ADVERTISEMENT

ಸೋಮೇಶ್ವರ ದೇಗುಲ: ಜೋಡಿ ರಥೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:48 IST
Last Updated 16 ಏಪ್ರಿಲ್ 2017, 5:48 IST

ಕಿಕ್ಕೇರಿ: ಶ್ರವಣಬೆಳಗೂಳದಿಂದ ತುಸು ದೂರ ಇರುವ ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮ ಧಾರ್ಮಿಕ ಕೇಂದ್ರವೆನಿಸಿದೆ.ಸೌರಾಷ್ಟ್ರದಿಂದ ಬಂದು ನೆಲೆಸಿದ್ದಾರೆ ಎನ್ನಲಾದ ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆಮಂಡಮ್ಮ ದೇವರ ದರ್ಶನಕ್ಕೆ ವರ್ಷಪೂರ್ತಿ ರಾಜ್ಯ, ಹೊರರಾಜ್ಯಗಳಿಂದ ಅಸಂಖ್ಯಾತ ಭಕ್ತರು ಬರುತ್ತಾರೆ. ಗ್ರಾಮದಲ್ಲಿ ವೀರಶೈವರೇ ಅಧಿಕ ಸಂಖ್ಯೆಯಲ್ಲಿದ್ದು, ಜಂಗಮ ವಂಶದವರು ದೇಗುಲದ ಅರ್ಚಕರಾಗಿದ್ದಾರೆ. ಇಡೀ ಗ್ರಾಮ ಶಿವನ ಆರಾಧಕರಿಂದ ತುಂಬಿದೆ. ಏ. 17ರಂದು ಸಂಜೆ ಗೋಧೂಳಿ ಲಗ್ನ ೪.೩೦ಕ್ಕೆ ಜೋಡಿ ರಥೋತ್ಸವ ನಡೆಯಲಿದೆ.

ಸ್ಥಳ ಪುರಾಣ: ದೇಗುಲ 1043ರಲ್ಲಿ ಹೊಯ್ಸಳರ ದೊರೆ ತ್ರಿಭುವನಮಲ್ಲನ ಕಾಲದಲ್ಲಿ ಗಾರೆ ಕುಸುರಿಯಿಂದ ನಿರ್ಮಾಣವಾಗಿದೆ. ಆಂಧ್ರಪ್ರದೇಶದ ಮೋಪೂರಿನ ಭೈರವರಾಜರು ಸಾಸಲುವಿನ ಸೋಮೇಶ್ವರ ದರ್ಶನಕ್ಕೆ ಮಲ್ಲಿಪಟ್ಟಣದ ದೊರೆ ರಾಮರಾಜರೊಂದಿಗೆ ಬಂದಿದ್ದರು. ದೇವರ ಮಹಿಮೆಗೆ ಮಾರು ಹೋಗಿ ಇಲ್ಲಿಯೇ ನೆಲೆಸಿ ಜಂಗಮಧಾರಿಗಳಾಗುತ್ತಾರೆ ಎನ್ನಲಾಗಿದೆ.

ಸಹೋದರರಾದ ಆದಿ ಶೆಟ್ಟಿ, ಕೋರಿ ಶೆಟ್ಟಿ ಎಂಬ ವರ್ತಕರು ವ್ಯಾಪಾರ ಮಾಡುತ್ತ ಸಾಸಲುವಿಗೆ ಬಂದಿದ್ದರು. ಕೋರಿಶೆಟ್ಟಿ ಸೌದೆಗಾಗಿ ಮರ ಕಡಿಯುವಾಗ ಉದ್ಭವವಾಗುವ ಶಂಭುಲಿಂಗವನ್ನು ಭಿನ್ನಗೊಳಿಸುತ್ತಾರೆ. ಕನಸಿನಲ್ಲಿ ಶಿವ ಮಾಡಿದ ಅಪ್ಪಣೆಯಂತೆ ದೇಗುಲ ನಿರ್ಮಿಸಿದರು ಎನ್ನಲಾಗಿದೆ. ದೇಗುಲ ಈಗ ಮುಜರಾಯಿ ಇಲಾಖೆಗೆ ಸೇರಿದೆ.

ADVERTISEMENT

ಭೈರವರಾಜರು ಕೈಲಾಸ ಸ್ವರೂಪಿಗಳಾದಾಗ ಬಿಟ್ಟು ಹೋದ ವಿಭೂತಿಯಿಂದ ನಾಗರಹಾವು ಕಡಿತಕ್ಕೆ ನೀಡುವ ಔಷಧ, ಸರ್ಪಸುತ್ತು, ಕಜ್ಜಿ, ತುರಿಕೆಯಂತಹ ಹಲವು ಚರ್ಮವ್ಯಾಧಿಗಳಿಗೆ ದೇಗುಲದಲ್ಲಿ ನೀಡುವ ಔಷಧ, ವಿಭೂತಿ, ಬಿಲ್ವಪತ್ರೆ ಪ್ರಸಾದ, ನಾಗಬನದಲ್ಲಿನ ಹುತ್ತದ ಮೃತ್ತಿಕೆ, ಕೊಳದಲ್ಲಿನ ಸ್ನಾನಕ್ಕಾಗಿ ಹೊರರಾಜ್ಯದಿಂದಲೂ ಭಕ್ತರು ಬರುವುದು ವಿಶೇಷ.

ದೀಪಾವಳಿಯಂದು ನಡೆಯುವ ಸಗಣಿ ಹಬ್ಬ, ಮಾಣಿಕ್ಯ ಶೆಟ್ಟಿ (ಕತ್ತೆ ಮೆರವಣಿಗೆ), ಶ್ರಾವಣಮಾಸದಲ್ಲಿನ ಹಸಿರು ಬಂಡಿ ಹಬ್ಬ, ಕೊಂಡೋತ್ಸವ, ಕಾರ್ತಿಕಮಾಸದ ಜಾತ್ರೆ ಪ್ರಸಿದ್ಧಿ ಪಡೆದಿವೆ.ಕೈಲಾಸ ಬಸವೇಶ್ವರ, ಸ್ನಾನದ ಕೊಳ, ನಾಗಬನ, ರಂಗಸ್ಥಳ, ಮಾರಮ್ಮ, ಸಿಂಗಮ್ಮನ ಗುಡಿ, ಕುದುರೆಮಂಡಮ್ಮ ದೇಗುಲಗಳು ಇಲ್ಲಿಯ ಪ್ರೇಕ್ಷಣೀಯ ಸ್ಥಳಗಳಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.