ADVERTISEMENT

ಅಧ್ಯಕ್ಷೆ, ಉಪಾಧ್ಯಕ್ಷರ ನಡುವೆ ಹೊಂದಾಣಿಕೆ ಕೊರತೆ; ಸಭೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 8:41 IST
Last Updated 9 ಸೆಪ್ಟೆಂಬರ್ 2017, 8:41 IST
ಮೈಸೂರಿನಲ್ಲಿ ಶುಕ್ರವಾರ ಕರೆದಿದ್ದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಗೆ ಬೆರಳೆಣಿಕೆಯಷ್ಟೇ ಸದಸ್ಯರು ಹಾಜರಿದ್ದರು
ಮೈಸೂರಿನಲ್ಲಿ ಶುಕ್ರವಾರ ಕರೆದಿದ್ದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಗೆ ಬೆರಳೆಣಿಕೆಯಷ್ಟೇ ಸದಸ್ಯರು ಹಾಜರಿದ್ದರು   

ಮೈಸೂರು: ಜೆಡಿಎಸ್‌ ಹಿಡಿತದಲ್ಲಿರುವ ತಾಲ್ಲೂಕು ಪಂಚಾಯಿತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಅಂಶ ಶುಕ್ರವಾರ ಬೆಳಕಿಗೆ ಬಂತು. ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ನಡುವಿನ ಗೊಂದಲದಿಂದಾಗಿ ಸಾರ್ವಜನಿಕ ಸಮಸ್ಯೆಗಳ ಚರ್ಚೆ ನಡೆಯುತ್ತಿಲ್ಲ ಎಂಬುದೂ ಸಾಬೀತಾಯಿತು.

ಬೆಳಿಗ್ಗೆ 11ಕ್ಕೆ ನಡೆಯಬೇಕಿದ್ದ ಸಭೆಗೆ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ಕಾರ್ಯ ನಿರ್ವಹಣಾಧಿಕಾರಿ ಲಿಂಗರಾಜಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೂ ಹಾಜರಾದರು. ಆದರೆ, ಕಾಂಗ್ರೆಸ್‌ನ 11 ಸದಸ್ಯರು ಹಾಗೂ ಜೆಡಿಎಸ್‌ನ ಇಬ್ಬರು ಮಾತ್ರ ಸಭೆಗೆ ಬಂದರು.

38 ಸದಸ್ಯ ಬಲದ ತಾ.ಪಂ.ನಲ್ಲಿ ಕೋರಂ ಕೊರತೆ ಕಾಣಿಸಿತು. ಅಧ್ಯಕ್ಷೆ ಸಭೆ ಮುಂದೂಡಿದರು. ಇದರಿಂದ ಆಕ್ರೋಶಗೊಂಡ ಕೆಲ ಸದಸ್ಯರು, ‘ಪದೇಪದೇ ಸಭೆಯನ್ನು ಮುಂದೂಡುವುದಕ್ಕೆ ಕಾರಣ ಕೊಡಿ. ನಿಮ್ಮಗಳ ನಡುವಿನ ಜಗಳದಿಂದಾಗಿ ನಾವು ಜನರಿಗೆ ಮುಖ ತೋರಿಸಲಾಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗೆ ಪೆಟ್ಟು ಬೀಳುತ್ತಿದೆ’ ಎಂದು ತರಾಟೆ ತೆಗೆದುಕೊಂಡರು.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಳಮ್ಮ, ‘ಹಿಂದೆ ನಡೆದ ಸಭೆಗೂ ಹಲವು ಸದಸ್ಯರು ಬರಲಿಲ್ಲ. ಸ್ಥಾಯಿ ಸಮಿತಿಗಳ ಸಭೆಗೂ ಬಂದಿಲ್ಲ. ಈ ಸಭೆಗೆ ಮುಂಚಿತವಾಗಿ ಎಲ್ಲರಿಗೂ ಆಹ್ವಾನ ನೀಡಿದ್ದೇನೆ. ನಿನ್ನೆ ಖುದ್ದಾಗಿ ಫೋನ್‌ ಮಾಡಿ ಹೇಳಿದ್ದೇನೆ. ಆದರೂ ಬಂದಿಲ್ಲ. ಇದರಲ್ಲಿ ಉಪಾಧ್ಯಕ್ಷ ಎನ್‌.ಬಿ.ಮಂಜು ಅವರ ಕೈವಾಡ ಇದೆ. ಅವರೇ ನನ್ನ ಆಡಳಿತಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ’ ಎಂದು ದೂರಿದರು.

ಸಭೆಗೆಸದಸ್ಯರ ಗೈರು, ಹೆಚ್ಚು ಅನುದಾನ ಪಡೆದಿದ್ದರ ಬಗ್ಗೆ ಪ್ರಶ್ನಿಸಿದರೆ , ಉಪಾಧ್ಯಕ್ಷ ಮಂಜು ಅವರು, ‘ಇದು ವಿರೋಧಿಗಳು ಮಾಡಿದ ಕುಮ್ಮಕ್ಕು ಮಾತ್ರ. ಆಡಳಿತದಲ್ಲಿ ಕಲ್ಲು ಹಾಕುವ ಪ್ರಯತ್ನ ನಾನು ಮಾಡಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.