ADVERTISEMENT

ಸಮಾನ ಶಿಕ್ಷಣ ನೀಡಿ-–ಶಾಸಕ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 9:19 IST
Last Updated 11 ಜನವರಿ 2017, 9:19 IST

ಮಂಡ್ಯ: ‘ಸಂವಿಧಾನ ಬದ್ಧವಾಗಿ ಸಮಾನವಾದ ಶಿಕ್ಷಣ ದೊರೆಯುತ್ತಿಲ್ಲ. ಸಮಾನ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸಮಾನತೆ ತರಬೇಕು ಎಂದು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಆಗ್ರಹಿಸಿದರು.

ನಗರದ ರೈತ ಸಭಾಂಗಣದಲ್ಲಿ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ(ದಕ್ಷಿಣ ವಲಯ)ದ ವತಿಯಿಂದ ಮಂಗಳವಾರ ನಡೆದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಸಹಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಶಿಕ್ಷಕರಾದವರಿಗೆ ಜ್ಞಾನದ ಅರಿವಿರಬೇಕು. ಅದನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿದೆ. ಸೇವಾ ಮನೋಭಾ ಅಳವಡಿಸಿಕೊಳ್ಳಬೇಕು. ಶಿಕ್ಷಕರು ಗ್ರಾಮೀಣ ಬದುಕನ್ನು ಪ್ರೀತಿಸಬೇಕು ಎಂದರು.

ಭಾಷೆ, ನೆಲ, ಜಲದ ಬಗ್ಗೆ ಪ್ರತಿಯೊಬ್ಬರಿಗೂ ಗೌರವ ಇರಬೇಕು. ಆ ನಿಟ್ಟಿನಲ್ಲಿ ಶಿಕ್ಷಣವು ಮೌಲ್ಯಯುತ ಆಗಿರಬೇಕು. ಬಸವಣ್ಣ, ಗಾಂಧಿ ಹಾಗೂ ಬುದ್ಧರ ಮಾರ್ಗದರ್ಶನ ಎಲ್ಲರಿಗೂ ಮುಖ್ಯ ಆಗಬೇಕು. ಸಮಾಜದಲ್ಲಿ ಜಾತ್ಯಾತೀತ ಮನೋಭಾವ ಕಾಣಬೇಕಿದೆ ಎಂದು ಹೇಳಿದರು.

ಮಕ್ಕಳಲ್ಲಿ ದ್ವೇಷ ಮನೋಭಾವ ಕಿತ್ತು ಹಾಕಬೇಕು. ಅದು ಶಿಕ್ಷಕರ ಬೋಧನೆಯಿಂದ ಸಾಧ್ಯ. ಆ ಮೂಲಕ ಮಕ್ಕಳಲ್ಲಿ ಪ್ರೀತಿ, ಸಹನೆ, ಸಹಬಾಳ್ವೆ ಹಾಗೂ ವಾತ್ಸಲ್ಯ ಬಿತ್ತುವ ಪಾಠ ಹೇಳಬೇಕು ಎಂದು ತಿಳಿಸಿದರು.

ಕಾರ್ಯಾಗಾರ ಉದ್ಘಾಟಿಸಿದ ಶಾಸಕ ಎನ್‌.ಚಲುವರಾಯಸ್ವಾಮಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಹಲವಾರು ಬದಲಾವಣೆ ತಂದರೂ ಸಹ ಅದು ಸುಧಾರಣೆ ಕಾಣುವಲ್ಲಿ ವಿಫಲಗೊಂಡಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್‌.ಎನ್‌. ಯೋಗೇಶ್‌, ಮಂಜುನಾಥ್‌, ತಾ.ಪಂ. ಉಪಾಧ್ಯಕ್ಷೆ ರೇಖಾ ದೇವರಾಜು, ಜಿ.ಪಂ. ಸಿಇಒ ಬಿ. ಶರತ್‌, ಸಾ.ಶಿ.ಇ. ಉಪನಿರ್ದೇಶಕ ಶಿವಮಾದಪ್ಪ, ಬಿಇಒ ಮಹದೇವ್, ಮಂಜುನಾಥ್‌, ಸಂಘದ ಅಧ್ಯಕ್ಷ ಆರ್‌. ಜಯರಾಮು, ಕಾರ್ಯದರ್ಶಿ ಎಂ.ಇ. ಶಿವಣ್ಣ ಇದ್ದರು.

ಜೆಡಿಎಸ್‌ಗೆ ಸೇರಿಸಿಕೊಳ್ಳಿ ಎಂದು ಹೋಗಿಲ್ಲ– ಚಲುವರಾಯಸ್ವಾಮಿ
ಮಂಡ್ಯ: ‘ನಮ್ಮನ್ನು ಪುನಃ ಜೆಡಿಎಸ್‌ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಯಾರ ಹಿಂದೆಯೂ ಹೋಗಿಲ್ಲ, ಯಾರ ಬಳಿಯೂ ಹೇಳಿ ಕಳಿಸಿಲ್ಲ’ ಎಂದು ಶಾಸಕ ಎನ್‌. ಚಲುವರಾಸ್ವಾಮಿ ಹೇಳಿದರು.

ಜೆಡಿಎಸ್‌ ಪಕ್ಷಕ್ಕೆ ಹೋಗುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಹಾಗೆಂದು ಕೇಳುವಂತೆ ಯಾರಾದರೂ ಹೇಳಿಕೊಟ್ಟಿದ್ದಾರೆಯೇ ಎಂದು ಸುದ್ದಿಗಾರರನ್ನು ಪ್ರಶ್ನಿಸಿದರು.
ಲಘುವಾಗಿ ಮಾತನಾಡಲು ಇಷ್ಟವಿಲ್ಲ. ಬೆಳಿಗ್ಗೆ ಒಂದು, ಮಧ್ಯಾಹ್ನ ಇನ್ನೊಂದು ಮಾತನಾಡಲು ಬರುವುದಿಲ್ಲ. ಜನರ ಆಶಯದಂತೆ ನಡೆದುಕೊಳ್ಳುತ್ತೇನೆ ಎಂದರು.
ಎಪಿಎಂಸಿ ಚುನಾವಣೆಯು ರೈತರ ಚುನಾವಣೆ ಆಗಿದೆ. ಇದರಲ್ಲಿ ಜೆಡಿಎಸ್‌ ಪಕ್ಷದ ಚಿಹ್ನೆ ಇಲ್ಲ. ಯಾರ ಪರವಾಗಿಯೂ ನಾನು ಪ್ರಚಾರಕ್ಕೆ ಹೋಗಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT