ADVERTISEMENT

ಇನ್ನೂ ಮಕ್ಕಳ ಕೈಗೆ ಸಿಗದ ಪಠ್ಯಪುಸ್ತಕ

ಮಹಮ್ಮದ್ ನೂಮಾನ್
Published 24 ಜೂನ್ 2017, 9:06 IST
Last Updated 24 ಜೂನ್ 2017, 9:06 IST

ಮೈಸೂರು: ಶಾಲೆಗಳು ಆರಂಭವಾಗಿ ಮೂರು ವಾರಗಳು ಕಳೆದಿದ್ದು, ಮೈಸೂರು ಜಿಲ್ಲೆಯ ಒಂದರಿಂದ ಹತ್ತನೇ ತರಗತಿ ಎಲ್ಲ ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕ ಪೂರೈಕೆಯಾಗಿಲ್ಲ. ಇದುವರೆಗೆ ಶೇ 74ರಷ್ಟು ಪುಸ್ತಕಗಳು ಸರಬರಾಜಾಗಿವೆ. ಸಾವಿರಾರು ವಿದ್ಯಾರ್ಥಿಗಳು ಪಠ್ಯಪುಸ್ತಕ ಇಲ್ಲದೆಯೇ ಶಾಲೆಗೆ ಹೋಗುತ್ತಿದ್ದಾರೆ.

‘ತಾಲ್ಲೂಕು ಕೇಂದ್ರಗಳಿಗೆ ವಿವಿಧ ಮುದ್ರಣ ಕೇಂದ್ರಗಳಿಂದ ಪುಸ್ತಕಗಳು ಪೂರೈಕೆಯಾಗಬೇಕು. ಪಠ್ಯಪುಸ್ತಕ ಮುದ್ರಣದ ಟೆಂಡರ್‌ ಪಡೆದ ಮುದ್ರಕರು ಪುಸ್ತಕ ತಲುಪಿಸಲು ತಡವಾಗಿರುವ ಕಾರಣ ಶಾಲೆಗಳಿಗೆ ವಿತರಿಸುವ ಪ್ರಕ್ರಿಯೆಯೂ ಅಲ್ಪ ತಡವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪರಿಸ್ಥಿತಿ ಸುಧಾರಿಸಿದೆ’ ಎಂದು ಡಿಡಿಪಿಐ ಎಚ್‌.ಆರ್‌.ಬಸಪ್ಪ ತಿಳಿಸಿದರು.

ರಾಜ್ಯದಾದ್ಯಂತ ಶೇ 88ರಷ್ಟು ಪಠ್ಯಪುಸ್ತಕ ಲಭ್ಯವಾಗಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಹೋದ ವಾರ ತಿಳಿಸಿತ್ತು. ಪುಸ್ತಕಗಳನ್ನು ತಾಲ್ಲೂಕು ಕೇಂದ್ರಗಳಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ (ಬಿಇಒ) ಪ್ರಕಾಶಕರು ತಲುಪಿಸಬೇಕು. ಬಿಇಒ ಕಚೇರಿಯಿಂದ ಪುಸ್ತಕಗಳು ಶಾಲೆಗಳಿಗೆ ಪೂರೈಕೆ ಆಗುತ್ತವೆ. ಬಿಇಒ ಕಚೇರಿಗೆ ಬಂದಿರುವ ಪುಸ್ತಕಗಳನ್ನು ಶಾಲೆಗಳಿಗೆ ವಿತರಿಸುವ ಕಾರ್ಯ ಭರದಿಂದ ನಡೆದಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಈ ಬಾರಿ 260ಕ್ಕಿಂತ ಹೆಚ್ಚಿನ ಪುಟಗಳಿರುವ ಪಠ್ಯಪುಸ್ತಕಗಳನ್ನು ಎರಡು ಭಾಗಗಳಲ್ಲಿ ಮುದ್ರಿಸಲಾಗಿದೆ. ಭಾಷಾ ವಿಷಯಗಳ ಪುಸ್ತಕಗಳು 260ಕ್ಕಿಂತ ಕಡಿಮೆ ಪುಟಗಳು ಇರುವುದರಿಂದ ಒಂದೇ ಪುಸ್ತಕ ಇದೆ. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪುಸ್ತಕಗಳು ಹೆಚ್ಚಿನ ಪುಟಗಳನ್ನು ಹೊಂದಿರುವುದರಿಂದ ಎರಡು ಭಾಗ ಮಾಡಲಾಗಿದೆ.

ಕೆಲವು ವಿಷಯಗಳ ಪಾರ್ಟ್‌–1 ಪುಸ್ತಕಗಳು ಇದುವರೆಗೆ ಲಭಿಸದೆ ಇರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ. ಪುಸ್ತಕಗಳು ಒಂದೇ ಬಾರಿ ಪೂರೈಕೆಯಾಗದೆ ಇರುವುದು ಕೂಡಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತಲೆನೋವು ಉಂಟುಮಾಡಿದೆ.

‘ಎಲ್ಲ ಪಠ್ಯಗಳು ಒಂದೇ ಬಾರಿ ಪೂರೈಕೆಯಾದರೆ ಸುಲಭದಲ್ಲಿ ಶಾಲೆಗಳಿಗೆ ಕಳುಹಿಸಬಹುದು. ಆದರೆ ಒಂದು ವಿಷಯದ ಪಠ್ಯ ಇಂದು ಪೂರೈಕೆಯಾದರೆ, ಇನ್ನೊಂದು ವಿಷಯದ ಪಠ್ಯ ನಾಲ್ಕೈದು ದಿನಗಳ ಬಳಿಕ ಸರಬರಾಜಾಗುತ್ತದೆ. ಇದರಿಂದ ಶಾಲೆಗಳ ಮುಖ್ಯೋಪಾಧ್ಯಾಯರು ಹಲವು ಬಾರಿ ಬಿಇಒ ಕಚೇರಿಗೆ ತೆರಳಬೇಕಾಗುತ್ತದೆ’ ಎಂದು ನಗರದ ಶಾಲೆಯೊಂದರ ಮುಖ್ಯ ಶಿಕ್ಷಕರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.