ADVERTISEMENT

ಸಕ್ಕರೆ ಕಾರ್ಖಾನೆಗಳಲ್ಲಿ ಬೆಲ್ಲ ಉತ್ಪಾದಿಸಲಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 6:52 IST
Last Updated 16 ಜುಲೈ 2017, 6:52 IST

ಭಾರತೀನಗರ: ಸಕ್ಕರೆ ಕಾರ್ಖಾನೆಗಳಲ್ಲಿ ಸಕ್ಕರೆ ಉತ್ಪಾದನೆ ಜತೆಗೆ ಬೆಲ್ಲ ಉತ್ಪತ್ತಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಕೊಯಮತ್ತೂರಿನ ಕಬ್ಬಿನ ಪ್ರಜನನ ಸಂಸ್ಥೆಯ ಪ್ರಧಾನ ವಿಜ್ಞಾನಿ ಭಾಸ್ಕರನ್ ಅಭಿಪ್ರಾಯಪಟ್ಟರು.

ಸಮೀಪದ ಹನುಮಂತನಗರದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಶನಿವಾರ ಆಯೋಜಿಸಿದ್ದ ಮೈಸೂರು ವಿಭಾಗಮಟ್ಟದ ಅಧ್ಯಯನ ಶಿಬಿರದಲ್ಲಿ ‘ಕಬ್ಬಿನ ಉಪ ಉತ್ಪನ್ನಗಳು’ ಕುರಿತು ಮಾತನಾಡಿದರು.

‘ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ಕಬ್ಬು ನಿಯಂತ್ರಣ ಮಂಡಳಿಯ ವ್ಯಾಪ್ತಿಗೆ ಸಕ್ಕರೆ ಕಾರ್ಖಾನೆಗಳು ಒಳಪಡುತ್ತವೆ.  ನಿಯಮದ ಪ್ರಕಾರ ಸಕ್ಕರೆ ಕಾರ್ಖಾನೆಗಳು ಸಕ್ಕರೆಯನ್ನೇ ಉತ್ಪತ್ತಿ ಮಾಡಬೇಕು. ಆ ನಿಬಂಧನೆಯನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದರೆ ಬೆಲ್ಲವನ್ನು ಉತ್ಪತ್ತಿ ಮಾಡಿ ರೈತರಿಗೆ ಟನ್ ಕಬ್ಬಿಗೆ ಹೆಚ್ಚು ಹಣ ನೀಡಲು ಅನುಕೂಲವಾಗಲಿದೆ. ಈ ಬಗ್ಗೆ ಸಕ್ಕರೆ ಸಚಿವರು ಆಸಕ್ತಿ ತೋರಿಸಬೇಕು’ ಎಂದರು. 

ADVERTISEMENT

‘ಕಾರ್ಖಾನೆಗಳು ಒಂದು ಟನ್ ಕಬ್ಬು ಅರೆಯುವಿಕೆಯಿಂದ ಕನಿಷ್ಠ 5 ಸಾವಿರ ಗಳಿಸಬಹುದು. ಕಾರ್ಖಾನೆಯ ಉಪ ಉತ್ಪನ್ನಗಳು ಸೇರಿದರೆ 5 ಸಾವಿರಕ್ಕಿಂತ ಹೆಚ್ಚು ಹಣ ಸಿಗಲಿದೆ. ಕಾರ್ಖಾನೆಗಳು ರೈತರ ಹಿತದೃಷ್ಟಿಯಿಂದ ಬೆಲೆ ನೀಡಿದರೆ ರೈತ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಿದ್ದಾನೆ. ಈ ನಿಟ್ಟಿನಲ್ಲಿ ಸರ್ಕಾರಗಳು ಸಹ ಚಿಂತಿಸುವ ಅಗತ್ಯವಿದೆ’ ಎಂದರು.

ಕಬ್ಬಿನಿಂದ ಸಕ್ಕರೆ, ಬೆಲ್ಲ, ಅಲ್ಲದೆ ನೂರಾರು ಉಪ ಉತ್ಪನ್ನಗಳನ್ನು ಉತ್ಪಾದಿಸಬಹುದು. ಪಶು ಆಹಾರ, ತಂಪು ಪಾನಿಯ, ಜೈವಿಕ ಇಂಧನ, ಪೇಪರ್, ಕಾರ್ಡ್‌ಬೋರ್ಡ್‌ ಸೇರಿದಂತೆ ವಿವಿಧ ಬಗೆಯ ಉತ್ಪನ್ನಗಳನ್ನು ಉತ್ಪತ್ತಿ ಮಾಡಲು ಸಾಧ್ಯವಾಗುತ್ತದೆ ಎಂದರು.

ಪ್ರಗತಿಪರ ಕೃಷಿಕ ಸುಂಕಾತೊಣ್ಣೂರು ದೇವೇಗೌಡ ಮಾತನಾಡಿ, ‘ರೈತ ಹಠವಾದಿಯಾಗಿ ಎನನ್ನಾದರೂ ಸಾಧಿಸುತ್ತೇನೆ ಎಂಬ ಛಲ ಹೊಂದಬೇಕು. ನಾನು ಶೂನ್ಯ ಬಂಡವಾಳದಲ್ಲೆ ಸಾವಯುವ ಕೃಷಿ ಆರಂಭಿಸಿ ಕಬ್ಬು ಬೆಳೆದು ಸಾವಯವ ಬೆಲ್ಲ ತಯಾರಿಸಿ ನಾನೇ ಮಾರಾಟ ಮಾಡುತ್ತಿದ್ದೇನೆ. ಇದರಿಂದ ನನಗೆ ಹೆಚ್ಚಿನ ಲಾಭಾಂಶ ದೊರತಿದೆ’ ಎಂದರು.

ದಕ್ಷಿಣ ಕರ್ನಾಟಕಕ್ಕೆ ಸೂಕ್ತವಾದ ಕಬ್ಬಿನ ತಳಿಗಳ ಬಗ್ಗೆ ವಿ.ಸಿ.ಫಾರಂನ ಎಸ್.ಎನ್. ಸ್ವಾಮಿಗೌಡ, ಡಾ.ಟಿ.ಇ. ನಾಗರಾಜು ಮಾಹಿತಿ ನೀಡಿದರು. ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಾಂಷುಗರ್‌  ಕಾರ್ಖಾನೆಯ ಉಪಾಧ್ಯಕ್ಷ ಎಸ್.ಬ್ರಿಟೋ, ಕೆಂಪೇಗೌಡ, ಮುಖಂಡರಾದ ಕೆ.ಆರ್. ಜಯರಾಮು, ವಿಭಾಗೀಯ ಉಪಾಧ್ಯಕ್ಷ ಕೋಣಸಾಲೆ ನರಸರಾಜು, ಕಾರ್ಯದರ್ಶಿ  ರಾಮಕೃಷ್ಣಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್, ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಬಿ.ಬೊಮ್ಮೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎ.ಶಂಕರ್, ಕಾರ್ಯದರ್ಶಿ ಶೆಟ್ಟಹಳ್ಳಿ ರವಿಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.