ADVERTISEMENT

ಇಡೀ ಭಾರತ ಕಾದಂಬರಿಗಳ ವಸ್ತು

‘ಸಾರ್ಥು’ ಅನುವಾದ ಕೃತಿ ಬಿಡುಗಡೆ ಸಮಾರಂಭದಲ್ಲಿ ಎಸ್‌.ಎಲ್‌.ಭೈರಪ್ಪ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 9:50 IST
Last Updated 26 ಸೆಪ್ಟೆಂಬರ್ 2016, 9:50 IST

ಮೈಸೂರು: ಅಖಿಲ ಭಾರತ ಮಟ್ಟದ ವಸ್ತುವಿಷಯ ಆಧರಿಸಿಯೇ ಕಾದಂಬರಿ ಗಳನ್ನು ರಚಿಸಿದ್ದೇನೆ. ಹೀಗಾಗಿ, ದೇಶದ ಎಲ್ಲ ಭಾಷೆಗಳ ಓದುಗರಿಗೂ ಅವು ಆಪ್ತವಾಗಿವೆ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಅಭಿಪ್ರಾಯಪಟ್ಟರು.

ಬಿ.ಎಸ್‌.ಪ್ರಣತಾರ್ತಿ ಹರನ್‌  ಅವರು ಸಂಕೇತಿ ಭಾಷೆಗೆ ಅನುವಾದಿಸಿರುವ ‘ಸಾರ್ಥು’ (ಎಸ್‌.ಎಲ್‌.ಭೈರಪ್ಪ ಅವರ ‘ಸಾರ್ಥ’ ಕಾದಂಬರಿ) ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಇಡೀ ಭಾರತದ ಪರಿಚಯ ನನಗೆ ಇದೆ. ಉತ್ತರ ಭಾರತದ ಬಹುತೇಕ ರಾಜ್ಯಗಳ ಗ್ರಾಮಗಳಲ್ಲಿ ಸಂಚರಿಸಿದ್ದೇನೆ. ಜನಜೀವನ, ಆರ್ಥಿಕತೆ, ರಾಜಕೀಯ, ಸಂಸ್ಕೃತಿ ಎಲ್ಲವನ್ನೂ ಗ್ರಹಿಸಿದ್ದೇನೆ. ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ (ಎನ್‌ಸಿಇಆರ್‌ಟಿ) ಸೇವೆಯಲ್ಲಿದ್ದಾಗ ಹಳ್ಳಿಹಳ್ಳಿ ತಿರುಗಿದ್ದೇನೆ ಎಂದು ಅನುಭವ ಹಂಚಿಕೊಂಡರು.

ಅಖಿಲ ಭಾರತ ಮಟ್ಟದ ಪರಿಕಲ್ಪನೆ ಇದ್ದಿದ್ದರಿಂದಲೇ ‘ಸಾರ್ಥ’ ಕಾದಂಬರಿ ಬರೆಯುವುದು ಸಾಧ್ಯವಾಯಿತು. ಆಲೋಚನೆ, ಅನುಭವದ ವ್ಯಾಪ್ತಿ ವಿಸ್ತಾರವಾಗದಿದ್ದರೆ ಸಾಹಿತ್ಯಕ್ಕೆ ವೈಶಾಲ್ಯ ಬರುವುದಿಲ್ಲ. ‘ತಂತು’ ಕಾದಂಬರಿಯ ವಸ್ತು ಮೈಸೂರು ಸಂಸ್ಥಾನದ ಹಳ್ಳಿ ಯಿಂದ ದೆಹಲಿ, ಬನಾರಸ್‌ ಮೊದಲಾದ ಊರುಗಳವರೆಗೆ ವಿಸ್ತರಿಸಿದೆ ಎಂದು ವಿವರಿಸಿದರು.

‘ಮಂದ್ರ’ದಲ್ಲಿ ಕರ್ನಾಟಕದ ವಿಷಯವೇ ಇಲ್ಲ, ಅದು ಉತ್ತರ ಭಾರತ ಮತ್ತು ಮಹಾರಾಷ್ಟ್ರದ ವಸ್ತುವನ್ನು ಆಧರಿಸಿದೆ. ಇದು ಮರಾಠಿಗೆ ಅನುವಾದವಾದಾಗ ಈ ಕಾದಂಬರಿ ತಮ್ಮದು ಎಂದು ಮರಾಠಿಗರು ಮೆಚ್ಚುಗೆ ವ್ಯಕ್ತಪಡಿಸಿದರು. ಭೈರಪ್ಪ ಕನ್ನಡದಲ್ಲಿ ಬರೆಯುವ ಮರಾಠಿ ಬರಹಗಾರ ಎಂದು ಆ ಭಾಷಿಕರು ಇಂದಿಗೂ ಅಭಿಮಾನ ವ್ಯಕ್ತಪಡಿಸುತ್ತಾರೆ ಎಂದು ಹೇಳಿದರು.

ನನ್ನ ಕೃತಿಗಳನ್ನು ಭಾರತದ ಯಾವುದೇ ಭಾಷೆಗೆ ಅನುವಾದಿಸು ವುದು ಸುಲಭ. ಆದರೆ, ಇಂಗ್ಲಿಷ್‌ಗೆ ಅನುವಾದಿಸುವುದು ಕಷ್ಟ. ಈ ಭಾಷೆ ಸಂಸ್ಕೃತಿ, ಪದಗಳ ಇತಿಹಾಸ ಎಲ್ಲವೂ ಭಿನ್ನವಾಗಿರುತ್ತದೆ. ಆದರೆ, ಭಾರತದ ಎಲ್ಲ ಭಾಷೆಗಳಲ್ಲಿ ಬಹಳಷ್ಟು ಶಬ್ದಗಳು ಸಂಸ್ಕೃತ, ಒಂದೇ ಸಂಸ್ಕೃತಿಯಿಂದ ಬಂದಿರುತ್ತವೆ. ಹೀಗಾಗಿ ಅನುವಾದ ಸುಲಭವಾಗುತ್ತದೆ ಎಂದರು.

‘ಸಾರ್ಥ’ ಕಾದಂಬರಿ ಸಂಸ್ಕೃತಕ್ಕೆ ಅನುವಾದವಾಗಿದೆ. ಸಂಸ್ಕೃತದಲ್ಲಿ ಚೆನ್ನಾಗಿ ಬಂದಿದೆ. ಕಾದಂಬರಿಯ ಕಾಲ, ಪಾತ್ರ, ಸಂಘರ್ಷಗಳು ಎಲ್ಲವೂ ಸಂಸ್ಕೃತ ದಲ್ಲೇ ನಡೆದವು. ಸಂಕೇತಿ ಭಾಷೆಗೆ ಈ ಕಾದಂಬರಿ ಅನುವಾದಗೊಂಡಿದ್ದು, ಅದು ಚೆನ್ನಾಗಿ ಮೂಡಿ ಬಂದಿದೆ ಎಂದು ಶ್ಲಾಘಿಸಿದರು.

ಕೃಷಿ, ಸಂಸ್ಕೃತ, ಶಾಸ್ತ್ರೀಯ ಸಂಗೀತ, ಗಮಕ ಮೊಲಾದವು ಸಂಕೇತಿ ಬ್ರಾಹ್ಮಣ ಸಮುದಾಯದ ಪ್ರಧಾನ ಹವ್ಯಾಸಗಳು. ಸಮುದಾಯದಲ್ಲಿ ಬಹಳಷ್ಟು ಮಂದಿ ಉತ್ತಮ ಸಾಧನೆ ಮಾಡಿದ್ದಾರೆ. ಸಮುದಾಯ ತನ್ನತನ, ಅಸ್ಮಿತೆ, ಒಗ್ಗಟ್ಟು ಕಾಪಾಡಿಕೊಳ್ಳುವಲ್ಲಿ ಭಾಷೆ ಮುಖ್ಯ ವಾಗಿದೆ. ಕಥೆ, ಕವನ, ನಾಟಕಗಳನ್ನು ಸಂಕೇತಿ ಭಾಷೆಗೆ ಅನುವಾದಿಸುವ ಕೆಲಸ ಆಗಬೇಕು ಎಂದು ಆಶಿಸಿದರು.

ಸಂಕೇತಿ ಭಾಷೆಯಲ್ಲಿ ಅನುವಾದ, ಸಾಹಿತ್ಯ ಕೃತಿಗಳು ಬಂದರೆ ಭಾಷೆ ಬೆಳೆಯುತ್ತದೆ. ಅಲ್ಲದೇ ಸಮುದಾಯ ದವರು ತಮ್ಮ ವಿಚಾರಗಳನ್ನು ಚೆನ್ನಾಗಿ ಗ್ರಹಿಸುವುದಕ್ಕೆ ಅನುಕೂಲವಾಗುತ್ತದೆ ಎಂದರು.  ಕೃತಿ ಕುರಿತು ಭಾಷಾವಿಜ್ಞಾನಿ ಕೆ.ಎಸ್‌.ನಾಗರಾಜ್‌ ಮಾತನಾಡಿ, ಸಂಕೇತಿ ಭಾಷೆಗೆ ಕಾದಂಬರಿಯನ್ನು ಅನುವಾದಿಸಿರುವುದು ವಿಶಿಷ್ಟ ಪ್ರಯೋಗ, ಇದು ಇತರರಿಗೆ ಸ್ಫೂರ್ತಿಯಾಗಿದೆ ಎಂದರು.

ಅನುವಾದದ ಜೊತೆಗೆ ಸಂಕೇತಿ ಭಾಷೆಯಲ್ಲೇ ಸ್ವತಂತ್ರ ಕೃತಿಗಳನ್ನು ರಚಿಸುವ ಅಗತ್ಯ ಇದೆ. ಶಾಲೆಗಳಲ್ಲಿ ಪಠ್ಯ ಮಾಡಲು, ಭಾಷೆ ಬೆಳೆಯಲು ಅನುಕೂಲ ವಾಗುತ್ತದೆ ಎಂದರು.

ಸಾಹಿತಿ ಟಿ.ವಿ.ವೆಂಕಟಾಚಲಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ಪ್ರಕಾಶನದ ಸಂಸ್ಕೃತಿ ಸುಬ್ರಹ್ಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.