ADVERTISEMENT

ಎಚ್.ಡಿ.ಕೋಟೆ; ಮತ್ತೆ ಕಾಣಿಸಿಕೊಂಡ ಹುಲಿ?

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 5:50 IST
Last Updated 17 ನವೆಂಬರ್ 2017, 5:50 IST
ನಾಗರಹೊಳೆ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯ ಅಂತರಸಂತೆ ವಲಯದ ಕಾರಾಪುರ ಸರಯೂ ಲಾಡ್ಜ್ ಬಳಿ ಗುರುವಾರ ಅರಣ್ಯ ಇಲಾಖೆಯ ಸಿಬ್ಬಂದಿ ಕಬಿನಿ ಹಿನ್ನೀರಿನ ಸಮೀಪ ಹುಲಿ ಹೆಜ್ಜೆ ಗುರುತು ಗಮನಿಸಿದರು
ನಾಗರಹೊಳೆ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯ ಅಂತರಸಂತೆ ವಲಯದ ಕಾರಾಪುರ ಸರಯೂ ಲಾಡ್ಜ್ ಬಳಿ ಗುರುವಾರ ಅರಣ್ಯ ಇಲಾಖೆಯ ಸಿಬ್ಬಂದಿ ಕಬಿನಿ ಹಿನ್ನೀರಿನ ಸಮೀಪ ಹುಲಿ ಹೆಜ್ಜೆ ಗುರುತು ಗಮನಿಸಿದರು   

ಹಂಪಾಪುರ: ನಾಗರಹೊಳೆ ಹುಲಿ ರಕ್ಷಿತಾರಣ್ಯದ ಅಂತರಸಂತೆ ವಲಯದ ಕಾರಾಪುರ ಸರಯೂ ಲಾಡ್ಜ್ ಬಳಿ ಹುಲಿಯೊಂದು ಕಾಣಿಸಿಕೊಂಡಿದ್ದು, ಪತ್ತೆಗೆ ಟ್ರ್ಯಾಪಿಂಗ್ ಕ್ಯಾಮೆರಾ ಅಳವಡಿಸಲಾಗಿದೆ.

ಬುಧವಾರ ರಾತ್ರಿ ಲಾಡ್ಜ್‌ನ ಸಿಬ್ಬಂದಿ ಹುಲಿಯನ್ನು ಗಮನಿಸಿ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಅಂತರಸಂತೆ ವಲಯಾರಣ್ಯಾಧಿಕಾರಿ ವಿನಯ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿ ಪತ್ತೆಗೆ 2 ಟ್ರ್ಯಾಪಿಂಗ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ರಾತ್ರಿ ವೇಳೆ ಕತ್ತಲಿನಲ್ಲಿ ಚಿರತೆಯನ್ನು ಕಂಡು ಹುಲಿ ಎಂದು ಲಾಡ್ಜ್‌ನ ಸಿಬ್ಬಂದಿ ಭ್ರಮಿಸಿರಬಹುದು. ಈ ಭಾಗದಲ್ಲಿ ಚಿರತೆಗಳು ಹೆಚ್ಚಾಗಿ ಓಡಾಡುತ್ತಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. 20ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು. ಆದರೆ, ಹುಲಿಯ ಚಲನವಲನವಾಗಲಿ, ಹೆಜ್ಜೆ ಗುರುತುಗಳಾಗಲಿ ಪತ್ತೆಯಾಗಲಿಲ್ಲ.

ADVERTISEMENT

ಹಿಂದೆ ಹುಲಿ ಕಾಣಿಸಿತ್ತು: ಹತ್ತು ದಿನಗಳ ಹಿಂದೆ ಇಲ್ಲಿಗೆ ನೂರು ಮೀಟರ್ ದೂರದಲ್ಲಿರುವ ಕಬಿನಿ ರಿವರ್ ಲಾಡ್ಜ್ (ಜಂಗಲ್ ಲಾಡ್ಜ್)ನಲ್ಲಿ ಹುಲಿ ಕಾಣಿಸಿಕೊಂಡಿತ್ತು. ಇದರ ಸೆರೆಗೆ ದಸರಾ ಆನೆಗಳಾದ ಅರ್ಜುನ, ಅಭಿಮನ್ಯು ಮತ್ತು ಕೃಷ್ಣ ಆನೆಗಳ ಸಹಾಯದಲ್ಲಿ ಕೂಂಬಿಂಗ್ ನಡೆಸಲಾಗಿತ್ತು. ಆದರೆ, ಹುಲಿ ಪತ್ತೆಯಾಗಿರಲಿಲ್ಲ. 

ನಂತರ, ಕ್ಯಾಮೆರಾದಲ್ಲಿ ಹುಲಿ ಲಾಡ್ಜ್‌ನಿಂದ ಹೊರ ಹೋಗಿರುವುದು ಕಂಡು ಬಂತು. ಇದರ ಹೆಜ್ಜೆ ಗುರುತುಗಳ ಜಾಡು ಹಿಡಿದು ಕಬಿನಿ ಹಿನ್ನೀರಿನಲ್ಲೂ ಬೋಟ್ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು. ಆದಾಗ್ಯೂ ಹುಲಿ ಕಣ್ಣಿಗೆ ಬಿದ್ದಿರಲಿಲ್ಲ.

ಇದೇ ಹುಲಿ ಈಗ ಮತ್ತೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಪದೇ ಪದೇ ಹುಲಿ ಕಾಣಿಸಿಕೊಳ್ಳುತ್ತಿರುವುದರಿಂದ ಕಾರಾಪುರ ಮತ್ತು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭೀತಿ ಆವರಿಸಿದೆ. ಶೀಘ್ರದಲ್ಲೇ ಹುಲಿಯನ್ನು ಸೆರೆ ಹಿಡಿಯಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.