ADVERTISEMENT

ಸೆ. 12ರಿಂದ ‘ಕಾವೇರಿ ಪುಷ್ಕರ ಮೇಳ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 8:46 IST
Last Updated 14 ಜುಲೈ 2017, 8:46 IST

ಶ್ರೀರಂಗಪಟ್ಟಣ: ಕಾವೇರಿ ಪುಷ್ಕರ ಮೇಳ ಸೆ. 12ರಿಂದ 8 ದಿನ ಪಟ್ಟಣದ ಕಾವೇರಿ ನದಿ ದಡದಲ್ಲಿ ನಡೆಯಲಿದೆ ಎಂದು ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ಭಾನುಪ್ರಕಾಶ್‌ ಶರ್ಮಾ ಹೇಳಿದರು. ಪಟ್ಟಣದಲ್ಲಿ ಗುರುವಾರ ನಡೆದ ಸಾಧು– ಸಂತರು ಹಾಗೂ ಸ್ಥಳೀಯ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಶ್ರೀರಂಗನಾಥಸ್ವಾಮಿ ದೇವಾಲಯ ಮೈದಾನದಲ್ಲಿ ವೇದಿಕೆ ನಿರ್ಮಿಸಲಾಗುವುದು. ಕಾವೇರಿ ನದಿ ದಂಡೆಯ 8 ಘಟ್ಟಗಳಲ್ಲಿ ಕಾವೇರಿ ಪುಷ್ಕರದ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ದೊಡ್ಡ ಗೋಸಾಯಿಘಾಟ್‌, ಚಿಕ್ಕ ಗೋಸಾಯಿಘಾಟ್‌, ಸೋಪಾನಕಟ್ಟೆ, ಜಿ.ಬಿ.ಹೊಳೆ, ಪಶ್ಚಿಮ ವಾಹಿನಿ, ನಿಮಿಷಾಂಬ ದೇಗುಲ, ಕಾವೇರಿ ಸಂಗಮ ಇತರ ಕಡೆ ಪವಿತ್ರ ಸ್ನಾನ ಮತ್ತು ಜಪ, ತಪಗಳಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಾಂಡಿಚೆರಿ, ಕೇರಳ ಇತರ ಕಡೆಗಳಿಂದ ದಕ್ಷಿಣ ಭಾರತದ ಸಾಧು, ಸನ್ಯಾಸಿಗಳು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೆ. 17ರಂದು ವಿಶೇಷ ಮೇಳ ಜರುಗಲಿದ್ದು, ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ’ ಎಂದು ವಿವರಿಸಿದರು.

ವಿಶ್ವ ಹಿಂದೂ ಪರಿಷತ್‌ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಕೇಶವ ಹೆಗ್ಡೆ ಮಾತನಾಡಿ, ‘ಕಾವೇರಿ ಪುಷ್ಕರ ಮೇಳದ ಬಗ್ಗೆ ರಾಜ್ಯ, ಹೊರ ರಾಜ್ಯದಲ್ಲಿ ವ್ಯಾಪಕ ಪ್ರಚಾರ ಮಾಡಲಾಗುವುದು. ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಪ್ರಕೃತಿ ಸಂರಕ್ಷಣೆಗಾಗಿ ಉತ್ತಿಷ್ಠ ಭಾರತ ಸಂಘಟನೆಯಿಂದ ಕೋಟಿ ವೃಕ್ಷ ಅಭಿಯಾನ ಕೈಗೊಳ್ಳಲಾಗುವುದು’ ಎಂದರು.

ADVERTISEMENT

ಕಾವೇರಿ ಸ್ವಚ್ಛತಾ ಆಂದೋಲನದ ಕರ್ನಾಟಕ ಪ್ರಾಂತ್ಯ ಸಂಚಾಲಕ ಚಂದ್ರಮೋಹನ್‌ ಮಾತನಾಡಿ, ಕಾವೇರಿ ಪುಷ್ಕರದ ಅಂಗವಾಗಿ ಕಾವೇರಿ ಉಗಮ ಸ್ಥಾನದಿಂದ ಪೂಂಪುಹಾರ್‌ವರೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ನದಿಗೆ ತ್ಯಾಜ್ಯ ಸೇರುವುದನ್ನು ತಡೆಯಲು ಸರ್ಕಾರ ಮತ್ತು ಸಂಘ, ಸಂಸ್ಥೆಗಳು ಸಹಕರಿಸಬೇಕು ಎಂದು ಕೋರಿದರು.

ಆದಿ ಶಂಕರ ಮಠದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ ಮಾತನಾಡಿ, ಕಾವೇರಿ ನದಿ ಸಂರಕ್ಷಣೆ ಬಗ್ಗೆ ಕಾವೇರಿ ಪುಷ್ಕರದಲ್ಲಿ ಗೊತ್ತುವಳಿ ಮಂಡಿಸಲಾಗುವುದು ಎಂದರು. ಆರ್‌ಎಸ್‌ಎಸ್‌ ಮುಖಂಡ ರಂಗನಾಥ್‌, ಪುರಸಭೆ ಸದಸ್ಯರಾದ ಎಸ್‌.ಪ್ರಕಾಶ್‌, ಎಸ್‌.ನಂದೀಶ್‌, ಕರವೇ ತಾಲ್ಲೂಕು ಅಧ್ಯಕ್ಷ ಎಂ.ಸುರೇಶ್‌, ಕೆ.ಬಿ.ಬಸವರಾಜು, ವಿಜಯಕುಮಾರ್‌, ಡಿ.ಕೆ.ನಾಗರಾಜು, ಅಗ್ರಹಾರ ನಿಂಗೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.