ADVERTISEMENT

ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ

ನಂಜನಗೂಡು ಉಪಚುನಾವಣೆ; ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 9:20 IST
Last Updated 18 ಫೆಬ್ರುವರಿ 2017, 9:20 IST
ನಂಜನಗೂಡಿನ ಭಾರತಿ ತೀರ್ಥ ಸಭಾಂಗಣದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು
ನಂಜನಗೂಡಿನ ಭಾರತಿ ತೀರ್ಥ ಸಭಾಂಗಣದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು   
ನಂಜನಗೂಡು: ಪಕ್ಷದ ಕೋರ್ ಕಮಿಟಿ ಯಲ್ಲಿ ಚರ್ಚಿಸಿ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
 
ನಗರದ ಭಾರತಿ ತೀರ್ಥ ಸಭಾಂಗಣದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
 
ಉಪಚುನಾವಣೆಗೆ ಪಕ್ಷದಿಂದ ಅಭ್ಯರ್ಥಿ ನಿಲ್ಲಿಸುವುದಿಲ್ಲ ಎಂದು ಹೇಳಲು ನನಗೇನು ತಲೆ ಕೊಟ್ಟಿದೆಯೇ? ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಕಳುಹಿಸಿ 2018ರ ಚುನಾವಣೆಗೆ ಕಾರ್ಯಕರ್ತರನ್ನು ಎಲ್ಲಿಂದ ತರೋಣ, ನನ್ನ ಪಕ್ಷ ಹಾಗೂ ಕಾರ್ಯಕರ್ತರನ್ನು ಯಾರಿಗೂ ಅಡ ಇಟ್ಟಿಲ್ಲ’ ಎಂದರು.
 
‘ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಕ್ಷೇತ್ರದ ಮೇಲೆ ಮಮತೆ ಆರಂಭವಾಗಿದೆ. ಸಚಿವ ಸಂಪುಟದ ಒಪ್ಪಿಗೆ ಪಡೆಯದೆ ₹ 170 ಕೋಟಿ ಅನುದಾನ ನೀಡಿ ಅಭಿ ವೃದ್ಧಿ ಕಾರ್ಯ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ದಿಢೀರ್ ಆಗಿ ಅಭಿವೃದ್ಧಿ ಕಾರ್ಯ ನಡೆಯಲು ಕಾರಣರಾದ ಶ್ರೀನಿವಾಸ ಪ್ರಸಾದ್ ಅವರನ್ನು ಅಭಿನಂದಿಸಬೇಕು’ ಎಂದು ವ್ಯಂಗ್ಯವಾಡಿದರು.
 
‘ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಂಪೂರ್ಣವಾಗಿ ಕೃಷಿ ಸಾಲ ಮನ್ನಾ ಮಾಡಲಾಗುವುದು. ಗರ್ಭಿಣಿಯ ರಿಗೆ 6 ತಿಂಗಳ ಕಾಲ ಮಾಸಿಕ ₹ 6 ಸಾವಿರದಂತೆ ₹ 36 ಸಾವಿರ ನೆರವು ಭತ್ಯೆ ನೀಡಲಾಗುವುದು ಎಂದು ಭರವಸೆ ನೀಡಿದರು.
 
ರಾಜ್ಯದಲ್ಲಿ ತೀವ್ರ ಬರಗಾಲದಿಂದ ತತ್ತರಿಸುತ್ತಿರುವ ರೈತರ ಸಾಲ ಮನ್ನಾ ಮಾಡದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರೊಂದಿಗೆ ಚೆಲ್ಲಾಟವಾ ಡುತ್ತಿವೆ’ ಎಂದು ಕಿಡಿಕಾರಿದರು.ಕಾರ್ಯಕರ್ತರು ಉಪಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.
 
ಶಾಸಕರಾದ ಜಿ.ಟಿ.ದೇವೇಗೌಡ, ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜು, ಕೆ.ಟಿ.ಶ್ರೀಕಂಠೇಗೌಡ, ಮೇಯರ್ ಎಂ.ಜೆ.ರವಿಕುಮಾರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ಆರ್.ವಿ.ಮಹದೇವಸ್ವಾಮಿ, ಶ್ರೀನಿವಾಸ್, ಶಿವಕುಮಾರ್, ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.