ಕೆ.ಆರ್.ಪೇಟೆ: ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡು ತಂದೆಯ ಆರೈಕೆಯಲ್ಲಿ ಬೆಳೆದ ಪಟ್ಟಣದ ನಿವಾಸಿ ಅಲ್ಲಮಪ್ರಭು ಯೋಗದಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ಅಲ್ಲಮಪ್ರಭು ತಂದೆ ವೀರಭದ್ರಯ್ಯ ಶಿಕ್ಷಕರು. ವೃತ್ತಿ ಸಂಬಂಧ ಇಲ್ಲಿಗೆ ವರ್ಗಾವಣೆಯಾಗಿ ಬಂದು ಇಲ್ಲಿಯೇ ನೆಲೆನಿಂತರು. ಶಾಲಾ ವಿದ್ಯಾಭ್ಯಾಸದ ಬಳಿಕ, ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದಲ್ಲಿ ಯೋಗ ತರಬೇತಿ ಪಡೆದು, ಬೇರೆಯವರಿಗೆ ಕಲಿಸಲು ಆರಂಭಿಸಿದರು. ಕೋವಿಡ್‌ನಲ್ಲಿ ಕ್ವಾರಂಟೈನ್ ಕೇಂದ್ರಗಳಿಗೂ ತೆರಳಿ ಸೋಂಕುಪೀಡಿತರಿಗೆ ಯೋಗ ಕಲಿಸಿಕೊಟ್ಟಿದ್ದರು.
ಹಲವೆಡೆ ಪ್ರದರ್ಶನ: 2020ರಲ್ಲಿ ಅಂಡಮಾನ್ ನಿಕೋಬಾರ್‌ನಲ್ಲಿ ಯೋಗ ಪ್ರದರ್ಶನ ನೀಡಿದ್ದರು. ಇದಾದ ಬಳಿಕ ಐದು ಬಾರಿ ರಾಷ್ಟ್ರಮಟ್ಟದ ಪದಕ, ಎರಡು ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. 2021ರಲ್ಲಿ ನೇಪಾಳದ ‘ಪೋಕ್ರಾ’ದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ಗಳಿಸಿದ್ದಾರೆ. 7.49 ನಿಮಿಷದಲ್ಲಿ ‘ಶೀರ್ಷಾಸನ’ ಮಾಡಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದ್ದಾರೆ.
ಯೋಗ ಪ್ರದರ್ಶನ: ಯೋಗ ಮತ್ತು ಧ್ಯಾನದ ಕುರಿತು ಅಲ್ಲಮಪ್ರಭು ವಿಶೇಷ ಅಧ್ಯಯನ ನಡೆಸುತ್ತಿದ್ದು, ಅಂತರರಾಷ್ಟ್ರೀಯ ಯೋಗದಿನದಂದು ಅಲ್ಲಿ ಪ್ರದರ್ಶನ ನೀಡುವ ಅವಕಾಶ ದೊರೆತಿದೆ. ಇವರ ಸಾಧನೆಗೆ ಹಲವು ಸಂಘ ಸಂಸ್ಥೆಗಳು ಅಭಿನಂದಿಸಿ, ಆರ್ಥಿಕ ನೆರವು ಒದಗಿಸಿವೆ.
‘ಯೋಗದಿಂದ ಧ್ಯಾನ, ಏಕಾಗ್ರತೆ, ಶಾಂತಿ -ಸಮಾಧಾನದ ಜೊತೆಗೆ ಆಧುನಿಕ ಬದುಕಿನಲ್ಲಿ ಒತ್ತಡದಿಂದ ಹೊರಬರಲು ಯೋಗ ಅತ್ಯುತ್ತಮ ಸಹಾಯಕವಾಗಿದೆ. ಆದ್ದರಿಂದ, ಯುವಸಮುದಾಯವು ನಿರಂತರವಾಗಿ ಯೋಗಾಭ್ಯಾಸ ಮಾಡಬೇಕು’ ಎಂದು ಅವರು ಸಲಹೆ ನೀಡುತ್ತಾರೆ.
ಬಾಲ್ಯದಿಂದಲೇ ಯೋಗದಿಂದ ಆಸಕ್ತಿ ಕೋವಿಡ್‌ನಲ್ಲೂ ಸೋಂಕುಪೀಡಿತರಿಗೆ ಯೋಗ ಕಲಿಕೆ ಸಾಧನೆಗೆ ಸಂದ ರಾಷ್ಟ್ರ, ಅಂತರಾಷ್ಟ್ರೀಯ ಪ್ರಶಸ್ತಿ
Quote - ಮಗನ ಸಾಧನೆ ಸಂತಸ ತಂದಿದೆ. ಮಗ ಕಲಿತಿದ್ದು ತಾಲ್ಲೂಕಿನ ಮಕ್ಕಳಿಗೆ ಬಳಕೆಯಾಗುವಂತೆ ಸರ್ಕಾರ ಯೋಜನೆ ಮಾಡಿದರೆ ಸಂಪೂರ್ಣ ಸಹಕಾರ ನೀಡುತ್ತೇನೆ.ವೀರಭದ್ರಯ್ಯ, ತಂದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.