ADVERTISEMENT

ಹೇಮಾವತಿ ನದಿಪಾತ್ರದಲ್ಲಿ ಒತ್ತುವರಿ: ಆರೋಪ

ತೆರವಿಗೆ ಆಗ್ರಹಿಸಿ ಬಂಡಿಹೊಳೆಯಲ್ಲಿ ಗ್ರಾಮಸ್ಥರ ಪ್ರತಿಭಟನೆ; ತಹಶೀಲ್ದಾರ್‌ ರತ್ನಾ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 12 ಮೇ 2017, 10:45 IST
Last Updated 12 ಮೇ 2017, 10:45 IST
ಕೆ.ಆರ್.ಪೇಟೆ: ತಾಲ್ಲೂಕಿನ ಬಂಡಿಹೊಳೆ ಗ್ರಾಮದ ಬಳಿ ಇರುವ ಹೇಮಾವತಿ ಅಣೆಕಟ್ಟೆಯ ನದಿಪಾತ್ರದಲ್ಲಿ ಅಕ್ರಮವಾಗಿ ಭೂಮಿಯನ್ನು ಒತ್ತುವರಿ ಮಾಡಿ ಸಾರ್ವಜನಿಕ ಆಸ್ತಿ ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿ ಬಂಡಿಹೊಳೆಯಲ್ಲಿ ಗ್ರಾಮಸ್ಥರು  ಗುರುವಾರ ಪ್ರತಿಭಟನೆ ನಡೆಸಿದರು.
 
‘ಗ್ರಾಮದ ಕೆಲವು ಪ್ರಭಾವಿ ಮುಖಂಡರುಗಳು ನಿರಂತರವಾಗಿ ನದಿಪಾತ್ರದಲ್ಲಿ ಜಮೀನನ್ನು ಒತ್ತುವರಿ ಮಾಡುತ್ತಿದ್ದಾರೆ. ಅಲ್ಲದೆ, ಅಕ್ರಮವಾಗಿ ಮರಳುಗಣಿಗಾರಿಕೆ ನಡೆಸುತ್ತಿದ್ದಾರೆ. ನದಿಪಾತ್ರದಲ್ಲಿ 3 ಎಕರೆಗೂ ಹೆಚ್ಚಿನ ಭೂಮಿಯನ್ನು ಮಣ್ಣುಮುಚ್ಚಿ ಸಮತಟ್ಟು ಗೊಳಿಸಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ದೂರಿದರು.
 
ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಕೆ.ರತ್ನಾ ಅವರಿಗೆ ಮುತ್ತಿಗೆ ಹಾಕಿ ‘ಹೇಮಾವತಿ ನದಿಯನ್ನು ಉಳಿಸಬೇಕು’ ಎಂದು ಒತ್ತಾಯಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಷಾದ್ರಿ, ‘ಕೆಲವರು ಹೇಮಗಿರಿ ಅಣೆಕಟ್ಟೆಯ ಪಕ್ಕದಲ್ಲಿ 3 ಎಕರೆಗೂ ಹೆಚ್ಚಿನ ನದಿಪಾತ್ರವನ್ನು ಮಣ್ಣಿನಿಂದ ಮುಚ್ಚಿ ಕೃಷಿಭೂಮಿಯನ್ನಾಗಿ ಪರಿವರ್ತಿಸುವ ಕೆಲಸವನ್ನು ರಾಜಾರೋಷವಾಗಿ ನಡೆಸುತ್ತಿದ್ದಾರೆ.
 
ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳಾಗಲಿ, ಕಂದಾಯ ಇಲಾಖೆಯ ಅಧಿಕಾರಿಗಳಾಗಲಿ ಪ್ರಶ್ನಿಸದೆ ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ’ ಎಂದು ಆರೋಪಿಸಿದರು. 
 
‘ನದಿಪಾತ್ರದ ಒತ್ತುವರಿಯಿಂದ ಬಂಡಿಹೊಳೆ ಹಾಗೂ ಕೆ.ಆರ್.ಪೇಟೆಯಲ್ಲಿ ಕುಡಿಯಲು ನೀರಿಲ್ಲದ ಸ್ಥಿತಿ ಉಂಟಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.  ಪ್ರತಿಭಟನೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್, ಕಾಯಿ ಮಂಜುನಾಥ್, ರಾಮೇಗೌಡ, ವಿಶ್ವನಾಥ್, ರಾಜಶೇಖರ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.