ADVERTISEMENT

ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ನಿಲ್ಲಿಸಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 8:45 IST
Last Updated 22 ಜೂನ್ 2017, 8:45 IST
ಒಕ್ಕಣೆ ಕಣ ನಿರ್ಮಾಣ ಕಾಮಗಾರಿಗೆ ಸಂಸದ ಸಿ.ಎಸ್.ಪುಟ್ಟರಾಜು ಬುಧವಾರ ಭೂಮಿಪೂಜೆ ನೆರವೇರಿಸಿದರು
ಒಕ್ಕಣೆ ಕಣ ನಿರ್ಮಾಣ ಕಾಮಗಾರಿಗೆ ಸಂಸದ ಸಿ.ಎಸ್.ಪುಟ್ಟರಾಜು ಬುಧವಾರ ಭೂಮಿಪೂಜೆ ನೆರವೇರಿಸಿದರು   

ಪಾಂಡವಪುರ: ರೈತರು ಬೆಳೆದ ಫಸಲನ್ನು ರಸ್ತೆಗಳಲ್ಲಿ ಒಕ್ಕಣೆ ಮಾಡುವುದನ್ನು ನಿಲ್ಲಿಸಿ ಸರ್ಕಾರದ ಕಣಗಳಲ್ಲಿ ಬೆಳೆಯನ್ನು ಒಕ್ಕಣೆ ಮಾಡಬೇಕು ಎಂದು ಸಂಸದ ಸಿ.ಎಸ್.ಪುಟ್ಟರಾಜು ಹೇಳಿದರು.

ತಾಲ್ಲೂಕಿನ ಮಾಣಿಕ್ಯನಹಳ್ಳಿ ಮತ್ತು ಅಮೃತಿ ಗ್ರಾಮಗಳಲ್ಲಿ ಎಪಿಎಂಸಿ ವತಿಯಿಂದ  ₹14.50ಲಕ್ಷ ಅಂದಾಜು ವೆಚ್ಚದ ಒಕ್ಕಣೆ ಕಣ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರೈತರು ಈ ಹಿಂದೆ ತಮ್ಮ ಜಮೀನಿನಲ್ಲಿಯೇ ಒಕ್ಕಣೆ ಕಣ ಮಾಡುತ್ತಿದ್ದರು. ಇದರಿಂದ ಶುದ್ಧವಾದ  ಧಾನ್ಯ ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ರೈತರು ಇಂದು ರಸ್ತೆಯಲ್ಲಿಯೇ ಧಾನ್ಯಗಳನ್ನು ಒಕ್ಕಣೆ ಮಾಡುತ್ತಿರುವುದರಿಂದ ಅಶುದ್ಧವಾಗುತ್ತಿರುವುದಲ್ಲದೆ ರಸ್ತೆ ಸಂಚಾರಕ್ಕೆ ತುಂಬ ಅಡ್ಡಿಯಾಗಿದೆ.

ADVERTISEMENT

ಈ ಹಿನ್ನೆಲೆಯಲ್ಲಿ ಎಪಿಎಂಎಸಿ ವತಿಯಿಂದ ಒಕ್ಕಣೆ ಕಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರೈತರು ಇದನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಮನವಿ ಮಾಡಿದರು.

ಕೃಷಿಯಲ್ಲಿನ ಬಿಕ್ಕಟ್ಟಿನಿಂದಾಗಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಸರ್ಕಾರವು ರೈತರಿಗೆ ಅನುಕೂಲವಾಗುವಂತಹ ಹೊಸ ಕೃಷಿ ನೀತಿಗಳನ್ನು ಜಾರಿಗೊಳಿಸಬೇಕಾಗಿದೆ. ಕೃಷಿಗೆ ವೈಜ್ಞಾನಿಕ ಬೆಲೆ ನಿಗಧಿಗೊಳಿಸುವ ಅಗತ್ಯವಿದೆ ಎಂದರು.

ಎಪಿಎಂಎಸಿ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ, ರೈತರ ಒಕ್ಕಣೆ ಕೆಲಸಗಳಿಗೆ ಅನುಕೂಲ ಮಾಡಿಕೊಡಲು ಎಪಿಎಂಸಿ ವತಿಯಿಂದ ಸುಮಾರು ₹42ಲಕ್ಷ ವೆಚ್ಚದಲ್ಲಿ 8 ಒಕ್ಕಣೆ ಕಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಎಪಿಎಂಸಿ ಉಪಾಧ್ಯಕ್ಷ ಎಂ.ಎಸ್.ಜಗದೀಶ್‌,  ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪುಟ್ಟೇಗೌಡ, ಟಿಎಪಿಸಿಎಂಎಸ್‌ ಅಧ್ಯಕ್ಷ ಹಾರೋಹಳ್ಳಿ ನಂಜೇಗೌಡ ನಿರ್ದೇಶಕ ಹಾರೋಹಳ್ಳಿ ಸತೀಶ್‌, ಮುಖಂಡರಾದ ಅಶ್ವಥ್‌ಕುಮಾರ್‌ಗೌಡ, ಕಾಡೇನಹಳ್ಳಿ ರಾಮಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.