ADVERTISEMENT

ಅಧ್ಯಾಪಕ ವೃತ್ತಿಯಲ್ಲಿ ಸಾರ್ಥಕ್ಯ: ವಾನಳ್ಳಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2014, 10:33 IST
Last Updated 11 ಸೆಪ್ಟೆಂಬರ್ 2014, 10:33 IST

ಮೈಸೂರು: ಅದೊಂದು ಅಪರೂಪದ ಸಮಾರಂಭ. ತರಗತಿಯಲ್ಲಿ ಪಾಠ ಹೇಳಿದ ಮೇಷ್ಟ್ರಿಂದಲೇ ಶಿಷ್ಯರೊಬ್ಬರು ಪ್ರಶಸ್ತಿ ಸ್ವೀಕರಿಸಿದರು. ಅಷ್ಟೇ ಅಲ್ಲ, ಅವರ ಬಾಯಿಂದಲೇ ಅಭಿನಂದನಾ ನುಡಿಗಳನ್ನು ಕೇಳಿ ಪುಳಕಗೊಂಡರು... ಇಲ್ಲಿನ ರೋಟರಿ ಕೇಂದ್ರ ಸಭಾಂಗಣದಲ್ಲಿ ರೋಟರಿ ಕ್ಲಬ್ ಮೈಸೂರು ಮಿಡ್‌ಟೌನ್ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರೊ.ಎಂ.ಜಿ. ನಂಜುಂಡಾರಾಧ್ಯ ಸ್ಮಾರಕ ಅಮರವಾಣಿ ಪ್ರಶಸ್ತಿ’ಯನ್ನು ತಮ್ಮ ಗುರು ಪ್ರೊ.ಆರ್‌.ಎನ್. ಪದ್ಮನಾಭ ಅವರಿಂದ ಸ್ವೀಕರಿಸಿದ ಮೈಸೂರು ವಿವಿಯ ಇಎಂಆರ್‌ಸಿ ನಿರ್ದೇಶಕ ಡಾ.ನಿರಂಜನ ವಾನಳ್ಳಿ ಇಂತಹ ಅಪರೂಪದ ಗೌರವಕ್ಕೆ ಪಾತ್ರರಾದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಾನಳ್ಳಿ, ‘ಅಧ್ಯಾಪಕ ವೃತ್ತಿಯಲ್ಲಿ ಸಾರ್ಥಕ್ಯವನ್ನು ಕಂಡಿದ್ದೇನೆ. ಪಾಠ ಹೇಳುವ ಕೆಲಸವು ಹೆಮ್ಮೆ ತರಿಸಿದೆ’ ಎಂದು ತಮ್ಮ ವೃತ್ತಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ‘ಪ್ರಜಾವಾಣಿ’ಯಲ್ಲಿ ಇಂಟರ್ನ್‌ಷಿಪ್ ಮಾಡುತ್ತಿ­ದ್ದಾಗ ಅಲ್ಲಿಯೇ ಕೆಲಸಕ್ಕೆ ಸೇರುವ ಅವಕಾಶ ಇತ್ತು. ಆದರೆ, ಉಜಿರೆಯ ಕಾಲೇಜು ಒಂದರಲ್ಲಿ  ಉಪನ್ಯಾಸಕ ವೃತ್ತಿಗೆ ಆಯ್ಕೆಯಾದಾಗ ಯಾವ ವೃತ್ತಿ ಸ್ವೀಕರಿಸುವುದು ಎಂಬ ಗೊಂದಲಕ್ಕೆ ಬಿದ್ದೆ.

ಆಗ ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅವರಿಗೆ ಪತ್ರ ಬರೆದಾಗ ಅವರು ‘ಉಪನ್ಯಾಸಕನಾಗಿ ಪತ್ರಕರ್ತನಾಗಬಹುದು. ಆದರೆ, ಪತ್ರಕರ್ತನಾದರೆ ಮೇಷ್ಟ್ರಾಗುವುದು ಕಷ್ಟ’ ಎಂದು ಬರೆದ ಪತ್ರದ ಸಾಲುಗಳು ಬದುಕಿನ ದಿಕ್ಕನ್ನೇ ಬದಲಿಸಿತು’ ಎಂದು ತಮ್ಮ ವೃತ್ತಿ ಬದುಕಿನ ಆರಂಭಿಕ ದಿನಗಳನ್ನು ಮೆಲುಕು ಹಾಕಿದರು.

‘ಅಮರವಾಣಿ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವುದು ತಲೆಗಿಂತ ಮುಂಡಾಸೆ ದೊಡ್ಡದು ಎಂಬಂತಾಗಿದೆ. ಪ್ರಶಸ್ತಿ ಸ್ವೀಕರಿಸಿದ ನಂತರ ಮತ್ತಷ್ಟು ಜವಾಬ್ದಾರಿ ಹೆಗಲೇರಿದೆ. ಇದು ಮುಂದಿನ ದಾರಿಯನ್ನು ನಿರ್ದೇಶಿಸುತ್ತದೆ’ ಎಂದು ತಿಳಿಸಿದರು. ತಮ್ಮ ಶಿಷ್ಯನ ಕುರಿತು ಅಭಿನಂದನಾ ನುಡಿಗಳ­ನ್ನಾಡಿದ ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಆರ್.ಎನ್. ಪದ್ಮನಾಭ ‘ಹುಟ್ಟು ಉಚಿತ, ಸಾವು ಖಚಿತ, ಪ್ರೀತಿ ಒಂದೇ ಶಾಶ್ವತ’ ಎಂಬುದು ವಾನಳ್ಳಿ ಅವರ ಬದುಕಿನ ಮಂತ್ರವಾಗಿದೆ.

ವಿದ್ಯಾರ್ಥಿಗಳು ಸೋತಾಗ ಶಿಕ್ಷಕರು ಅವರಿಗೆ ಸ್ಫೂರ್ತಿಯ ಮಾತುಗಳ­ನ್ನಾಡಬೇಕು. ಇಂತಹ ಚೈತನ್ಯದ ಟಾನಿಕ್‌ನ್ನು ಅವರು ತಮ್ಮ ವಿದ್ಯಾರ್ಥಿ ವೃಂದಕ್ಕೆ ನೀಡುತ್ತಿದ್ದಾರೆ’ ಎಂದರು. ಐನ್‌ಸ್ಟೀನ್ ಅವರ ಮೀಮಾಂಸೆಗೂ ವಾನಳ್ಳಿ ಅವರ ಬದುಕಿಗೂ ಪರಸ್ಪರ ಜೋಡಣೆಯಾಗುತ್ತದೆ. ಮಾತಿನಲ್ಲಿ ಮಿತಿ, ನುಡಿದಂತೆ ನಡೆಯುವ ಛಾತಿ ಎಲ್ಲವೂ ಇವರಿಗೆ ಸಿದ್ಧಿಸಿದೆ ಎಂದು ಬಣ್ಣಿಸಿದರು.

ಇದಕ್ಕೂ ಮುನ್ನ ನಿರಂಜನ ವಾನಳ್ಳಿ ಅವರ ಪತ್ನಿ ಮತ್ತು ಮಕ್ಕಳು ‘ಇಲ್ಲವೆನ್ನಲು ಕಲಿಸು ಗುರುವೇ ಮನಸು ಒಲ್ಲದ ವಿಷಯಕೆ’ ಎಂಬ ವಾನಳ್ಳಿ ಬರೆದ ಕವನವನ್ನು ಸುಶ್ರಾವ್ಯವಾಗಿ ಹಾಡಿದರು. ಪ್ರಶಸ್ತಿ ಸ್ಥಾಪಕ ಡಾ.ಎಂ.ಎನ್. ಭೀಮೇಶ್ ತಮ್ಮ ತಂದೆ ಪ್ರೊ.ಎಂ.ಜಿ. ನಂಜುಂಡಾರಾಧ್ಯ ಅವರ ಜೀವನ ಕುರಿತಂತೆ ವಿವರಿಸಿದರು. ರೋಟರಿ ಸಂಸ್ಥೆ ಅಧ್ಯಕ್ಷ ಆರ್. ವೆಂಕಟೇಶ್, ಕಾರ್ಯದರ್ಶಿ ತ.ನ. ಮೋಹನ್‌ಕುಮಾರ್ ಸಮಾರಂಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.