ADVERTISEMENT

‘ವಿಡಿಯೊ ವೈರಲ್‌: ಅಪಪ್ರಚಾರಕ್ಕೆ ಯತ್ನ’

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 9:54 IST
Last Updated 12 ಏಪ್ರಿಲ್ 2018, 9:54 IST

ಮಂಡ್ಯ: ‘ತಾಲ್ಲೂಕಿನ ಶ್ರೀನಿವಾಸಪುರ ಗೇಟ್‌ ಬಳಿ ಬುಧವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ ರವಿಕುಮಾರ್‌, ವಿಜಿಯಮ್ಮ ಹಾಗೂ ಅವರ ಪುತ್ರ ರತನ್‌ಗೌಡ ಅವರ ಪರಿಚಯ ನನಗಿಲ್ಲ. ಆದರೆ ನನ್ನ ಹೆಸರು ಎಳೆದು ತಂದು ಅಪಪ್ರಚಾರ ಮಾಡಲಾಗುತ್ತಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ ಪ್ರಕರಣ ಬಯಲಿಗೆಳೆಯಬೇಕು’ ಎಂದು ಜೆಡಿಎಸ್‌ ಮುಖಂಡ ಎಂ.ಶ್ರೀನಿವಾಸ್‌ ಒತ್ತಾಯಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಒಂದೇ ಕುಟುಂಬದ ಈ ಮೂವರು ಆತ್ಮಹತ್ಯೆಗೆ ಯತ್ನಿಸುವ ಮೊದಲು, ತನ್ನ ಸಾವಿಗೆ ಎಂ.ಶ್ರೀನಿವಾಸ್‌ ಹಾಗೂ ಅವರ ಬೆಂಬಲಿಗರು ಕಾರಣ ಎಂದು ಹೇಳಿಕೆ ನೀಡಿರುವ ವಿಡಿಯೊ ವೈರಲ್‌ ಆಗಿದೆ. ನನಗೆ ರತನ್‌ಗೌಡರಾಗಲಿ, ಆತನ ತಂದೆ-ತಾಯಿಯಾಗಲಿ ಪರಿಚಯವಿಲ್ಲ. ಹೀಗಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ನನ್ನ ವಿರುದ್ಧ ಅಪಪ್ರಚಾರ ಮಾಡಲು ಕಿಡಿಗೇಡಿಗಳು ಯತ್ನಿಸುತ್ತಿದ್ದಾರೆ. ಈ ಕುರಿತು ಯಾವುದೇ ತನಿಖೆಗೂ ಸಿದ್ಧನಾಗಿದ್ದೇನೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು’ ಎಂದು ಕೋರಿದರು.

‘ನಾನು ಈ ಬಗ್ಗೆ ಪೊಲೀಸರಲ್ಲಿ ವಿಚಾರಿಸಿದೆ. ರತನ್‌ಗೌಡ ಹಾಗೂ ಪತ್ನಿಯ ನಡುವೆ ಮನಸ್ತಾಪವಿದ್ದು, ಈ ಬಗ್ಗೆ ಮಂಡ್ಯ ಗ್ರಾಮಾಂತರ ಹಾಗೂ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಮತ್ತೆ ಮನಸ್ತಾಪ ಉಂಟಾಗಿ ರತನ್‌ಗೌಡ ಮತ್ತು ಅವನ ತಂದೆ- ತಾಯಿ ವಿಷ ಸೇವನೆ ಮಾಡಿದ್ದಾರೆ. ರಾತ್ರಿ ಜಿಲ್ಲಾಸ್ಪತ್ರೆ ಬಳಿ ಕರೆ ತಂದಾಗ ಆತನಿಂದ ಕೆಲವರು ನನ್ನ ಹೆಸರು ಹೇಳಿಸಿ ಅಪಪ್ರಚಾರ ಮಾಡಿದ್ದಾರೆ. ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ’ ಎಂದು ಹೇಳಿದರು.

ADVERTISEMENT

‘ರತನ್‌ಗೌಡ ನನ್ನ ಬೆಂಬಲಿಗರ ಹೆಸರು ಹೇಳಿಲ್ಲ. ಕಾಂಗ್ರೆಸ್ ಮುಖಂಡ ಹನಕೆರೆ ಶಶಿಕುಮಾರ್ ಸೇರಿ ಒಟ್ಟು ಮೂವರ ವಿರುದ್ಧ ಹೇಳಿಕೆ ನೀಡಿದ್ದಾರೆ. ಪೊಲೀಸ್ ತನಿಖೆಯಿಂದ ಈ ಪ್ರಕರಣದ ಹಿಂದೆ ಇರುವ ಕಾಣದ ಕೈ ಯಾವುದು ಎಂಬ ಸತ್ಯ ಜನರಿಗೆ ಗೊತ್ತಾಗಬೇಕು. ನನ್ನ ಸಾರ್ವಜನಿಕ ಬದುಕಿನಲ್ಲಿ ಎಂದಿಗೂ ಮತ್ತೊಬ್ಬರ ಬದುಕಿನಲ್ಲಿ ಆಟವಾಡಿಲ್ಲ. ಪ್ರಸ್ತುತ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗುತ್ತಿರುವ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಕೆಲವರು ನಿಂತಿದ್ದಾರೆ. ತನಿಖೆಯಿಂದ ಅವರ ಬಣ್ಣ ಬಯಲಾಗಲಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಅಶ್ವತ್ಥ್, ಅಶೋಕ್, ರವಿ, ಚೆನ್ನಪ್ಪ, ಸಿದ್ದರಾಜು, ದೇವರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.