ADVERTISEMENT

ಮೈಷುಗರ್‌ ಕಾರ್ಖಾನೆ ಉಳಿಸಲು ಸರ್ಕಾರ ಬದ್ಧ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:03 IST
Last Updated 15 ಏಪ್ರಿಲ್ 2017, 5:03 IST

ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆ ರೈತರ ಜೀವನಾಡಿ ಆಗಿದೆ. ಕಾರ್ಖಾನೆಯ ವಿಷಯದಲ್ಲಿ ಕಳೆದ ಎರಡು ವರ್ಷದಿಂದ ಆದ ತೊಂದರೆ ಇನ್ನು ಮುಂದೆ ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಭರವಸೆ ನೀಡಿದರು.

ನಗರದ ಮೈಷುಗರ್‌ ಕಾರ್ಖಾನೆಯ ಸಹ ವಿದ್ಯುತ್‌ ಘಟಕದ ಪ್ರಾಯೋಗಿಕ ಪುನರಾರಂಭಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.‘ಕಾರ್ಖಾನೆ ಉಳಿಸುವುದು ನಮ್ಮ ಮರ್ಯಾದೆ ಪ್ರಶ್ನೆ ಆಗಿದೆ. ಹಾಗಾಗಿ ಎಲ್ಲರೂ ಒಗ್ಗೂಡಿ ಕಾರ್ಖಾನೆ ಉಳಿವಿಗೆ ಶ್ರಮ ವಹಿಸುವುದು ಅಗತ್ಯ ಎಂದು ಹೇಳಿದರು.

ಕಾರ್ಖಾನೆಯ ‘ಎ’ ಮಿಲ್ ಆಧುನೀಕರಣ ಹಾಗೂ ಸಹ ವಿದ್ಯುತ್ ಘಟಕದ ಬಾಯ್ಲರ್‌ಗಳ ದುರಸ್ತಿ ಕಾರ್ಯ ಮುಗಿದಿದ್ದು, ಪ್ರಾಯೋಗಿಕ ಚಾಲನೆ ನೀಡಲಾಗಿದೆ. ಪ್ರತಿನಿತ್ಯ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯ  ಹೊಂದಿದೆ. ಜೂನ್ ಅಂತ್ಯದೊಳಗೆ ಕಬ್ಬು ಅರೆಯುವಿಕೆಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 20 ಕೋಟಿ ಬಿಡುಗಡೆ ಮಾಡಿರುವುದರಿಂದ ಕಾರ್ಖಾನೆ ಉಳಿದಿದೆ. ಶಾಸಕರೂ ಸೇರಿದಂತೆ ಎಲ್ಲರೂ ಕಾರ್ಖಾನೆ ಉಳಿಸಿ
ಕೊಳ್ಳಲು ಬದ್ಧರಾಗಿದ್ದೇವೆ. ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಬ್ಬು ಸರಬರಾಜು ಮಾಡುವ ರೈತರಿಗೆ ಒಂದೇ ದಿನದಲ್ಲಿ ಶೇ 70 ರಷ್ಟು ಹಣ ಬಿಡುಗಡೆ ಮಾಡಲಾಗುವುದು. ಉಳಿದ ಹಣವನ್ನು 15 ದಿನದಲ್ಲಿ ನೀಡಲಾಗುವುದು ಎಂದರು.
ಪೂಜೆ: ಸಚಿವ ಎಂ. ಕೃಷ್ಣಪ್ಪ ಹಾಗೂ ಶಾಸಕ ಅಂಬರೀಷ್ ಅವರು ಕಾರ್ಖಾನೆಯಲ್ಲಿ ಪೂಜೆ ಸಲ್ಲಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಆತ್ಮಾನಂದ, ಎಪಿಎಂಸಿ ನಿರ್ದೇಶಕ ಬೇಲೂರು ಸೋಮಶೇಖರ್, ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಮುಖ್ಯ ಆಡಳಿತಾಧಿಕಾರಿ ದೇವರಾಜು, ರೈತ ಮುಖಂಡರಾದ ಶಂಭೂನಹಳ್ಳಿ ಸುರೇಶ್, ಹನಿಯಂಬಾಡಿ ನಾಗರಾಜು, ಸುಧೀರ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.