ADVERTISEMENT

ಆರ್‌ಟಿಇ ಅಗತ್ಯವೇ ಇಲ್ಲ: ಎಸ್.ಜಿ.ಸಿದ್ದರಾಮಯ್ಯ

ಸರ್ಕಾರಿ ಶಾಲೆಗಳನ್ನು ಸುಧಾರಿಸಿದರೆ ಎಲ್ಲರಿಗೂ ಪ್ರಯೋಜನ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮೇ 2017, 8:45 IST
Last Updated 11 ಮೇ 2017, 8:45 IST
ಮೈಸೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಸರ್ಕಾರ ಸುಮಾರು ₹ 290 ಕೋಟಿಯನ್ನು ಪ್ರತಿ ವರ್ಷ ವ್ಯಯಿಸುತ್ತಿದೆ. ಇದನ್ನೇ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿದರೆ ಆರ್‌ಟಿಇ ಅಗತ್ಯವೇ ಇರುವುದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಇಲ್ಲಿ ಬುಧವಾರ ಅಭಿಪ್ರಾಯಪಟ್ಟರು.
 
ಆರ್‌ಟಿಇ ಕಾಯ್ದೆಯಿಂದ ಕೆಲವರಿಗಷ್ಟೇ ಪ್ರಯೋಜನ ದೊರಕುತ್ತದೆ. ಸರ್ಕಾರಿ ಶಾಲೆಗಳು ಅಭಿವೃದ್ಧಿ ಗೊಂಡರೆ ಎಲ್ಲ ಬಡವರಿಗೆ ಅನುಕೂಲವಾಗುತ್ತದೆ. ಸರ್ಕಾರಕ್ಕೆ ಸಲ್ಲಿಸುವ ಶಾಲಾ ಸಬಲೀಕರಣ ವರದಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 
ಸಿಎಫ್‌ಟಿಆರ್‌ಐಗೆ ಎಚ್ಚರಿಕೆ: ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ಕನ್ನಡಿಗರ ಪರಿಸ್ಥಿತಿ ತೀರಾ ಶೋಚನೀಯವಾಗಿದೆ ಎಂಬ ದೂರುಗಳು ಬಂದಿವೆ.
 
ಈ ಕುರಿತು ಸಭೆ ನಡೆಸಿ, ಕನ್ನಡಿಗ ನೌಕರರ ಹಿತರಕ್ಷಣೆ ಮಾಡಲು ಹಾಗೂ ಅಲ್ಲಿನ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳ್ಳುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸೂಚಿಸ ಲಾಗಿದೆ ಎಂದು ಅವರು ಹೇಳಿದರು.
 
ಮುಂದಿನ ಬಾರಿ ಪರಿಶೀಲನೆಗೆ ಬರುವಷ್ಟರಲ್ಲಿ ಕನ್ನಡಿಗರ ಸ್ಥಿತಿ ಸುಧಾರಿಸದಿದ್ದರೆ, ಅಲ್ಲಿನ ನಿರ್ದೇಶಕರ ವಿರುದ್ಧ ಕಠಿಣ ನಿಲುವು ತಳೆಯುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
 
ಭಾರತೀಯ ಭಾಷಾ ಸಂಸ್ಥೆ (ಸಿಐಐಎಲ್‌)ಯಲ್ಲಿರುವ ಕನ್ನಡ ಶಾಸ್ತ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರ ಮೈಸೂರಿನಲ್ಲೇ ಉಳಿಯಬೇಕು. ಈ ಕೇಂದ್ರವು ಸ್ವಾಯತ್ತ ಸಂಸ್ಥೆಯಾಗಿರ ಬೇಕೇ ಹೊರತು ಸಿಐಐಎಲ್‌ ಅಧೀನದಲ್ಲಿರಬಾರದು ಎಂದರು. ಪ್ರಾಧಿಕಾರದ ಸದಸ್ಯರಾದ ಮುರಳೀಧರ್, ವೈ.ಡಿ.ರಾಜಣ್ಣ, ಚನ್ನಪ್ಪ, ಸ.ರ.ಸುದರ್ಶನ್, ಮೈಲಹಳ್ಳಿ ರೇವಣ್ಣ, ಪ್ರಮೋದ್ ಸಭೆಯಲ್ಲಿದ್ದರು.
 
ಕನ್ನಡದಲ್ಲಿ ಮಾತಾಡಿದರೆ ದಂಡ!
ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಆರ್.ಬಸಪ್ಪ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.
 
‘ನಗರದ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಮಾತನಾಡಿದರೆ ದಂಡ ಹಾಕುತ್ತಾರೆ ಎಂಬ ಸಂಗತಿ ಗಮನಕ್ಕೆ ಬಂದಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಮಕ್ಕಳು ತೂಕಡಿಸಿದರೆ ₹ 50 ಹಾಗೂ ನಿದ್ರಿಸಿದರೆ ₹ 100 ದಂಡ ಹಾಕುವ ಫಲಕಗಳನ್ನು ಗಮನಿಸಿದ್ದೇನೆ.
 
ವರ್ಷಕ್ಕೊಮ್ಮೆ ಖಾಸಗಿ ಶಾಲೆಗಳಿಗೆ ಭೇಟಿ ನೀಡುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದನ್ನೆಲ್ಲ ಗಮನಿಸುವುದಿಲ್ಲವೆ’ ಎಂದು ಪ್ರಶ್ನಿಸಿದರು. ಕೂಡಲೇ ಎಲ್ಲ ಶಾಲೆಗಳಿಗೂ ಭೇಟಿ ನೀಡಿ ಕನ್ನಡ ಭಾಷಾ ಕಲಿಕೆ ಕುರಿತು ವರದಿ ನೀಡುವಂತೆ ಸೂಚಿಸಿದರು.
 
ಸಭೆಗೆ ಬಾರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ಅವರಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ರಂದೀಪ್‌ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.