ADVERTISEMENT

633 ಮಂದಿಗೆ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 21 ಮೇ 2017, 9:38 IST
Last Updated 21 ಮೇ 2017, 9:38 IST

ಕೆ.ಆರ್.ಪೇಟೆ: ಸಾಧಿಸುವ ಮನಸ್ಸು ಮತ್ತು ಛಲವೊಂದಿದ್ದರೆ ಪ್ರಪಂಚದ ಯಾವುದೇ ಭಾಗದಲ್ಲಿ ಉದ್ಯೋಗಾವಕಾಶ ಪಡೆಯಬಹುದು. ಈ ಬಗ್ಗೆ ಸರಿಯಾದ ತಿಳಿವಳಿಕೆ ನೀಡುವ ವ್ಯವಸ್ಥೆ ಆಗಬೇಕಿದೆ ಎಂದು ಜಿ.ಪಂ. ಅಧ್ಯಕ್ಷೆ ಪ್ರೇಮಕುಮಾರಿ ಹೇಳಿದರು.

ಪಟ್ಟಣದಲ್ಲಿ ಶನಿವಾರ  ಶತಮಾನದ ಶಾಲೆಯ ಆವರಣದಲ್ಲಿ ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರ 85ನೇ ಹುಟ್ಟುಹಬ್ಬದ ಅಂಗವಾಗಿ ಎಚ್.ಡಿ.ದೇವೇಗೌಡ ಕುಟುಂಬ ಅಭಿಮಾನಿಗಳ ಬಳಗ, ತಾಲ್ಲೂಕು ಜೆಡಿಎಸ್ ಘಟಕ ಹಾಗೂ ಶ್ರೀರಂಗಪಟ್ಟಣ ಉದ್ಯೋಗದಾತ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಉದ್ಯೋಗಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಯಾವ ವ್ಯಾಸಂಗ ಮಾಡಿದರೆ ಯಾವ ಉದ್ಯೋಗ ಪಡೆಯಲು ಸಾಧ್ಯ ಎಂಬ ತಿಳಿವಳಿಕೆಯನ್ನು ಪಡೆಯುವುದು ಇಂದಿನ ಅನಿವಾರ್ಯತೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಬಿ.ಪ್ರಕಾಶ್ ಮಾತನಾಡಿ,  ‘ನಿರುದ್ಯೋಗಿ ಯುವಕರು ಕಂಪೆನಿಗಳ ಮಾರ್ಗದರ್ಶನ ಪಡೆದು  ತಮಗಿಷ್ಟ ಬಂದ ಉದ್ಯೋಗವನ್ನು ಆರಿಸಿಕೊಂಡು ಕೆಲಸ ಮಾಡುವ ಛಾತಿ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

ಜಿ.ಪಂಸದಸ್ಯ ಬಿ.ಎಲ್.ದೇವರಾಜು ಮಾತನಾಡಿ,  ‘ಉದ್ಯೋಗ ನೀಡುವವರೇ ಮನೆ ಬಾಗಿಲಿಗೆ ಬಂದಿರುವ ಸಂದರ್ಭವನ್ನು ವಿದ್ಯಾವಂತ ನಿರುದ್ಯೋಗಿಗಳು ಬಳಸಿಕೊಳ್ಳಬೇಕು’ ಎಂದರು.

ಮೇಳದ ಆಯೋಜಕ ಬಸ್ ಕೃಷ್ಣೇಗೌಡ ಮಾತನಾಡಿದರು. ಜನತಾದಳ ತಾಲ್ಲೂಕು ಘಟಕ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಜಿ. ಪಂ. ಮಾಜಿ ಸದಸ್ಯ ಮಂಜೇಗೌಡ, ಮುಖಂಡರಾದ ಕೆ.ಸಿ.ಮಂಜುನಾಥ್, ಬಂಡಿಗೊಳೆ ಅಶೋಕ್, ವಿಠಲಾಪುರ ಸುಬ್ಬೇಗೌಡ, ರಾಜು, ಜಯರಂಗ, ಸಂತೋಷ್, ಕೆ.ಆರ್.ನೀಲಕಂಠ ಕೆ.ಆರ್.ಪುಟ್ಟಸ್ವಾಮಿ, ಅಕ್ಕಿಹೆಬ್ಬಾಳು ಶ್ರೀನಿವಾಸ್, ಸಾಕ್ಷಿಬೀಡು ರಾಮಕೃಷ್ಣೇಗೌಡ, ಕೆ.ಎಸ್.ರಾಮೇಗೌಡ, ಕೆ.ಸಿ.ಮಂಜುನಾಥ್, ಇದ್ದರು.

ಶಾಸಕ ನಾರಾಯಣಗೌಡ ಗೈರು: ತಾಲ್ಲೂಕು  ಜನತಾದಳದ ಮುಖಂಡರೇ ಕಾರ್ಯಕ್ರಮ ರೂಪಿಸಿದ್ದರೂ ಶಾಸಕ ನಾರಾಯಣಗೌಡ ಪಾಲ್ಗೊಳ್ಳದಿರುವುದು ಅಚ್ಚರಿ ಮೂಡಿಸಿತು.45 ಕಂಪೆನಿಗಳು ಭಾಗಿ– 633 ಮಂದಿಗೆ ಉದ್ಯೋಗ: ಮೇಳದಲ್ಲಿ ಹನುಮಂತ್‌ಸಿಂಗ್ ಟೆಕ್ಸ್‌ಟೈಲ್, ಎಚ್.ಜಿ.ಎಸ್.ಎಲ್ ಕಂಪನಿ, ಸಿಯೆನೆಸ್ಕ್ ಕಂಪನಿ,           ಸಿಎಂಎಸ್ ಐಟಿ ಕಂಪೆನಿ, ಅರಸ್ ಕಾರ್ ಕಂಪೆನಿ, ನವಭಾರತ್ ಫರ್ಟಿಲೈಸರ್ಸ್‌ ಲಿ,  ಈಗಲ್ ಟೆಕ್ನಾಲಜಿ, ಸುರಭಿ ಬಯೋಟೆಕ್ ಕಂಪನಿ, ಆಟೊಮೆಟಿಕ್ ಎಕ್ಸೆಲ್  ಸೇರಿ 45 ಕಂಪೆನಿಗಳು ಭಾಗವಹಿಸಿದ್ದವು.

1,900 ಅಭ್ಯರ್ಥಿಗಳು ಉದ್ಯೋಗಮೇಳಕ್ಕೆ ಬಂದಿದ್ದರು. ಅವರಲ್ಲಿ 633 ಮಂದಿಯನ್ನು  ವಿವಿಧ ಕಂಪೆನಿಗಳು ಉದ್ಯೋಗಕ್ಕೆ ಆಯ್ಕೆ ಮಾಡಿದವು. ಕೆಲವು ಕಂಪೆನಿಗಳು ಸ್ಥಳದಲ್ಲಿಯೇ ನೇಮಕ ಪತ್ರ ನೀಡಿದರೆ, ಮತ್ತೆ ಕೆಲವು ಸೋಮವಾರ ಕಚೇರಿಗೆ ದಾಖಲೆಗಳೊಂದಿಗೆ ಬರುವಂತೆ ಸೂಚಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.