ADVERTISEMENT

ಇಳಿಸಂಜೆಯ ತಂಗಾಳಿಗೆ ಬಣ್ಣ ತೀಡಿದ ಕಂಗಳು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 9:07 IST
Last Updated 13 ಸೆಪ್ಟೆಂಬರ್ 2017, 9:07 IST
ಇಳಿಸಂಜೆಯ ತಂಗಾಳಿಗೆ ಬಣ್ಣ ತೀಡಿದ ಕಂಗಳು
ಇಳಿಸಂಜೆಯ ತಂಗಾಳಿಗೆ ಬಣ್ಣ ತೀಡಿದ ಕಂಗಳು   

ಮೈಸೂರು: ವಿಶಾಲ ವೇದಿಕೆ ಮೇಲೆ ಝಗಮಗಿಸುವ ವಿದ್ಯುತ್ ದೀಪ, ಹೃನ್ಮನ ತಣಿಸುವ ಬಣ್ಣಗಳ ಮಿಳಿತ, ಎದೆಗೆ ತಟ್ಟುವಂಥ ಗಟ್ಟಿ ಸಂಗೀತ, ತುಂಬು ತಾರುಣ್ಯದ ಕಂಗಳಲ್ಲಿ ನರ್ತನ, ಹರೆಯದ ಕೊರಳೊಳಗಿಂದ ಸಿಳ್ಳೆ– ಕೂಗಾಟ... ಆ ಯುವ ಹೃದಯಗಳು ಮಂಗಳವಾರದ ಇಳಿಸಂಜೆಯ ತಂಗಾಳಿಗೆ ಬಣ್ಣ ತೀಡಿದವು.

ವಿಶ್ವವಿಖ್ಯಾತ ಮೈಸೂರು ದಸರೆಯ ಮುನ್ನಡಿ ಎಂದೇ ಪರಿಗಣಿಸಲಾಗುವ ‘ಯುವ ಸಂಭ್ರಮ’ಕ್ಕೆ ಮಾನಸಗಂಗೋತ್ರಿಯ ಬಯಲು ರಂಗಮಂದಿರ ಸಾಕ್ಷಿಯಾಯಿತು.
ಉದ್ಘಾಟನಾ ಸಮಾರಂಭ ಮುಗಿದಾಕ್ಷಣ ವೇದಿಕೆಗೆ ಬಂದ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ‘ನವದುರ್ಗೆ ಅವತಾರ’ದ ಮೂಲಕ ಉತ್ಸವಕ್ಕೆ ಶುಭ ಮುನ್ನುಡಿ ಬರೆದರು.

ಬಳಿಕ ಆರಂಭವಾದ ಹೆಜ್ಜೆನಾದ ತಂಡದ ಕಲಾವಿದೆಯರು ಇಡೀ ರಂಗಮಂದಿರವನ್ನು ಹಿಂದಿ ಚಿತ್ರರಂಗಕ್ಕೆ ವಾಲುವಂತೆ ಮಾಡಿದರು. ಯಕ್ಷಗಾನ, ಲಾವಣಿ, ಭರತನಾಟ್ಯ ಹೀಗೆ ವೈವಿಧ್ಯಮಯ ದಿರಿಸಿನಲ್ಲಿ ಬಂದ ಕಲಾವಿದೆಯರಿಗೆ ಸಿಳ್ಳೆ– ಚಪ್ಪಾಳೆಗಳ ಸ್ವಾಗತ. ಈ ತಂಡದ ನಾಯಕಿ ಜ್ಞಾನಾ ಐತಾಳ್‌ ಅವರು ‘ಪಿಂಗಾದ ಪೋರಿ, ಪಿಂಗಾದ ಪೋರಿ, ಪಿಂಗಾ...’ ಗೀತೆಗೆ ಮಾಡಿದ ಲಾವಣಿ ನೃತ್ಯ, ‘ಲೈಲಾ ಮ್ಞೆ ಲೈಲಾ’ ಹಾಡಿಗೆ ಹೆಜ್ಜೆ ಹಾಕಿದಾಗ ಎಲ್ಲೆಡೆ ಕರದಾಡನ. ಯುವಕರೆಲ್ಲ ಎದ್ದು ನಿಂತು ಮೊಬೈಲ್‌ನಲ್ಲಿ ಅವರ ನೃತ್ಯಸೊಗಸನ್ನು ಸೆರೆ ಹಿಡಿದುಕೊಂಡರು.

ADVERTISEMENT

ಶಿವನಿಂದಲೇ ಸ್ವಚ್ಛ ಭಾರತ ಸಂದೇಶ: ಬನ್ನೂರು– ಸಂತೇಮಾಳದ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸೈನ್ಯವೇ ವೇದಿಕೆಯನ್ನು ಆಕ್ರಮಿಸಿಕೊಂಡಿತು. 60ಕ್ಕೂ ಹೆಚ್ಚು ಯುವ ಮನಸ್ಸುಗಳು ಏಕಕಾಲಕ್ಕೆ ವೇದಿಕೆ ಮೇಲೆ ಬಂದಾಗ ಕಣ್ಣುಗಳಿಗೆ ಹಬ್ಬ. ‘ಸ್ವಚ್ಛ ಭಾರತ್‌’ ಸಂದೇಶ ಹೊತ್ತು ತಂದ ಈ ವಿದ್ಯಾರ್ಥಿಗಳ ಪ್ರದರ್ಶನ ವಿಶಿಷ್ಟವಾಗಿತ್ತು. ಸ್ವತಃ ಶಿವ, ಗಣಪತಿಯೇ ಭೂಲೋಕಕ್ಕೆ ಬಂದು ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಂದೇಶ ನೀಡುವಂತೆ ಮಾಡಿದ ನೃತ್ಯಸಂಯೋಜನೆ ವಾಹ್‌... ಎನ್ನುವಂತಿತ್ತು.

ಕರುಣಾಮಯಿ ಮಕ್ಕಳ ಕನ್ನಡ ಕಲರವ: ಯುವ ಸಂಭ್ರಮದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದ್ದು ಕರುಣಾಮಯಿ ಫೌಂಡೇಷನ್ನಿನ ‘ವಿಶೇಷ ಮಕ್ಕಳ’ ನೃತ್ಯ. ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿಗೆ ಕುಣಿದು ಕುಪ್ಪಳಿಸಿದ ಮಕ್ಕಳಿಗೆ ಎಲ್ಲ ದಿಕ್ಕಿನಿಂದಲೂ ಪ್ರಶಂಸೆಯ ಕೂಗು ಕೇಳಿ ಬಂತು. ಕಡುಗೆಂಪು– ಹಳದಿ ಬಣ್ಣದ ವೇಷ ತೊಟ್ಟ ಮಕ್ಕಳು ವೇದಿಕೆ ಮೇಲೆ ಸೂರ್ಯಕಾಂತಿ ಅರಳಿದಂತೆ ಕಂಡರು. ನೃತ್ಯದಲ್ಲಿಯೇ ನಿಜವಾದ ಪಾರಿವಾಳ ಹಾರಿಬಿಡುವ ಮೂಲಕ ‘ವಿಶೇಷ ಸ್ವಾತಂತ್ರ್ಯ’ದ ಸಂದೇಶ ಸಾರಿದರು. ಪ್ರದರ್ಶನ ಮುಗಿಯುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಕಲಾಕುಸುಮಗಳನ್ನು ಅಭಿನಂದಿಸಿದರು.

ಇದಾದ ಬಳಿಕ ಬಂದ ಪುಟ್ಟವೀರಮ್ಮ ಶ್ರವಣದೋಷವುಳ್ಳ ಬಾಲಕಿಯರ ಕಾಲೇಜಿನ ವಿದ್ಯಾರ್ಥಿಗಳ ‘ಮಹಿಷಾಸುರ ಮರ್ದಿನಿ’ ನೃತ್ಯರೂಪಕ ವೇದಿಕೆ ಮೇಲೆ ನೂಪುರ ಲೋಕವನ್ನೇ ಸೃಷ್ಟಿಸಿತು. ಸಂಗೀತಕ್ಕೆ, ಹಾಡಿನ ಪದಗಳಿಗೆ ಚೂರು ಹೆಚ್ಚೂಕಡಿಮೆ ಆಗದಂತೆ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿನಿಯರಿಗೆ ‘ಹ್ಯಾಟ್ಸ್‌ ಆಫ್‌’ ಹೇಳಲೇಬೇಕು. ತಡರಾತ್ರಿಯ ವರೆಗೂ ವಿವಿಧ ಕಾಲೇಜು ಗಳು ಸ್ಪರ್ಧೆಗೆ ಇಳಿದಿದ್ದವು.

ಉದ್ಘಾಟನೆಗೆ ಬಾರದ ಅತಿಥಿಗಳು:
ಉದ್ಘಾಟನಾ ಸಮಾರಂಭಕ್ಕೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ತನ್ವೀರ್‌ ಸೇಠ್‌ ಹಾಗೂ ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ವಾಸು ಬರಲೇ ಇಲ್ಲ. ಇದರಿಂದಾಗಿ ವೇದಿಕೆ ಮೇಲಿನ ಖುರ್ಚಿಗಳು ಖಾಲಿ ಉಳಿದವು. ಮೇಯರ್‌ ಎಂ.ಜೆ.ರವಿಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನ ಹಾಗೂ ಚಲನಚಿತ್ರ ನಟಿ ಕಾರುಣ್ಯಾ ರಾಮ್‌   ಉದ್ಘಾಟಿಸಿದರು. ಶಾಸಕ ಎಂ.ಕೆ.ಸೋಮಶೇಖರ್‌, ಎಸ್ಪಿ ರವಿ ಡಿ. ಚೆನ್ನಣ್ಣನವರ, ಪಾಲಿಕೆ ಕಮೀಷನರ್‌ ಜಿ.ಜಗದೀಶ್‌, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ.ವೆಂಕಟೇಶ್‌, ಮೃಗಾಯಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಉಪ ಮೇಯರ್‌ ರತ್ನಾ ಲಕ್ಷ್ಮಣ್‌, ಜಿ.ಪಂ ಸದಸ್ಯ ರಾಕೇಶ್‌ ಪಾಪಣ್ಣ, ಸೋಮಶೇಖರ್‌, ಶಿವಕುಮಾರ್ ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.