ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿಗೆ ಆಹಾರ ಪೂರೈಕೆ

ಜೈ ಭವಾನಿ ವಾಹನ ಚಾಲಕರು, ಮಾಲೀಕರ ಸಂಘದ ವತಿಯಿಂದ ರವಾನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2017, 10:28 IST
Last Updated 28 ಫೆಬ್ರುವರಿ 2017, 10:28 IST

ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾಣಿಸಿಕೊಂಡಿರುವ ಕಾಳ್ಗಿಚ್ಚು ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅರಣ್ಯ ಇಲಾಖೆಯ ಸಿಬ್ಬಂದಿಗೆ ಜೈ ಭವಾನಿ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಹಾರವನ್ನು ಕಳುಹಿಸಿಕೊಡಲಾಯಿತು.

ಮೈಸೂರು ಅರಮನೆ ಬಳಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ, ಬ್ರೆಡ್, ಬಾಳೆಹಣ್ಣು, ಕಲ್ಲಂಗಡಿ ಹಣ್ಣು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಸೋಮವಾರ ಸಂಘದಿಂದ ರವಾನಿಸಲಾಯಿತು.

‘ಬಂಡೀಪುರ ಅರಣ್ಯದಲ್ಲಿ ಕಾಳ್ಗಿಚ್ಚು ತೀವ್ರ ಸ್ವರೂಪ ಪಡೆಯುತ್ತಿದೆ. ಪ್ರಾಣವನ್ನೂ ಲೆಕ್ಕಿಸದೇ ಅರಣ್ಯ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಸಕಾಲದಲ್ಲಿ ಊಟ, ತಿಂಡಿ ರವಾನಿಸಲು ಅರಣ್ಯ ಇಲಾಖೆಗೂ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಸಂಘದ ವತಿಯಿಂದ ಆಹಾರ ವಿತರಿಸುವ ಕೆಲಸವನ್ನು ಮಾಡಲಾಗುತ್ತಿದೆ’ ಎಂದು ಸಂಘದ ಅಧ್ಯಕ್ಷ ಬಿ.ಹರಿಹರನ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಂಘದ ರಾಜ್ಯ ಘಟಕದ ಅಧ್ಯಕ್ಷ ದ್ಯಾವಪ್ಪ ನಾಯಕ, ಉಪಾಧ್ಯಕ್ಷ ವಿಜಯಸಾಯಿ, ಕಾರ್ಯದರ್ಶಿ ಎನ್.ನಂಜುಂಡ, ಪದಾಧಿಕಾರಿಗಳಾದ ಹರೀಶ್, ಶ್ರೀನಿವಾಸ್, ಮನು, ದೀಪಕ್, ಬೋರೇಗೌಡ ಭಾಗವಹಿಸಿದ್ದರು.

ಸೇಫ್‌ ವ್ಹೀಲ್ಸ್‌ ಸಹಾಯ: ನಗರದ ಸರಸ್ವತಿಪುರಂ ‘ಸೇಫ್‌ ವ್ಹೀಲ್ಸ್‌’ ವತಿಯಿಂದಲೂ ಸಿಬ್ಬಂದಿಗೆ ಅಗತ್ಯ ವಸ್ತುಗಳನ್ನು ರವಾನೆ ಮಾಡಲಾಯಿತು.
ಕೆಂಡ ನಂದಿಸಿದ ಸಿಬ್ಬಂದಿ: ಭೀಕರ ಕಾಳ್ಗಿಚ್ಚಿನಿಂದ ತತ್ತರಿಸಿರುವ ಬಂಡೀಪುರ ಹುಲಿ ರಕ್ಷಿತಾರಣ್ಯದ ಎನ್.ಬೇಗೂರು ವಲಯದ ಅರಣ್ಯ ಸೋಮವಾರ ತುಸು ಶಾಂತವಾಗಿತ್ತು.

ಆಗೊಮ್ಮೆ ಈಗೊಮ್ಮೆ ಬೀಸುತ್ತಿದ್ದ ವೇಗದ ಗಾಳಿಗೆ ಬೆಂಕಿ ಹೊತ್ತಿಕೊಳ್ಳಬಹುದಾದ ಸಾಧ್ಯತೆಯನ್ನು ಮನಗಂಡ ಸಿಬ್ಬಂದಿ ಗರಗಸದಿಂದ ಕೆಂಡ ಹೊಂದಿದ್ದ ಮರಗಳನ್ನು ಕತ್ತರಿಸಿದರು. ಬುಡ ಸುರಕ್ಷಿತವಾಗಿರುವ ಮರಗಳಲ್ಲಿ ಕೆಂಡಗಳನ್ನು ಹೊಂದಿದ್ದ ಕೊಂಬೆ, ರೆಂಬೆಗಳನ್ನು ಮಾತ್ರ ಅವರು ತೆಗೆದರು. ಕೆಲವೆಡೆ ಗಾಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ಅಂತಹ ಕಡೆಯಲ್ಲೆಲ್ಲ ಹಸಿ ಸೊಪ್ಪಿನಿಂದ ಆರಿಸಿದರು.

ಅಗ್ನಿಶಾಮಕ ಸಿಬ್ಬಂದಿ ಮರಗಳ ಕೊಂಬೆಗಳಲ್ಲಿದ್ದ ಕೆಂಡಗಳಿಗೆ ನೀರು ಹಾಯಿಸುವ ಮೂಲಕ ನಂದಿಸಿದರು. ಕುರುಚಲು ಪೊದೆಗಳಲ್ಲಿ ಬೂದಿ ಮುಚ್ಚಿದ ಸ್ವರೂಪದಲ್ಲಿದ್ದ ಕೆಂಡಗಳಿಗೆ ನೀರು ಹರಿಸುವ ಮೂಲಕ ಬೆಂಕಿ ಉಂಟಾಗುವುದನ್ನು ತಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.