ADVERTISEMENT

ಯೂರಿಯಾ ಕೊರತೆ: ರೈತರ ದೂರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 9:26 IST
Last Updated 19 ಸೆಪ್ಟೆಂಬರ್ 2014, 9:26 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳದ ವ್ಯವಸಾಯ ಸೇವಾ ಸಹಕಾರ ಕೇಂದ್ರದಲ್ಲಿ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ ಎಂದು ಗ್ರಾಮದ ರೈತರು ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಗುರುವಾರ ದೂರು ನೀಡಿದರು.

ಗ್ರಾಮದಲ್ಲಿ ಕಳೆದ 15 ದಿನಗಳಿಂದ ಸರಿಯಾಗಿ ಯೂರಿಯಾ ರಸಗೊಬ್ಬರ ಸಿಗುತ್ತಿಲ್ಲ. ಭತ್ತದ ಬೆಳೆಗೆ ಮೇಲುಗೊಬ್ಬರವಾಗಿ ಈಗ ಯೂರಿಯಾ ಕೊಡಲು ಸಕಾಲವಾಗಿದೆ. ಆದರೆ, ಸ್ಥಳೀಯ ವ್ಯವಸಾಯ ಸೇವಾ ಕೇಂದ್ರದಲ್ಲಿ ಯೂರಿಯಾ ಲಭ್ಯ ಇಲ್ಲದ ಕಾರಣ ರೈತರು ಖಾಸಗಿ ಅಂಗಡಿಗಳಲ್ಲಿ ಹೆಚ್ಚು ಬೆಲೆ ತೆತ್ತು ರಸಗೊಬ್ಬರ ಖರೀಸುತ್ತಿದ್ದಾರೆ. ಬೆಳಗೊಳ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಿಗೂ ಸರಿಯಾಗಿ ಯೂರಿಯಾ ಸಿಗುತ್ತಿಲ್ಲ ಎಂದು ವಿಷಕಂಠು, ಸುನಿಲ್‌ ಇತರರು ದೂರಿದರು.

ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ಸುರೇಶ್‌ ದೂರವಾಣಿ ಮೂಲಕ ಬೆಳಗೊಳ ವಿಎಸ್‌ಎಸ್‌ಎನ್‌ ಕಾರ್ಯದರ್ಶಿ ಹಾಗೂ ಅಧ್ಯಕ್ಷರನ್ನು ಸಂಪರ್ಕಿಸಿ ಯೂರಿಯಾ ರಸಗೊಬ್ಬರಕ್ಕೆ ಇರುವ ಬೇಡಿಕೆಯ ಪ್ರಸ್ತಾವವನ್ನು ತಕ್ಷಣ ಸಲ್ಲಿಸುವಂತೆ ಸೂಚಿಸಿದರು. ಮಂಡ್ಯ ಇಲ್ಲವೆ ಪಾಂಡವಪುರದಲ್ಲಿರುವ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಗೋದಾಮಿನಿಂದ ಯೂರಿಯಾ ತರಿಸಿಕೊಡುವುದಾಗಿ ತಿಳಿಸಿದರು. 24 ಗಂಟೆಗಳ ಒಳಗೆ ರಸಗೊಬ್ಬರ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.