ADVERTISEMENT

₹ 15 ಲಕ್ಷ ವೆಚ್ಚದಲ್ಲಿ ಸ್ವಾಗತ ಕಮಾನು

ಎಂ.ಎನ್.ಯೋಗೇಶ್‌
Published 20 ನವೆಂಬರ್ 2017, 6:00 IST
Last Updated 20 ನವೆಂಬರ್ 2017, 6:00 IST
ಮಂಡ್ಯದಿಂದ ಮೈಸೂರಿಗೆ ಪ್ರಯಾಣಿಸುವಾಗ ಸಿಗುವ ಸ್ವಾಗತ ಕಮಾನಿನಲ್ಲಿ ಅಕ್ಷರಗಳು ಅಳಿಸಿ ಹೋಗಿರುವುದು
ಮಂಡ್ಯದಿಂದ ಮೈಸೂರಿಗೆ ಪ್ರಯಾಣಿಸುವಾಗ ಸಿಗುವ ಸ್ವಾಗತ ಕಮಾನಿನಲ್ಲಿ ಅಕ್ಷರಗಳು ಅಳಿಸಿ ಹೋಗಿರುವುದು   

ಮಂಡ್ಯ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಕಡೆಯಿಂದ ನಗರ ಪ್ರವೇಶಿಸಿದರೆ ಸಕ್ಕರೆ ನಗರಕ್ಕೆ ಸ್ವಾಗತ ಕೋರುವ ಕಮಾನು ನಿರ್ಮಾಣಕ್ಕೆ ನಗರಸಭೆ ಯೋಜನೆ ರೂಪಿಸಿದೆ.

ರಾಷ್ಟ್ರೀಯ ಹೆದ್ದಾರಿಯ ಎರಡೂ ಕಡೆ ಆದಿಚುಂಚನಗಿರಿ ಮಠ ನಿರ್ಮಿಸಿರುವ ಸ್ವಾಗತ ಕಮಾನುಗಳಿವೆ. ಅವು ಒಳ ಬರುವ ಪ್ರಯಾಣಿಕರಿಗೆ ಸ್ವಾಗತ, ಹೊರ ಹೋಗುವವರಿಗೆ ವಂದನೆ ಸಲ್ಲಿಸುತ್ತಿವೆ. ಆದರೆ ಯಾವುದೇ ಪಟ್ಟಣ, ನಗರಗಳಲ್ಲಿ ಸ್ಥಳೀಯ ಸಂಸ್ಥೆಗಳು ಸ್ವಾಗತ–ವಂದನೆ ಕಮಾನು ನಿರ್ಮಿಸುವುದು ವಾಡಿಕೆ. ಅದರಂತೆ ನಗರಸಭೆ ವತಿಯಿಂದ ಎರಡೂ ಕಡೆ ನಿರ್ಮಾಣ ಮಾಡಿತ್ತು. ಮೈಸೂರು ಕಡೆಯಲ್ಲಿ ಜ್ಯೋತಿ ಇಂಟರ್‌ನ್ಯಾಷನ್‌ ಹೋಟೆಲ್‌ ಬಳಿ ಈಗಲೂ ನಗರಸಭೆಯ ಸ್ವಾಗತ ಕಮಾನು ಇದೆ.

ಬೆಂಗಳೂರು ಕಡೆ ಸ್ವರ್ಣಸಂದ್ರ ಗೇಟ್‌ ಸಮೀಪ ಸ್ವಾಗತ ಕಮಾನು ನಿರ್ಮಾಣ ಮಾಡಲಾಗಿತ್ತು. ಆದರೆ ವರ್ಷ ಹಿಂದೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ವಾಗತ ಕಮಾನು ಜಖಂಗೊಂಡಿತ್ತು. ನಂತರ ಅದನ್ನು ತೆರವುಗೊಳಿಸಲಾಯಿತು. ಹೀಗಾಗಿ ವರ್ಷದಿಂದ ಬೆಂಗಳೂರು ಕಡೆಯಿಂದ ಬರುವ ಪ್ರಯಾಣಿಕರಿಗೆ ನಗರಸಭೆ ಸ್ವಾಗತ ಕೋರುವ ಕಮಾನು ಇಲ್ಲವಾಗಿದೆ.

ADVERTISEMENT

ಆದಿಚುಂಚನಗಿರಿಯ ಸ್ವಾಗತ ಕಮಾನು ಪ್ರಯಾಣಿಕರನ್ನು ನಗರಕ್ಕೆ ಸ್ವಾಗತಿಸಿ, ವಂದಿಸುತ್ತಿವೆ. ಈಗ ನಗರಸಭೆ ನೂನತವಾಗಿ ಬೆಂಗಳೂರು ಕಡೆಯಿಂದ ಬರುವ ಪ್ರಯಾಣಿಕರನ್ನು ಸ್ವಾಗತಿಸಲು  ಕಮಾನು ನಿರ್ಮಿಸಲು ಉದ್ದೇಶಿಸಿದ್ದು ನಗರಸಭೆ ಕೌನ್ಸಿಲ್‌ ಸಭೆಯಲ್ಲಿ ಒಪ್ಪಿಗೆ ಪಡೆಯಲಾಗಿದೆ. ಅಂದಾಜು ₹ 15 ಲಕ್ಷ ವೆಚ್ಚದಲ್ಲಿ ಕಮಾನು ನಿರ್ಮಿಸಲು ಟೆಂಡರ್‌ ಕರೆಯಲಾಗಿದೆ. ಗುತ್ತಿಗೆದಾರರೊಬ್ಬರು ಟೆಂಡರ್‌ ಸಲ್ಲಿಸಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.

‘ಆದಿಚುಂಚನಗಿರಿ ಮಠ ನಿರ್ಮಾಣ ಮಾಡಿರುವ ಸ್ವಾಗತ ಕಮಾನುಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕಾರಣ ಹೆದ್ದಾರಿಯಲ್ಲಿ ನಗರಸಭೆಯ ಕಮಾನುಗಳಿಗೆ ಬೇಡಿಕೆ ಇರಲಿಲ್ಲ. ಆದರೆ ನಗರಸಭೆ ವತಿಯಿಂದ ಸ್ವಾಗತ ಕಮಾನು ನಿರ್ಮಿಸುವುದು ಹೆಮ್ಮೆ ವಿಷಯ. ಹೀಗಾಗಿ ಸ್ವಾಗತ ಕಮಾನು ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕೆ ಎಲ್ಲಾ ಸದಸ್ಯರು ಒಪ್ಪಿಗೆ ನೀಡಿದ್ದಾರೆ’ ಎಂದು ನಗರಸಭೆ ಪೌರಾಯುಕ್ತ ಟಿ.ಎನ್‌.ನರಸಿಂಹಮೂರ್ತಿ ಹೇಳಿದರು.

‘ರಾಷ್ಟ್ರೀಯ ಹೆದ್ದಾರಿಯಲ್ಲಿ ಕಮಾನು ನಿರ್ಮಾಣ ಮಾಡಲು ಬಹಳ ಗಟ್ಟಿಯಾಗಿ ಉಕ್ಕಿನ ಕಂಬಗಳನ್ನು ಬಳಸಿ ನಿರ್ಮಿಸಲಾಗುವುದು. ಯಾವುದೇ ವಾಹನ ಡಿಕ್ಕಿ ಹೊಡೆದರೂ ಮುರಿದು ಬೀಳುವಂತಿರಬಾರದು. ಮುರಿದು ಬಿದ್ದರೆ ಇನ್ನೂ ಹೆಚ್ಚಿನ ಅನಾಹುತ ಉಂಟಾಗುತ್ತದೆ. ಹೆದ್ದಾರಿ ಚತುಷ್ಪಥವಾದ ಕಾರಣ ಎತ್ತರ ಹಾಗೂ ಉದ್ದ ಕಮಾನು ಅವಶ್ಯವಿದೆ. ಹೀಗಾಗಿ ಖರ್ಚು ಸ್ವಲ್ಪ ಹೆಚ್ಚಳವಾಗಲಿದೆ’ ಎಂದು ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಹೇಳಿದರು.

ಮಾಯವಾದ ಅಕ್ಷರಗಳು: ಮೈಸೂರು ಕಡೆಯಿಂದ ಸ್ವಾಗತ ಕೋರುವ ಕಮಾನಿನಲ್ಲಿ ಎರಡೂ ಕಡೆಯ ಅಕ್ಷರಗಳು ಮಾಯವಾಗಿವೆ. ದಶಕದ ಹಿಂದೆ ನಗರಸಭೆ ನಿರ್ಮಿಸಿದ ಕಮಾನಿನಲ್ಲಿ ಅಕ್ಷರಗಳು ಇಲ್ಲದಿರುವುದನ್ನು ನಗರಸಭೆ ಅಧಿಕಾರಿಗಳು ಗಮನಿಸಿಲ್ಲ. ಚುಂಚನಗಿರಿ ಕಮಾನು ಇರುವ ಕಾರಣ ನಗರಸಭೆಯ ಕಮಾನು ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ. ಕೇವಲ ಹಸಿರು ಬಣ್ಣದ ಕಮಾನು  ಮಾತ್ರ ನಿಂತಿದ್ದು ಅಲ್ಲಿ ಯಾವುದೇ ಅಕ್ಷರಗಳು ಇಲ್ಲ.

‘ಎರಡು ವರ್ಷಗಳಿಂದ ನೋಡುತ್ತಿದ್ದೇನೆ. ಸ್ವಾಗತ ಕಮಾನಿಗೆ ಅಕ್ಷರ ಬರೆಸಲು ಇನ್ನೂ ಸಾಧ್ಯವಾಗಿಲ್ಲ. ನಗರಸಭೆಯಿಂದ ಕಮಾನು ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಖಾಸಗಿಯವರಿಗೆ ನೀಡಬಹುದು. ಅದಕ್ಕಾಗಿ ಖಾಸಗಿ ಕಂಪೆನಿಗಳು ಕಾಯುತ್ತಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಹೀರಾತುಗಳಿಗೆ ಬಲು ಬೇಡಿಕೆ ಇದೆ. ಮಂಡ್ಯ ನಗರಸಭೆ ಒಂದು ಸ್ವಾಗತ ಕಮಾನನ್ನು ಸುಸ್ಥಿತಿಯಲ್ಲಿ ಇಡುವಲ್ಲಿ ವಿಫಲವಾಗಿರುವುದು ನಿರ್ಲಕ್ಷ್ಯವನ್ನು ಎತ್ತಿ ತೋರುತ್ತದೆ’ ಎಂದು ಕಲ್ಲಹಳ್ಳಿಯ ಸಮಾಜಿಕ ಕಾರ್ಯಕರ್ತ ರಾಜೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.