಛಾಯೆ ತೀವ್ರವಾಗಿದ್ದು, ಜಾನುವಾರು ಗಳಿಗೆ ಅಗತ್ಯವಾಗಿರುವ ಮೇವನ್ನು ವಿತರಿಸಲು ತಾಲ್ಲೂಕು ಆಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಕೃಷ್ಣೇಗೌಡ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಈವರೆಗೆ 24 ಟನ್ ಮೇವು ಸಂಗ್ರಹವಾಗಿದ್ದು, ಅದನ್ನು ವಿತರಿಸುವಲ್ಲಿ ತಹಶೀಲ್ದಾರ್ ವಿಫಲವಾಗಿದ್ದಾರೆ. ಇದರಿಂದ ಜನ, ಜಾನುವಾರುಗಳಿಗೆ ತೀವ್ರ ತೊಂದರೆ ಉಂಟಾಗಿದ್ದು, ಮೂಕ ಪ್ರಾಣಿಗಳ ವೇದನೆ ಎಲ್ಲರಿಗೂ ತಟ್ಟುತ್ತದೆ. ಅಧಿಕಾರಿಗಳು ಸಬೂಬು ಹೇಳದೆ ಮೇವು ವಿತರಿಸಬೇಕು ಎಂದು ತಾಲ್ಲೂಕು ಪಶುಸಂಗೋಪನ ಸಹಾಯಕ ನಿರ್ದೇಶಕ ಡಾ.ಮೂರ್ತಿ ಅವರಿಗೆ ಆದೇಶಿಸಿದರು.

ಇದಕ್ಕೆ ಉತ್ತರಿಸಿದ ಮೂರ್ತಿ ಅವರು, ‘ನನ್ನೆಲ್ಲ ಕರ್ತವ್ಯವನ್ನು ನಾನು ಮಾಡಿದ್ದೇನೆ. ಮೇವು ವಿತರಿಸಬೇಕಾದದ್ದು ತಹಶೀಲ್ದಾರ್ ವ್ಯಾಪ್ತಿಗೆ ಬರುತ್ತದೆ’ ಎಂದರು.ತಮ್ಮ ಇಲಾಖೆಯ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು, ‘ಎಲ್ಲ ಶಾಲೆಗಳಲ್ಲಿ ಬೇಸಿಗೆಯ ರಜೆ ದಿನಗಳಲ್ಲೂ ಬಿಸಿಯೂಟ ಇರಲಿದೆ. ಪರ ಊರುಗಳಿಂದ ಬರುವ ಮಕ್ಕಳೂ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ADVERTISEMENT

ಮಕ್ಕಳ ದಾಖಲಾತಿಗೆ ಸಂಬಂಧಿಸಿದಂತೆ ಆಂದೋಲನ ಮತ್ತು ಸಮೀಕ್ಷೆ ನಡೆಸಲಾಗುವುದು, 150ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಬೇಸಿಗೆ ಸಂಭ್ರಮವನ್ನು ಆಯೋಜಿಸಲಾಗುವುದು ಇದರ ಪ್ರಯೋಜನವನ್ನು ಗ್ರಾಮೀಣ ಪ್ರದೇಶದ ಮಕ್ಕಳು ಪಡೆದುಕೊಳ್ಳಬೇಕು ಎಂದು ಹೇಳಿದರು.

ಶಿಶು ಅಭಿವೃದ್ಧಿ ಇಲಾಖೆ ನೀಡಿರುವ ಅನುದಾನದಲ್ಲಿ ಶೇ 92ರಷ್ಟನ್ನು ಬಳಸಿಕೊಳ್ಳಲಾಗಿದೆ ಎಂದು ಇಲಾಖೆಯ ನಿರ್ವಾಹಕಿ ರೂಪಾ ಸಭೆಗೆ ತಿಳಿಸಿದರು. ಉದ್ಯೋಗಿನಿ ಯೋಜನೆಯಡಿ ಫಲಾನುಭವಿಗಳಿಗೆ ಇನ್ನೂ ಸಾಲ ವಿತರಿಸದಿರುವ ರಾಷ್ಟ್ರೀಕೃತ ಬ್ಯಾಂಕ್ ವ್ಯವಸ್ಥಾಪಕರ ನಡೆಯನ್ನು ತೀವ್ರವಾಗಿ ಟೀಕಿಸಿದ ಅಧ್ಯಕ್ಷ ಆರ್.ಕೃಷ್ಣೇಗೌಡ, ಇದರಿಂದ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ತೊಂದರೆಯಾಗುತ್ತದೆ ಎಂದರು.

ತೋಟಗಾರಿಕೆ, ಕೃಷಿ, ಆರೋಗ್ಯ, ಸೆಸ್ಕ್‌, ಸಮಾಜ ಕಲ್ಯಾಣ, ಮೀನುಗಾರಿಕೆ, ಕುಡಿಯುವ ನೀರು, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಾದ ಶಾಂತಾ, ಚಿಕ್ಕಪುಟ್ಟೇಗೌಡ, ಶ್ರೀನಿವಾಸ ಮೂರ್ತಿ, ಮರಿಸ್ವಾಮಿ, ಜಯಪ್ರಕಾಶ, ಪುಷ್ಪಾವತಿ, ರವಿಕುಮಾರ್, ಶ್ರೀನಿವಾಸಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.