ADVERTISEMENT

ರಾಷ್ಟ್ರಾಭಿಮಾನ ಮೂಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 8:41 IST
Last Updated 22 ಜೂನ್ 2017, 8:41 IST

ಕಿಕ್ಕೇರಿ: ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಿ ವಸ್ತುಗಳನ್ನು ಬಳಸಲು ಆಂದೋಲನ ಸಾರಿದ ಏಕೈಕ ಹೋರಾಟಗಾರ ಬಿಪಿನ್ ಚಂದ್ರಪಾಲ್ ಎಂದು ರಾಜ್ಯ ಭ್ರಷ್ಟಾಚಾರ ವಿರೋಧಿ ರಂಗದ ರಾಜ್ಯ ಕಾರ್ಯದರ್ಶಿ ಮಾದಾಪುರ ಸುಬ್ಬಣ್ಣ ತಿಳಿಸಿದರು. 

ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಸ್ಪಂದನ ಪೌಂಡೇಷನ್, ಕೆ.ಎಸ್. ನರಸಿಂಹಸ್ವಾಮಿ ಸಾಂಸ್ಕೃತಿಕ ಪ್ರತಿಷ್ಟಾನ ಶನಿವಾರ ಹಮ್ಮಿಕೊಂಡಿದ್ದ 'ಬಿಪಿನ್ ಚಂದ್ರಪಾಲ್' ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವರಾಜ್ಯದ ಪರಿಕಲ್ಪನೆ ಬೀಜವನ್ನು ಬಿತ್ತಿ ತಿಲಕರಿಂದ ಇಡೀ ದೇಶಕ್ಕೆ ಪಸರಿಸಿದರು. ಪತ್ರಕರ್ತರಾಗಿ, ಸಾಮಾಜಿಕ ಕಳಕಳಿಯನ್ನು ಮೈಗೂಢಿಸಿಕೊಂಡು ಎಲ್ಲವನ್ನು ತೊರೆದು ನಾಡಿಗಾಗಿ ಪ್ರಾಣತೆತ್ತ ಮಹಾನೀಯನ ಸ್ಮರಣೆ ಇಂದಿನ ಪೀಳಿಗೆ ಮರೆತಂತಿದೆ. ಇವರ ಆದರ್ಶ, ಜೀವನ ಚರಿತ್ರೆಯನ್ನು ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಬೇಕಿದೆ.

ADVERTISEMENT

ಲಾಲಾ ಲಜಪತರಾಯ್, ಬಾಲಗಂಗಾಧರ ತಿಲಕ್, ಚಂದ್ರಪಾಲ್ ಸ್ವಾತಂತ್ರ್ಯ ಸಂಗ್ರಾಮದ ತ್ರಿವಳಿಗಳಾಗಿದ್ದು, ದೇಶಕ್ಕಾಗಿ ಪ್ರಾಣತೆತ್ತ ಧೀಮಂತರಿಗೆ ಕನಿಷ್ಠ ಗೌರವವನ್ನು ತೋರಬೇಕಿದ್ದಲ್ಲಿ ಮೊದಲು ರಾಷ್ಟ್ರಾಭಿಮಾನ, ಸ್ವಾಭಿಮಾನ ಮೂಡಿಸಿಕೊಳ್ಳಬೇಕು ಎಂದು ನುಡಿದರು.

ಕರ್ನಾಟಕ ರಾಜ್ಯ ಸುಗಮ ಸಂಗೀತ ಪರಿಷತ್ ರಾಜ್ಯಾಧ್ಯಕ್ಷ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಎಳೆಯ ಮನಸ್ಸುಗಳಲ್ಲಿ ನಾಡಿಗೆ ಪ್ರಾಣತೆತ್ತ ಮಹನೀಯರ ಆತ್ಮ ಚರಿತ್ರೆಯನ್ನು ತಿಳಿಸಲು ಮನೆ, ಮನಗಳಲ್ಲಿ ಒಂದಾಗಬೇಕಿದೆ. ಶಾಲಾ ಕಾಲೇಜುಗಳಲ್ಲಿ ಮಹನೀಯರ ಚರಿತ್ರೆಯನ್ನು ಗಾಯನದ ಮೂಲಕ ತಿಳಿಸಲು ಬಯಕೆ ಇದೆ.

ಮಕ್ಕಳಿಗೆ ಕ್ರಾಂತಿಗೀತೆಗಳ ಮೂಲಕ ನಾಡಿನ ಇತಿಹಾಸ ತಿಳಿಸಿದ್ದಲ್ಲಿ ಸಮಾಜ ಘಾತುಕ ಶಕ್ತಿಗಳು ಧಮನವಾಗಲಿದೆ. ಅಹಿತಕರ ಘಟನೆಗಳು ಉಪಶಮನವಾಗಲಿದೆ ಎಂದು ಹೇಳಿದರು. ಗಾಯಕರು ಮಕ್ಕಳೊಂದಿಗೆ ಕ್ರಾಂತಿಗೀತೆಗಳನ್ನು ಹಾಡಿ ದೇಶಭಕ್ತಿಯನ್ನು ಹಿಮ್ಮಡಿಗೊಳಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್, ರಮೇಶ್, ಚಂದ್ರು, ಶಿಕ್ಷಕ ನಾಗೇಂದ್ರ, ಅರ್ಚಕ ರಂಗರಾಜು, ಸ್ಪಂದನ ಟ್ರಸ್ಟಿ ತ್ರಿವೇಣಿ, ಹೇಮ, ಯಶೋಧ ಇದ್ದರು. ಷ್ಮೆ ಇಲಾಖೆಯ ಉಪ ನಿರ್ದೇಶಕ ಮಾದೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.