ADVERTISEMENT

ಲೂಟಿಕೋರರಿಗೆ ಜೈಲು ದಾರಿ ತೋರಿಸಿ

ಸಮಾಜ ಪರಿವರ್ತನ ಸಮುದಾಯದ ಸ್ಥಾಪಕ ಎಸ್‌.ಆರ್‌.ಹಿರೇಮಠ ಕರೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:33 IST
Last Updated 18 ಏಪ್ರಿಲ್ 2017, 6:33 IST
ಮಂಡ್ಯ: ‘ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿ ಬೀಗುತ್ತಿರುವ ಭ್ರಷ್ಟರಿಗೆ ಜೈಲಿನ ದಾರಿ ತೋರಿಸುವ ಮೂಲಕ ಸಂಪತ್ತನ್ನು ಉಳಿಸಿಕೊಳ್ಳಬೇಕು’ ಎಂದು ಸಮಾಜ ಪರಿವರ್ತನ ಸಮುದಾಯದ ಸ್ಥಾಪಕ ಎಸ್‌.ಆರ್‌.ಹಿರೇಮಠ ಸಲಹೆ ನೀಡಿದರು.
 
ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ವಿವಿಧ ಸಂಘಟನೆಗಳಿಂದ ಸೋಮವಾರ ನಡೆದ ‘ಜೆ.ಸಿ.ಬಿ.(ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಪಕ್ಷಗಳ ಲೂಟಿಕೋರರು ಹಾಗೂ ದುಷ್ಟ ರಾಜಕಾರಣದ ವಿರುದ್ಧ ಜನಪರ್ಯಾಯ ಕಟ್ಟೋಣ ಜಾಥಾ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
 
ಸಮಾಜವನ್ನು ಕ್ಯಾನ್ಸರ್‌ನಂತೆ ಭ್ರಷ್ಟಾಚಾರ ಬಾಧಿಸುತ್ತಿದೆ.  ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣ ವಿಪರೀತಗೊಂಡಿರುವುದರಿಂದ ಜನರು ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗದ ಪರಿಸರ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.
 
ರಾಜಕಾರಣದಲ್ಲಿ ಕೆಲವರಿಗೆ ಅಧಿಕಾರ ಸಿಕ್ಕಿದ ಮಾತ್ರಕ್ಕೆ ‘ಸ್ವರಾಜ್ಯ’ದ ಕನಸು ಕಾಣುವುದು ತಪ್ಪು. ಅದರಲ್ಲಿ ಬಹುತೇಕ ವ್ಯಕ್ತಿಗಳು ಸ್ವಾರ್ಥಕ್ಕಾಗಿ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಲು ಮುಂದಾಗುತ್ತಾರೆ. ಸಾಮಾನ್ಯ ಜನರ ಕೂಗು ಅವರಿಗೆ ಕೇಳಿಸುವುದಿಲ್ಲ. ಅಂತಹವರಿಗೆ ಜೈಲಿನ ದಾರಿ ತೋರಿಸಿ ಸಂಪತ್ತು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
 
ಜೆಸಿಬಿ (ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ) ಪಕ್ಷಗಳು ಸಮರ್ಥವಾಗಿ ಕೆಲಸ ನಿರ್ವಹಿಸುವಲ್ಲಿ ಸೋತಿವೆ. ಈ ಪಕ್ಷಗಳನ್ನು ತಿರಸ್ಕರಿಸಬೇಕು. ಜನರ ಕಷ್ಟಗಳಿಗೆ ಮಿಡಿಯಲು ಹುಟ್ಟಿಕೊಂಡಿರುವ ಜನಾಂದೋಲನಗಳ ಮಹಾಮೈತ್ರಿ ಮೂಲಕ ರಾಜಕೀಯ ಬದಲಾವಣೆ ತಂದು ಶಾಶ್ವತ ಅಭಿವೃದ್ಧಿ ನೀತಿ ಮಾಡಬೇಕು ಎಂದು ಸಲಹೆ ನೀಡಿದರು.
 
ಸಾಹಿತಿ ದೇವನೂರ ಮಹಾದೇವ ಮಾತನಾಡಿ, ಜನಾಂದೋಲನಗಳ ಮಹಾಮೈತ್ರಿಯು ಜನರ ಸಮಸ್ಯೆಗಳನ್ನು ಮೊದಲು ಅರಿತುಕೊಳ್ಳಬೇಕು. ನಗರಸಭೆ, ಪುರಸಭೆ, ಸ್ಥಳೀಯ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪಂಚಾಯಿತಿಗಳಲ್ಲಿನ ಸವಲತ್ತುಗಳು ಜನರಿಗೆ ಸಿಗುತ್ತಿವೆಯೇ ಎಂದು ತಿಳಿದುಕೊಳ್ಳಬೇಕು. ಸಿಗದಿದ್ದರೆ ಅದನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
 
ಕೃಷಿ, ಶಿಕ್ಷಣ, ವೈದ್ಯಕೀಯ ಸೇರಿದಂತೆ ಇತರ ಕ್ಷೇತ್ರಗಳನ್ನು ತಲುಪಿ ಅಲ್ಲಿನ ಪ್ರಯೋಜನಗಳು ಜನರಿಗೆ ಸಿಗುವ ಹಾಗೆ ಮಾಡಬೇಕು. ಆ ಮೂಲಕ ಶೇ 20 ರಷ್ಟು ಮತ ತೆಗೆದುಕೊಂಡು ವಿಧಾನಸಭಾ ಚುನಾವಣೆ ಗೆಲ್ಲಬಹುದು ಎಂದು ಅಭಿಪ್ರಾಯಪಟ್ಟರು.
 
ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್, ಮುಖಂಡರಾದ ರಾಘವೇಂದ್ರ ಕುಷ್ಟಗಿ, ಶಂಭೂನಹಳ್ಳಿ ಸುರೇಶ್‌, ನಂದಿನಿ ಜಯರಾಂ ಇದ್ದರು.
***
ಅಂಬಾನಿ, ಅದಾನಿ ಜೇಬಿಗೆ ಬಂತು ಸ್ವಾತಂತ್ರ್ಯ’
ಮಂಡ್ಯ: ‘ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಎಂದರೆ; ಅಂಬಾನಿ ಹಾಗೂ ಅದಾನಿ ಅವರ ಜೇಬಿಗೆ ಬಂತು ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ವಿವಿಧ ಸಂಘಟನೆಗಳಿಂದ ಸೋಮವಾರ ನಡೆದ ‘ಜೆ.ಸಿ.ಬಿ (ಜೆಡಿಎಸ್, ಕಾಂಗ್ರೆಸ್, ಬಿಜೆಪಿ) ಪಕ್ಷಗಳ ಲೂಟಿಕೋರರ ಹಾಗೂ ದುಷ್ಟ ರಾಜಕಾರಣದ ವಿರುದ್ಧ ಜನಪರ್ಯಾಯ ಕಟ್ಟೋಣ ಜಾಥಾ’ದಲ್ಲಿ ಅವರು ಮಾತನಾಡಿದರು.

47ರ ಸ್ವಾತಂತ್ರ್ಯವನ್ನು ಹಿಂದೆ ಟಾಟಾ– ಬಿರ್ಲಾ ಅವರ ಜೇಬಿಗೆ ಬಂತು ಎಂದು ಹೇಳಲಾಗುತ್ತಿತ್ತು. ಆದರೆ, ಇಂದು ಅದನ್ನು ತಿದ್ದುಪಡಿ ಮಾಡಬೇಕಿದೆ ಎಂದರು.

ಇಂದು ಹತ್ತು ಬಂಡವಾಳಶಾಹಿಗಳು ಸರ್ಕಾರ ನಡೆಸುತ್ತಿದ್ದಾರೆ. ಸಚಿವರು, ಮುಖ್ಯಮಂತ್ರಿ, ಪ್ರಧಾನಮಂತ್ರಿ ಸೇರಿದಂತೆ ಜನಪ್ರತಿನಿಧಿಗಳು ಮೌನವಾಗಿದ್ದಾರೆ ಎಂದು ಅವರು ಗುಡುಗಿದರು.

‘ಜನಪ್ರತಿನಿಧಿಗಳು ಬಂಡವಾಳಶಾಹಿಗಳ ಆಸ್ಥಾನದಲ್ಲಿ ನಾಯಿಗಳ ತರಹ ರಾಜಕಾರಣ ಮಾಡುತ್ತಿದ್ದಾರೆ. ಈ ಮಾತಿನಿಂದ ರಾಜಕಾರಣಿಗಳಿಗೆ ನೋವಾಗುತ್ತದೆ ಎಂದಾದರೆ, ಮೇಸ್ತ್ರಿಗಳ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು’ ಎಂದು ವ್ಯಂಗ್ಯವಾಡಿದರು.

ಸಾರ್ವಜನಿಕ ಸಂಪತ್ತನ್ನು ಬಂಡವಾಳಶಾಹಿಗಳು ಸಮಾಜಕ್ಕೆ ಬಿಟ್ಟುಕೊಡದೆ ಲೂಟಿ ಮಾಡುತ್ತಿದ್ದಾರೆ. ಆದ್ದರಿಂದ ನಾಡನ್ನು ಉಳಿಸಲು ಜನಾಂದೋಲನಗಳ ಮಹಾಮೈತ್ರಿ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.