ADVERTISEMENT

ರಸ್ತೆಯಲ್ಲೇ ಒಕ್ಕಣೆ: ವಾಹನ ಸವಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 4:40 IST
Last Updated 3 ಫೆಬ್ರುವರಿ 2018, 4:40 IST

ಕೆರಗೋಡು: ಸುಗ್ಗಿ ಸಮಯದಲ್ಲಿ ವಾಹನ ಚಾಲಕರು ಹೆಲ್ಮೆಟ್ ಧರಿಸಿ, ಕಣ್ಣಿಗೆ ಕನ್ನಡಕ ಹಾಕಿ, ತಲೆ ಅಥವಾ ಮುಖಕ್ಕೆ ಮಾಸ್ಕ್ ಹಾಕಿಯೇ ವಾಹನ ಹತ್ತಬೇಕಾದ ಪರಿಸ್ಥಿತಿ ಬಂದಿದೆ. ಇಲ್ಲದಿದ್ದರೆ ಒಕ್ಕಣೆ ಮಾಡುವ ರಸ್ತೆಯಲ್ಲಿ ಹೋಗುವಾಗ ಆಯ ತಪ್ಪಿ ಬೀಳುವ ಸಾಧ್ಯತೆಗಳು ಇವೆ.

ರೈತರು ಈಚೆಗೆ ಕಣವನ್ನು ಬಿಟ್ಟು ಒಕ್ಕಣೆ ಮಾಡುವುದಕ್ಕೆ ರಸ್ತೆಗೆ ಬರುತ್ತಿದ್ದಾರೆ. ಹೀಗಾಗಿ ಇಂಥ ರಸ್ತೆಯಲ್ಲಿ ಸಂಚರಿಸಲು ವಾಹನ ಚಾಲಕರು ಪರದಾಡುತ್ತಿದ್ದಾರೆ. ಈಚೆಗೆ ಕೆ. ಆರ್. ಪೇಟೆ ಬಳಿ ಕಾರಿಗೆ ರಾಗಿ ಹುಲ್ಲು ಸಿಕ್ಕಿ ಬೆಂಕಿ ಹತ್ತಿಕೊಂಡ ಘಟನೆಯೂ ನಡೆದಿತ್ತು. ಕಡಿಮೆ ಜಮೀನು ಹೊಂದಿದವರು, ಹಣ ಇಲ್ಲದವರು ಉತ್ತಮ ರಸ್ತೆಗಳು ಅಭಿವೃದ್ಧಿಯಾದದ್ದೇ ತಡ, ಜೀವದ ಹಂಗು ತೊರೆದು ರಸ್ತೆಯಲ್ಲೇ ಒಕ್ಕಣೆ ಮಾಡಲು ಆರಂಭಿಸಿದ್ದಾರೆ.

‘ನಮಗೆ ಕಡಿಮೆ ಜಮೀನು. ಬೆಳೆಯೂ ಕಡಿಮೆ. ಮೊದಲೇ ಬರಗಾಲ. ಕಣ ಮಾಡಲು ಭೂಮಿಯೂ ಇಲ್ಲ. ಯಂತ್ರ ಬಳಸಲು ಹಣವಿಲ್ಲ. ಅಪರೂಪಕ್ಕೆ ಉತ್ತಮ ರಾಗಿ ಫಸಲು ಬಂದಿದೆ. ಉಳಿಸಿಕೊಳ್ಳಬೇಕು ಎನ್ನುವ ಯೋಚನೆಯಲ್ಲಿ ರಸ್ತೆಗೆ ಹಾಕಿದ್ದೇನೆ’ ಎಂದು ರೈತರೊಬ್ಬರು ಅಳಲು ತೋಡಿಕೊಂಡರು.

ADVERTISEMENT

ಸರ್ಕಾರ ಕಣ ನಿರ್ಮಿಸಲು ಅನುದಾನ ನೀಡುತ್ತಿದದರೂ ಆದರ ಬಳಕೆ ಕಡಿಮೆ. ದ್ವಿಚಕ್ರ ವಾಹನ ಚಾಲಕ ಉಮೇಶ್ ಮಾತನಾಡಿ, ‘ರಸ್ತೆಯಲ್ಲಿ ಒಕ್ಕಣೆ ಮಾಡುವಾಗ ಬರುವ ದೂಳಿನಿಂದ ಶಾಲಾ ಮಕ್ಕಳು ಹಾಗೂ ವಯೋವೃದ್ಧರಿಗೆ ತುಂಬಾ ಸಮಸ್ಯೆಯಾಗಿದೆ. ವಾಹನ ಚಲಾಯಿಸುವಾಗ ಅಪಘಾತವಾದರೆ ಯಾರು ಹೊಣೆ. ಇದನ್ನು ರೈತರಿಗೆ ಮನವರಿಕೆ ಮಾಡಿ ರಸ್ತೆಯಲ್ಲಿ ಒಕ್ಕಣೆ ನಿಲ್ಲಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.