ADVERTISEMENT

ಯಶಸ್ಸಿನ ಉತ್ತುಂಗ ಕಂಡ ‘ಮಂಡ್ಯದ ಗಂಡು’

ಚುನಾವಣೆ ರಾಜಕಾರಣಕ್ಕೆ ಗುಡ್‌ಬೈ ಹೇಳಿದ ರೆಬಲ್‌ ಸ್ಟಾರ್‌ ಅಂಬರೀಷ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 11:14 IST
Last Updated 25 ಏಪ್ರಿಲ್ 2018, 11:14 IST
ಅಂಬರೀಷ್‌
ಅಂಬರೀಷ್‌   

ಮಂಡ್ಯ: ಜಿಲ್ಲೆಯ ರಾಜಕಾರಣದಲ್ಲಿ ಅಬ್ಬರದ ಮೂಲಕ ಗುರುತಿಸಿಕೊಳ್ಳುತ್ತಿದ್ದ ‘ಮಂಡ್ಯದ ಗಂಡು’ ಅಂಬರೀಷ್‌ ಈಗ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಅವರು ನಡೆದು ಬಂದ ಹಾದಿಯಲ್ಲಿ ಹಲವು ಯಶಸ್ಸಿನ ಹೆಜ್ಜೆಗುರುತುಗಳಿದ್ದು ಜಿಲ್ಲೆಯ ವರ್ಣರಂಜಿತ ನಾಯಕನಾಗಿ ರಾರಾಜಿಸಿದ್ದಾರೆ.

ಅವರು 1994ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಪದಾರ್ಪಣೆ ಮಾಡಿದರು. ಜೆಡಿಎಸ್‌ ಅಭ್ಯರ್ಥಿ ಎಸ್‌.ಎಂ.ಲಿಂಗಪ್ಪ ಅವರ ಎದುರು ಸೋಲುಂಡರು. ನಂತರ ಅವರ ಚಿತ್ತ ಮಂಡ್ಯ ಜಿಲ್ಲೆಯತ್ತ ಹರಿಯಿತು. ನಂತರ 1996 ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತಗೊಂಡಿದ್ದರು. ಆದರೆ ಜಿ.ಮಾದೇಗೌಡ ಅವರ ಜೊತೆಗಿನ ಭಿನ್ನಾಭಿಪ್ರಾಯದೊಂದಿಗೆ ಅವರಿಗೆ ಟಿಕೆಟ್‌ ಕೈತಪ್ಪಿತು. ಆ ಚುನಾವಣೆಯಲ್ಲಿ ಜೆಡಿಎಸ್‌ನ ಕೆ.ಆರ್‌.ಪೇಟೆ ಕೃಷ್ಣ ಗೆಲುವು ದಾಖಲಿಸಿದರು.

ಐತಿಹಾಸಿಕ ಗೆಲವು: ಮಾದೇಗೌಡರ ಜೊತೆಗಿನ ಭಿನ್ನಾಭಿಪ್ರಾಯದಿಂದ ಅಂಬರೀಷ್‌ 1998ರ ಲೋಕಸಭಾ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಇದು ಮಾದೇಗೌಡ ಹಾಗೂ ಅಂಬರೀಷ್‌ ನಡುವಿನ ಕಾಳಗವೂ ಆಗಿತ್ತು. ಗುರು–ಶಿಷ್ಯ ನಡುವಿನ ಸಮರ ಎಂದೇ ಬಣ್ಣಿಸಲಾಗಿತ್ತು. ಈ ಚುನಾವಣೆಯಲ್ಲಿ ಅಂಬರೀಷ್‌ 80 ಸಾವಿರ ಮತಗಳ ಅಂತರದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದರು. 1999ರಲ್ಲಿ ಘೋಷಣೆಯಾದ ಲೋಕಸಭಾ ಚುನಾ ವಣೆ ವೇಳೆಗೆ ಅಂಬರೀಷ್‌ ಹಾಗೂ ಮಾದೇ ಗೌಡ ಅವರು ರಾಜಿಯಾಗಿದ್ದರು. ಈ ಚುನಾವಣೆಯಲ್ಲಿ ಅಂಬರೀಷ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಜೆಡಿಎಸ್‌ನಿಂದ ಕೆ.ಆರ್‌.ಪೇಟೆ ಕೃಷ್ಣ ಸ್ಪರ್ಧಿಸಿದ್ದರು. ಈ ಚುನಾವಣೆಯ ಗೆಲುವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಅವರು 1.62 ಲಕ್ಷ ಮತಗಳ ಅಂತರದಿಂದ ಗೆದ್ದರು.

ADVERTISEMENT

ಹ್ಯಾಟ್ರಿಕ್‌ ಗೆಲುವು: ನಂತರ 2004ರ ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿ ಸಂಸತ್‌ ಸದಸ್ಯರಾಗಿ ಆಯ್ಕೆಯಾದರು. ಆ ಮೂಲಕ ಅವರು ಯುಪಿಎ ಸರ್ಕಾರದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವನಾಗುವ ಅವಕಾಶ ಪಡೆದರು. ರಾಷ್ಟ್ರ ರಾಜಕಾರಣಕ್ಕೆ ತೆರಳಿದ ಅಂಬರೀಷ್‌ ಸಂಸತ್‌ ಅಧಿವೇಶನದಲ್ಲಿ ಪಾಲ್ಗೊಳ್ಳದೆ ಕೆಟ್ಟ ಹೆಸರು ಪಡೆದರು. ಸಂಸತ್‌ನಲ್ಲಿ ಒಂದೂ ಮಾತನಾಡದ ಸಚಿವ ಎಂಬ ಕಾರಣಕ್ಕೂ ಸುದ್ದಿಯಾದರು. ನಂತರ ಅವರು ಕಾವೇರಿ ಹೋರಾಟದ ನೆಪದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಶ್ರೀರಂಗಪಟ್ಟಣದಲ್ಲಿ ಸೋಲು: ರಾಜ್ಯ ರಾಜಕಾರಣಕ್ಕೆ ಬರುವ ಹಂಬಲದಲ್ಲಿ ಅವರು 2008ರಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು. ಜೆಡಿಎಸ್‌ ಅಭ್ಯರ್ಥಿಯಾಗಿದ್ದ ರಮೇಶ್‌ಬಂಡಿಸಿದ್ದೇಗೌಡ ಎದುರು ಅವರು ಪರಾಭವಗೊಂಡರು. ನಂತರ 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ನಂತರ 2013ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದರು. ಕ್ಷೇತ್ರಕ್ಕೆ ಬಾರದೆ ಆಪ್ತರಿಗೆ ಆಡಳಿತ ವಹಿಸಿದ ಆರೋಪದಲ್ಲಿ ಅವರು ಸುದ್ದಿಯಾದರು. 2014 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಮ್ಯಾ ಪರ ಪ್ರಚಾರ ನಡೆಸದೆ ಗಮನ ಸೆಳೆದರು.

ಸೋಲಿಗಿಂತ ಗೆಲುವಿನಿಂದಲೇ ಕಂಗೊಳಿಸಿರುವ ಅಂಬರೀಷ್‌ ಮೂರು ಬಾರಿ ಸಂಸತ್‌ ಸದಸ್ಯರಾಗಿ ಗೆಲುವು ದಾಖಲಿಸಿದ್ದಾರೆ. ಕೇಂದ್ರ ಸಚಿವರಾಗಿ ಅಧಿಕಾರ ಅನುಭವಿಸಿದ್ದಾರೆ. ‘ಮಂಡ್ಯ ಜನರು ನನಗೆ ಎಲ್ಲವನ್ನೂ ಕೊಟ್ಟಿದ್ದಾರೆ’ ಎಂದು ಸದಾ ನೆನಪು ಮಾಡಿಕೊಳ್ಳುವ ಅವರು ಈ ಚುನಾವಣೆಯಲ್ಲಿ ನೆನಪಾಗಿ ಕಾಡಲಿದ್ದಾರೆ.

ಅಂಬರೀಷ್‌ ಹೆಜ್ಜೆ ಗುರುತು

1994: ರಾಮನಗರ ವಿಧಾಸಭೆ ಚುನಾವಣೆಯಲ್ಲಿ ಸ್ಪರ್ಧೆ, ಸೋಲು

1998: ಮಂಡ್ಯ ಲೋಕಸಭೆಗೆ ಸ್ಪರ್ಧೆ, ಗೆಲುವು

1999: ಮಂಡ್ಯ ಲೋಕಸಭೆಗೆ ಸ್ಪರ್ಧೆ, ಗೆಲುವು

2004: ಮಂಡ್ಯ ಲೋಕಸಭೆಗೆ ಸ್ಪರ್ಧೆ, ಗೆಲುವು

2008: ಶ್ರೀರಂಗಪಟ್ಟಣ ವಿಧಾನಸಭೆಗೆ ಸ್ಪರ್ಧೆ, ಸೋಲು

2009: ಮಂಡ್ಯ ಲೋಕಸಭೆಗೆ ಸ್ಪರ್ಧೆ, ಸೋಲು

2013: ಮಂಡ್ಯ ವಿಧಾನಸಭೆಗೆ ಸ್ಪರ್ದೆ. ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.