ADVERTISEMENT

ಇಂದಿರಾಗಾಂಧಿ ಸೇವೆ: ಸಂಸದ ಶ್ಲಾಘನೆ

ಸಹನೆ, ಸ್ಫೂರ್ತಿ, ಕ್ಷಾತ್ರ ಗುಣಗಳ ಸಾಕಾರಮೂರ್ತಿ ಮಹಿಳೆ l ಭ್ರಷ್ಟಾಚಾರ ಹತ್ತಿಕ್ಕುವ ಶಕ್ತಿ ಮಹಿಳೆಗೆ ಇದೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 9:09 IST
Last Updated 9 ಮಾರ್ಚ್ 2017, 9:09 IST
ಇಂದಿರಾಗಾಂಧಿ ಸೇವೆ: ಸಂಸದ ಶ್ಲಾಘನೆ
ಇಂದಿರಾಗಾಂಧಿ ಸೇವೆ: ಸಂಸದ ಶ್ಲಾಘನೆ   
ಮೈಸೂರು:  ಶೌರ್ಯದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆಯಿಲ್ಲ, ಮಾಜಿ ಪ್ರಧಾನಿ ಇಂದಿರಾಗಾಂಧಿ ಈ ದೇಶದ ಗಟ್ಟಿ ಮಹಿಳೆಯರಲ್ಲಿ ಒಬ್ಬರು ಎಂದು ಸಂಸದ ಪ್ರತಾಪಸಿಂಹ ಬಣ್ಣಿಸಿದರು. 
 
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
 
ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಮಹಿಳೆಯರಿಗೆ ಇರುತ್ತದೆ. ರಾಜಕೀಯ ದೂರ ಇಟ್ಟು ಹೇಳುವುದಾದರೆ ಭಾರತದ ಇತಿಹಾಸದಲ್ಲಿ ಗಟ್ಟಿ ಮಹಿಳೆ ಎಂದಾಕ್ಷಣ ಇಂದಿರಾಗಾಂಧಿ ನೆನಪಾಗುತ್ತಾರೆ. ಬ್ರಿಟನ್‌ನ ಮಾಜಿ ಪ್ರಧಾನಿ ಮಾರ್ಗರೇಟ್‌ ಥ್ಯಾಚರ್‌ ಅವರನ್ನು ‘ಉಕ್ಕಿನ ಮಹಿಳೆ’ ಎಂದು ಕರೆಯುತ್ತೇವೆ. ಸ್ವಾತಂತ್ರ್ಯ ಹೋರಾಟ ಎಂದಾಕ್ಷಣ ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಅಬ್ಬಕ್ಕ ದೇವಿ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವ ನೆನಪಾಗುತ್ತಾರೆ ಎಂದು ಹೇಳಿದರು. 
 
ಮಹಿಳೆ ಅಬಲೆ ಎಂದು ಹೇಳಲು ಸಾಧ್ಯವಿಲ್ಲ. ಆಕೆ ಸಹನೆ, ಸ್ಫೂರ್ತಿ, ಕ್ಷಾತ್ರ ಗುಣಗಳ ಸಾಕಾರಮೂರ್ತಿ. ಬದುಕಿನ ಬಂಡಿಯ ನಿರ್ವಹಣೆಯಲ್ಲಿ ಮಹಿಳೆ ಪಾತ್ರ ಮಹತ್ವದ್ದು. ಅಂತಃಕರಣಕ್ಕೆ ಅನ್ವರ್ಥವೇ ಮಹಿಳೆ. ಯಾವ ಕ್ಷೇತ್ರದಲ್ಲೂ ಮಹಿಳೆಯರು ಹಿಂದೆಬಿದ್ದಿಲ್ಲ. ತಾಯಿಯಾಗಿ, ಹೆಂಡತಿಯಾಗಿ, ಅಜ್ಜಿಯಾಗಿ ನಮ್ಮನ್ನು ಪೊರೆಯುತ್ತಾರೆ. ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತು ಅಕ್ಷರಶಃ ಸತ್ಯ. ಮಕ್ಕಳ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ ಮುಖ್ಯವಾದುದು ಎಂದರು.
 
ಶಾಸಕ ಎಂ.ಕೆ.ಸೋಮಶೇಖರ್‌ ಮಾತನಾಡಿ, ಕುಟುಂಬದಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಸ್ವಾತಂತ್ರ್ಯ ನೀಡಬೇಕು. ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿಯೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಹೇಳಿದರು. 
 
ದೌರ್ಜನ್ಯ, ದಬ್ಬಾಳಿಕೆಗಳನ್ನು ಮಹಿಳೆಯರು ಸಹಿಸಿಕೊಳ್ಳಬಾರದು. ದಿಟ್ಟತನದಿಂದ ದಬ್ಬಾಳಿಕೆಗಳ ವಿರುದ್ಧ ಸೆಟೆದು ನಿಲ್ಲಬೇಕು. ಹೆಣ್ಣಿಗೆ ಹೆಣ್ಣೇ ಶತ್ರುವಾಗಬಾರದು. ಗಂಡು ಮಾತ್ರ ವಂಶೋದ್ಧಾರಕ ಎಂಬ ಭಾವನೆಯನ್ನು ತೊಡೆದು ಹಾಕಬೇಕು. ಹೆಣ್ಣು ಭ್ರೂಣ ಹತ್ಯೆಯನ್ನು ನಿರ್ಮೂಲನೆ ಮಾಡಬೇಕು ಎಂದು  ಅವರ ಸಲಹೆ ನೀಡಿದರು. 
 
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಭ್ರಷ್ಟಾಚಾರವನ್ನು ಹತ್ತಿಕ್ಕುವ ಶಕ್ತಿ ಮಹಿಳೆಯರಿಗೆ ಇದೆ. ಅಕ್ರಮವಾಗಿ ಹಣ ಸಂಪಾದಿಸದಂತೆ ಪತಿ, ಮಕ್ಕಳಿಗೆ ತಿಳಿಹೇಳಬೇಕು. ನ್ಯಾಯಯುತವಾಗಿ ಸಂಪಾದಿಸಿದ ಹಣದಿಂದ ಬದುಕು ಸಾಗಿಸೋಣ ಎಂಬ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು. 
 
ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮೆರೆಯುತ್ತಿದ್ದಾರೆ. ‘ಸಮಪಾಲು, ಸಮಬಾಳು’ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧಾ ಮಾತನಾಡಿ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನದಂತೆ ಮಹಿಳಾ ದಿನವನ್ನು ಆಚರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಜರಿದ್ದು, ಕಾರ್ಯಕ್ರಮ ನಡೆಸಿಕೊಡಬೇಕು. ಆ ದಿನ ವಿಧಾನಸಭೆ ಕಲಾಪಗಳನ್ನು ನಡೆಸಬಾರದು ಎಂದು ಮನವಿ ಮಾಡಿದರು. 
 
ಮಹಿಳಾ ಕಾರ್ಯನೀತಿ ಬಗ್ಗೆ ಚರ್ಚೆಗಳು ನಡೆದಿವೆ. ಕೌಟುಂಬಿಕ ಹಿಂಸೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೋರ್ಟ್‌ ರಚಿಸಬೇಕು. ಮದ್ಯಪಾನ ನಿಷೇಧಕ್ಕೆ ಕ್ರಮ ಕೈಗೊಂಡು ಮದ್ಯವ್ಯಸನಕ್ಕೆ ಅಂತ್ಯಹಾಡಬೇಕು ಎಂದು ಕೋರಿದರು.
 
ಸ್ವಚ್ಛ ಭಾರತ ಯೋಜನೆ ಕಾರ್ಯಕ್ರಮ ಅನುಷ್ಠಾನದಲ್ಲಿ ಸಾಧನೆ ಮಾಡಿದ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಯೀಮಾ ಸುಲ್ತಾನಾ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಮೈಸೂರು ಪೇಯಿಂಟ್ಸ್‌ ಮತ್ತು ವಾರ್ನಿಷ್‌ ಕಾರ್ಖಾನೆ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್‌, ಮಕ್ಕಳ ರಕ್ಷಣಾಧಿಕಾರಿ ಕೆ.ಪದ್ಮಾ ಇದ್ದರು.

‘ಕ್ಷೀಣಿಸುತ್ತಿರುವ ಮಹಿಳಾ ಹೋರಾಟ ಚಳವಳಿ’
ಮೈಸೂರು: ‘ಎಂಬತ್ತರ ದಶಕದಲ್ಲಿದ್ದ ಮಹಿಳಾ ಹೋರಾಟದ ಚಳವಳಿಯ ಕಿಚ್ಚು ಇಂದು ಕಾಣೆಯಾಗಿದೆ’ ಎಂದು ಹಿರಿಯ ವಕೀಲರಾದ ಬಿ.ರಾಧಾ ಅಭಿಪ್ರಾಯಪಟ್ಟರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಲಾ ಗೈಡ್‌’ ಕನ್ನಡ ಕಾನೂನು ಮಾಸಪತ್ರಿಕೆ ನಗರದ ಪತ್ರಕರ್ತರ ಭವನದಲ್ಲಿ ಹಿರಿಯ ಮಹಿಳಾ ವಕೀಲರಿಗೆ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

80ರ ದಶಕದ ಹೋರಾಟಗಳನ್ನು ಇಂದಿನವರೆಗೂ ಮುಂದುವರಿಸಿಕೊಂಡು ಬಂದಿದ್ದರೆ ಸಂಸತ್ತು, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಪ್ರಾತಿನಿಧ್ಯ ಪಡೆಯಬಹುದಾಗಿತ್ತು ಎಂದು ಹೇಳಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ವಿ.ರಾಮಮೂರ್ತಿ ಮಾತನಾಡಿ, ‘ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ವರದಕ್ಷಿಣೆ ಕಿರುಕುಳದಲ್ಲಿ ಮತ್ತೊಬ್ಬ ಮಹಿಳೆಯ ಪಾತ್ರ ಇರುತ್ತದೆ. ಹೀಗಾಗಿ, ಪುರುಷರು ಗೌರವಿಸಬೇಕು ಎಂಬ ಮಹಿಳೆಯ ಅಪೇಕ್ಷೆಯಂತೆ ಮಹಿಳೆಯನ್ನು ಮಹಿಳೆಯರು ಗೌರವಿಸಬೇಕು’ ಎಂದು ಸಲಹೆ ನೀಡಿದರು.

ಹಿರಿಯ ವಕೀಲರಾದ ವಿ.ಮೈಥಿಲಿ, ಎಂ.ಎಸ್. ಸಾವಿತ್ರಿ, ಕೆ.ಎಲ್.ಸುಗಂಧಿ, ಮುತ್ತಮ್ಮ ಅವರನ್ನು ಸನ್ಮಾನಿಸಲಾಯಿತು. ಮೈಸೂರು ವಿ.ವಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಮುಖ್ಯಸ್ಥೆ ಆರ್.ಇಂದಿರಾ ಅಧ್ಯಕ್ಷತೆ ವಹಿಸಿದ್ದರು.  ವಕೀಲರಾದ ಎಂ.ಡಿ.ಹರೀಶ್‌ಕುಮಾರ್ ಹೆಗಡೆ, ಎಸ್.ಲೋಕೇಶ್ ಇದ್ದರು.

ಸಮಾಜವಾದಿ ವ್ಯವಸ್ಥೆ ಸ್ಥಾಪನೆ ಅಗತ್ಯ
ಮೈಸೂರು: ಇಂದಿನ ಸಮಸ್ಯೆಗಳಿಗೆ ಕಾರಣವಾಗಿರುವ ಬಂಡವಾಳಶಾಹಿ ವ್ಯವಸ್ಥೆ ಕಿತ್ತೊಗೆದು, ಎಲ್ಲ ಮಹಿಳೆಯರಿಗೆ ಸಮಾನ ಶಿಕ್ಷಣ, ಉದ್ಯೋಗ. ಆರೋಗ್ಯ, ಭದ್ರತೆ ಖಾತ್ರಿಪಡಿಸುವ ಸಮಾಜವಾದಿ ವ್ಯವಸ್ಥೆ ಸ್ಥಾಪಿಸಬೇಕಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್‌) ಉಪಾಧ್ಯಕ್ಷೆ ಸುಧಾ ಕಾಮತ್‌ ಹೇಳಿದರು. 

ಎಐಎಂಎಸ್‌ಎಸ್‌ ವತಿಯಿಂದ ನಗರದ ರೋಟರಿ ಸಂಭಾಗಣದಲ್ಲಿ ಬುಧವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮಹಿಳೆಯರಿಗೆ ಹಕ್ಕು, ಸಮಾನತೆ ನೀಡಲು ಸಮಾಜವಾದಿ ವ್ಯವಸ್ಥೆಯಿಂದ ಮಾತ್ರ ಸಾಧ್ಯ. ಮಾತೃತ್ವವನ್ನೇ ತಿರಸ್ಕರಿಸುವ ಸ್ಥಿತಿಯಲ್ಲಿದ್ದ ಸೋವಿಯತ್ ರಷ್ಯಾದಲ್ಲಿ ಲೆನಿನ್ ಮತ್ತು ಸ್ಟಾಲಿನ್ ನೇತೃತ್ವದಲ್ಲಿ ವೇಶ್ಯಾವಾಟಿಕೆ ನಿರ್ನಾಮ ಮಾಡಿ, ಆ ಮಹಿಳೆಯರಿಗೆ ಘನತೆಯ ಬದುಕನ್ನು ಕಲ್ಪಿಸಿದ್ದು ಇದಕ್ಕೆ ಸಾಕ್ಷಿ. ಇಂಥ ವ್ಯವಸ್ಥೆ  ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಹೇಳಿದರು.

ಮಹಿಳೆಯರು ಸಮಾಜದ ಎರಡನೇ ದರ್ಜೆಯ ನಾಗರಿಕರಾಗಿದ್ದಾರೆ. ಮಹಿಳೆಯರ ಬಗ್ಗೆ ಕಾಳಜಿ ತೋರಿಸುವ ಸರ್ಕಾರಗಳು ಟ್ರಾವೆಲ್, ಬ್ಯೂಟಿ ಪಾರ್ಲರ್‌ನಂಥ ಸೇವೆಗಳನ್ನು ನಡೆಸಲು ರಿಯಾಯಿತಿ ನೀಡುತ್ತವೆಯೇ ಹೊರತು ವೈಜ್ಞಾನಿಕ ಸಮಾನ ಶಿಕ್ಷಣ, ಉದ್ಯೋಗ, ಆರೋಗ್ಯ, ಸುರಕ್ಷತೆ ನಿಟ್ಟಿನಲ್ಲಿ ಭದ್ರತಾ ಕ್ರಮ ತೆಗೆದುಕೊಳ್ಳುತ್ತಿಲ್ಲ. 
 
ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿ ಮತ್ತು ಜ್ಞಾನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉನ್ನತಮಟ್ಟದವರೆಗೂ ಶಿಕ್ಷಣ ಒದಗಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ ಎಂದರು. ಎಐಎಂಎಸ್‌ಎಸ್‌ ಜಿಲ್ಲಾ ಸಮಿತಿ ಅಧ್ಯಕ್ಷೆ ನಳಿನಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪಿ.ಎಸ್.ಸಂಧ್ಯಾ, ಉಪಾಧ್ಯಕ್ಷೆ ಜಿ.ಎಸ್.ಸೀಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT