ADVERTISEMENT

ಅಭಿವ್ಯಕ್ತಿ ಮೇಲೆ ತೀವ್ರ ಆಕ್ರಮಣ: ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:27 IST
Last Updated 16 ಜನವರಿ 2017, 6:27 IST
ಅಭಿವ್ಯಕ್ತಿ ಮೇಲೆ ತೀವ್ರ ಆಕ್ರಮಣ: ಬಿಳಿಮಲೆ
ಅಭಿವ್ಯಕ್ತಿ ಮೇಲೆ ತೀವ್ರ ಆಕ್ರಮಣ: ಬಿಳಿಮಲೆ   

ಮೈಸೂರು: ‘ನಮ್ಮ ಅಭಿವ್ಯಕ್ತಿ ಕ್ರಮಗಳ ಮೇಲೆ ತೀವ್ರವಾದ ಹೊಡೆತ ಬಿದ್ದು .  ಸಂಸತ್ತು ಏಕೀಕೃತವಾದ ಕಡೆಗೆ ಚಲಿಸುತ್ತಿದೆ. ಅದು ವಾಗ್ವಾದದ ಮೂಲಕ ನಡೆಯುತ್ತಿಲ್ಲ. ಆಕ್ರಮಣ­ಶೀಲವಾಗಿ ನಡೆಯುತ್ತಿದೆ’ ಎಂದು ನವದೆಹಲಿಯ ಜವಾಹರಲಾಲ್‌ ನೆಹರೂ ವಿ.ವಿ ಕನ್ನಡ ಭಾಷಾಪೀಠದ ನಿರ್ದೇಶಕ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.

ನಗರದ ರಂಗಾಯಣದಲ್ಲಿ ನಡೆಯುತ್ತಿರುವ ‘ಬಹುರೂಪಿ’ ಅಂತರ ರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ ಅಂಗವಾಗಿ ಆಯೋಜಿಸಿದ್ದ ‘ನಮ್ಮ ಪ್ರಜಾಪ್ರಭುತ್ವ ಮತ್ತು ರಂಗಭೂಮಿ’ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಅವರು ಸಮಾರೋಪ ಭಾಷಣ ಮಾಡಿದರು.

‘ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬಂದಿದೆ. ಭಾರತವನ್ನು ಒಂದು ಮಾಡಲು ಹಿಂದಿ ಬೇಕು ಎನ್ನುವುದು ಹೊಸ ಶಿಕ್ಷಣ ನೀತಿ ಸ್ಪಷ್ಟವಾಗಿ ಹೇಳುತ್ತಿದೆ. ದೇಸಿ ಭಾಷೆಗಳ ಜೊತೆಗೆ ಹಿಂದಿ ಸಂವಹನ ಮಾಡುವ ಪ್ರಸಂಗ ಬಂದಾಗ ಸಂಸ್ಕೃತದಿಂದ ತೆಗೆದುಕೊಳ್ಳಿ ಎನ್ನುತ್ತಾರೆ ಹೊರತು ಕನ್ನಡದಿಂದ  ತೆಗೆದುಕೊಳ್ಳಿ ಎಂದು ಹೇಳುವುದಿಲ್ಲ ಎಂದರು.

ಹೊಸ ಶಿಕ್ಷಣದ  ಚಿಂತನಾಕ್ರಮ ಅತ್ಯಂತ ಅಪ್ರಜಾಸತ್ತಾತ್ಮಕವಾದುದು. ಇದರ ವಿರುದ್ಧ ಹೋರಾಡಲಾಗುತ್ತಿಲ್ಲ. ಹೊಸ ಶಿಕ್ಷಣ ನೀತಿಯ ಕುರಿತು ಮುಂದಿನ ಬಾರಿ ಸಚಿವ ಸಂಪುಟದ ಮುಂದೆ ಒಪ್ಪಿಗೆ ಪಡೆಯುತ್ತದೆ. ನಂತರ ಕಾನೂನು ಆಗಿ ದೇಶದಾದ್ಯಂತ ಹಿಂದಿ ಹೇರಿಕೆಯಾಗಲಿದೆ. ಇದಕ್ಕೆ ಸಂಬಂದಿಸಿ ಯಾವಾಗ ಎಚ್ಚರಗೊಳ್ಳಬೇಕಿತ್ತೊ ಆಗ ಎಚ್ಚರಗೊಳ್ಳದೆ, ಯಾವಾಗ ಎಚ್ಚರ ಗೊಳ್ಳಬಾರದೊ ಆಗ ಎಚ್ಚೆತ್ತುಕೊಂಡ ಪರಿಣಾಮವಿದು’ ಎಂದು ವಿವರಿಸಿದರು.

‘ಸರ್ಜಿಕಲ್‌ ಸ್ಟ್ರೈಕ್‌ ಕುರಿತು ‘ವಿಧವೆಯರ ರೋದನಕ್ಕೆ ಗಡಿಗಳ ಹಂಗಿಲ್ಲ’ ಎಂದು ಫೇಸ್‌ಬುಕ್‌ನಲ್ಲಿ ಹಾಕಿದಾಗ ಖಾರವಾದ ಪ್ರತಿಕ್ರಿಯೆಗಳು ಬಂದವು. ನಾನು ವಿಧವೆಯಾಗಲು ಸಂತೋಷಪಡುತ್ತೇನೆ ಎಂದು ಮಹಿಳೆಯೊಬ್ಬರು ಪ್ರತಿಕ್ರಿಯಿಸಿದ್ದರು. ಅವರು ಮೂಡಿಗೆರೆ ಬಳಿಯ ಕಾಫಿತೋಟವೊಂದರ ಮಾಲೀಕನ ಪತ್ನಿ. ಸೈನಿಕನ ಪತ್ನಿ ಅಲ್ಲ ಎಂಬುದು ಗಮನಾರ್ಹ.  ಹೀಗೆ ಫೇಸ್‌ಬುಕ್‌ ಸೇರಿದಂತೆ ಬರೆಯುವಾಗ ಎಚ್ಚರ ವಹಿಬೇಕಾದ ಕಾಲವಿದು. ಹೇಗೆಂದರೆ, ಪಾಕಿಸ್ತಾನದಲ್ಲಿ ಒಳ್ಳೆಯ ಹಾಡುಗಾರ ರಿದ್ದಾರೆಂದು ಹೇಳದ ಸ್ಥಿತಿಯಲ್ಲಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಬದಲಾವಣೆಗೆ ಸಿದ್ಧವಾದ ಜಗತ್ತು
ಮೈಸೂರು: ‘ಸಮಾಜದ ಕಟ್ಟ ಕಡೆಯವನ ಕೂಗು ತುಟ್ಟ ತುದಿಯಲ್ಲಿರುವವರಿಗೆ ಕೇಳುವಂತಾದಾಗ ಅದು ಪ್ರಜಾಪ್ರಭುತ್ವ. ಅದು ಸಾಧ್ಯವಾಗುತ್ತಿಲ್ಲ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಈ ಬಿಕ್ಕಟ್ಟು ನಡೆಯುತ್ತಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರವಾದ ಬದಲಾವಣೆಗೆ ಜಗತ್ತು ಸಿದ್ಧವಾಗುತ್ತಿದೆ’ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು.
‘ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಕೈಮುಗಿದು ಪ್ರವೇಶಿಸಿದ್ದರು. ಸಂಸತ್ತಿಗೆ ಅಷ್ಟು ಗೌರವ ಕೊಟ್ಟವರು ನವೆಂಬರ್‌ 8ರಂದು ನೋಟು ರದ್ದತಿ ಮಾಡಿ ಡಿಸೆಂಬರ್‌ 30ರಂದು ಸಚಿವ ಸಂಪುಟದ ಒಪ್ಪಿಗೆ ಪಡೆಯುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಚಿವ ಸಂಪುಟದ ಒಪ್ಪಿಗೆ ಪಡೆದು ನೋಟು ರದ್ದತಿ ಮಾಡಬೇಕಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT