ADVERTISEMENT

ರಾಸಾಯನಿಕ ಗೊಬ್ಬರ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 6:32 IST
Last Updated 12 ಜನವರಿ 2017, 6:32 IST

ಕೆ.ಆರ್.ಪೇಟೆ: ಮನುಷ್ಯಕುಲದ ಉಳಿವಿಗಾಗಿ ರಾಸಾಯನಿಕ ಗೊಬ್ಬರ ಬಳಕೆಯನ್ನು ನಿಷೇಧಿಸಿ, ಸಾವಯವ ಕೃಷಿ ಪದ್ಧತಿಯನ್ನು ಕಡ್ಡಾಯಗೊಳಿಸಬೇಕು ಎಂದು ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿಜಯರಾಂ ಹೇಳಿದರು.

ಪಟ್ಟಣದ ಎಸ್.ಎಂ.ಲಿಂಗಪ್ಪ ಸಮುದಾಯ ಭವನದಲ್ಲಿ  ಬುಧವಾರ ಆರಂಭಿಸಲಾದ ಕೃಷ್ಣರಾಜಪೇಟೆ ತಾಲ್ಲೂಕು ನೈಸರ್ಗಿಕ ಕೃಷಿ ಉತ್ಪಾದಕರ ಸಹಕಾರ ಸಂಘದ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಶೇ 80ರಷ್ಟು ದೇಶಗಳು ರಾಸಾಯನಿಕ ಗೊಬ್ಬರ ನಿಷೇಧಿಸಿ   ಸಾವಯವ ಗೊಬ್ಬರ ಪದ್ಧತಿಯನ್ನು ಜಾರಿಗೆ ತಂದಿವೆ.  ರಾಸಾಯನಿಕ ಗೊಬ್ಬರವು ಮಣ್ಣಿನ ಹಾಗೂ ನಮ್ಮ ಆರೋಗ್ಯವನ್ನೂ ಹಾಳು ಮಾಡುತ್ತದೆ. ಆದ್ದರಿಂದ ಕೇಂದ್ರಸರ್ಕಾರ  ರಾಸಾಯನಿಕ ಗೊಬ್ಬರ ಬಳಕೆಯನ್ನು ಸಂಪೂರ್ಣ ನಿಷೇಧ ಮಾಡಬೇಕು. ಸಾವಯವ ಬೇಸಾಯ, ನೈಸರ್ಗಿಕ ಕ ೃಷಿ ಪದ್ಧತಿ, ಪಾಳೇಕಾರ್ ಮತ್ತು ಶ್ರೀ ಪದ್ಧತಿಯನ್ನು ಅಭಿವೃದ್ಧಿ ಪಡಿಸಲು ಸಮರೋಪಾದಿಯಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದರು.

ರೈತರು ಬೆಳೆದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಪೂರಕ ಮಾರುಕಟ್ಟೆ ವ್ಯವಸ್ಥೆಯನ್ನು ಯಾವುದೇ ದಲ್ಲಾಳಿಗಳ ಹಾವಳಿಯಿಲ್ಲದೆ ಕಲ್ಪಿಸಿದರೆ ರೈತನು ಕೃಷಿಯಿಂದ ವಿಮುಖನಾಗದೇ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು  ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಮುದುಗೆರೆ ರಾಜೇಗೌಡ ಹೇಳಿದರು. 
 
ಸಂಘದ ಮುಖ್ಯ ಪ್ರವರ್ತಕ ಬೂಕನಕೆರೆ ನಾಗರಾಜು ಸಭೆಯ ಅಧ್ಯಕ್ಷತೆ ವಹಿಸಿದ್ದರು. ರೈತಸಂಘದ ರಾಜ್ಯ ಘಟಕ ಉಪಾಧ್ಯಕ್ಷ ಕೆ.ಆರ್.ಜಯರಾಂ, ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಮರುವನಹಳ್ಳಿ ಶಂಕರ್, ಕಾರ್ಯದರ್ಶಿ ನಾರಾಯಣಸ್ವಾಮಿ, ಸಿಂಧಘಟ್ಟ ಮುದ್ದುಕುಮಾರ್, ರಾಜಣ್ಣ,  ನೀತಿಮಂಗಲ ಮಹೇಶ್, ಪ್ರಗತಿಪರ ಕೃಷಿಕರಾದ ಕೆ.ಎಸ್.ಸೋಮಶೇಖರ್, ರೈತ ಮುಖಂಡರಾದ  ಕರೋಟಿ ತಮ್ಮಯ್ಯ, ಗೂಡೆಹೊಸಹಳ್ಳಿ ಜವರಾಯಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.