ADVERTISEMENT

ಐಟಿ ಪಾರ್ಕ್ ನಿರ್ಮಾಣ ಕಾರ್ಯ ಶುರು

ಜಿ.ಬಿ.ನಾಗರಾಜ್
Published 11 ಏಪ್ರಿಲ್ 2017, 9:16 IST
Last Updated 11 ಏಪ್ರಿಲ್ 2017, 9:16 IST

ಮೈಸೂರು: ಬಹುದಿನಗಳಿಂದ ನನೆ ಗುದಿಗೆ ಬಿದ್ದಿದ್ದ ‘ಮಾಹಿತಿ ತಂತ್ರಜ್ಞಾನ ಪಾರ್ಕ್’ (ಐಟಿ) ನಿರ್ಮಾಣ ಕಾರ್ಯ ಆರಂಭವಾಗಿದ್ದು, 2018ರ ವೇಳೆಗೆ ನವ ಉದ್ಯಮಿಗಳಿಗೆ ಸೇವೆ ಒದಗಿಸುವ ಸಾಧ್ಯತೆ ಇದೆ.

ಮಾಹಿತಿ ತಂತ್ರಜ್ಞಾನ ಉದ್ಯಮ ವನ್ನು ಉತ್ತೇಜಿಸುವ ಉದ್ದೇಶದಿಂದ ಐಟಿ ಪಾರ್ಕ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೆಬ್ಬಾಳದ ಇನ್ಫೊಸಿಸ್‌ ಸಮೀಪ  2 ಎಕರೆ 30 ಗುಂಟೆ ಭೂಮಿಯನ್ನು 2008ರಲ್ಲಿ ಒದಗಿಸಿತ್ತು. ಕೇಂದ್ರದ ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾ ನಿಕ್ಸ್‌ ಇಲಾಖೆಯ ‘ಸಾಫ್ಟ್‌ವೇರ್‌ ಟೆಕ್ನಾ ಲಜಿ ಪಾರ್ಕ್ ಆಫ್‌ ಇಂಡಿಯಾ’ (ಎಸ್‌ಟಿಪಿಐ) ವತಿಯಿಂದ ಪಾರ್ಕ್‌ ನಿರ್ಮಾಣವಾಗಬೇಕಿತ್ತು. ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಇದು ನನೆಗುದಿಗೆ ಬಿದ್ದಿತ್ತು.

ಸಾಂಸ್ಕೃತಿಕ ನಗರಿಯಲ್ಲಿ ಐಟಿ ಉದ್ಯಮ ಏರುಗತಿಯಲ್ಲಿದೆ. 2016–17ರ ಆರ್ಥಿಕ ವರ್ಷದಲ್ಲಿ ₹ 2,500 ಕೋಟಿ ಮೌಲ್ಯದ ಮಾಹಿತಿ ಮತ್ತು ತಂತ್ರಜ್ಞಾನ ಸೇವೆಯನ್ನು ಇಲ್ಲಿಂದ ರಫ್ತು ಮಾಡಲಾಗಿದೆ. ಇದರಲ್ಲಿ ಇನ್ಪೊಸಿಸ್‌ (₹ 1,600 ಕೋಟಿ) ಪಾಲು ಹೆಚ್ಚಾಗಿದ್ದು, ಎಲ್‌ಅಂಡ್‌ಟಿ, ಎಸ್‌ಪಿಐ ಸೇರಿ ಇತರ ಕಂಪೆನಿಗಳು ವಿದೇಶಕ್ಕೆ ಸೇವೆ ಒದಗಿಸುತ್ತಿವೆ. ಅಮೆರಿಕ, ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯ ಹೆಚ್ಚು ಸೇವೆ ಪಡೆಯುತ್ತಿವೆ. ಬಹುತೇಕ ಕಂಪೆನಿಗಳು ಬೆಂಗಳೂರಿನಿಂದ ಮೈಸೂರಿನತ್ತ ಮುಖ ಮಾಡಿದ ಬಳಿಕ ಐಟಿ ರಫ್ತು ಪ್ರಮಾಣ ಪ್ರತಿ ವರ್ಷ ಶೇ 6–7ರಷ್ಟು ಹೆಚ್ಚಾಗುತ್ತಿದೆ.

ADVERTISEMENT

‘ನವ ಉದ್ಯಮಿಗಳಿಗೆ ಉಪಯುಕ್ತ ವಾಗುವ ನಿಟ್ಟಿನಲ್ಲಿ ಐಟಿ ಪಾರ್ಕ್‌ ಅಭಿ ವೃದ್ಧಿಪಡಿಸಲಾಗುತ್ತಿದೆ. ₹ 25 ಕೋಟಿ ವೆಚ್ಚದಲ್ಲಿ 40,000  ಚದರ ಅಡಿಯ ಕಟ್ಟಡಕ್ಕೆ ಅಡಿಪಾಯ ಹಾಕಲಾಗಿದೆ. 2016ರ ಅಕ್ಟೋಬರ್‌ನಿಂದ ಕಾಮಗಾರಿ ಆರಂಭವಾಗಿದ್ದು, 2018ಕ್ಕೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ’ ಎಂದು ಎಸ್‌ಟಿಪಿಐ ಜಂಟಿ ನಿರ್ದೇಶಕ ಜಯಪ್ರಕಾಶ್‌ ಮಾಹಿತಿ ನೀಡಿದ್ದಾರೆ.

ನವ ಉದ್ಯಮಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಒಳಾಂಗಣ ವಿನ್ಯಾಸ ಮಾಡಲಾಗುತ್ತಿದ್ದು, ಅಂತರ್ಜಾಲ ಹಾಗೂ ಯುಪಿಎಸ್‌ ಸೇವೆ ಒದಗಿಸಲಾಗುತ್ತದೆ. ಇದಕ್ಕೆ ಮಾಸಿಕ ಬಾಡಿಗೆ ನಿಗದಿ ಮಾಡಲಾಗುತ್ತದೆ.

‘ಚೆನ್ನೈ ಹಾಗೂ ಬೆಂಗಳೂರಿನ ಅನೇಕರು ಸಾಂಸ್ಕೃತಿಕ ನಗರಿಯಲ್ಲಿ ಉದ್ಯಮ ಸ್ಥಾಪನೆಗೆ ಮುಂದೆ ಬರುತ್ತಿ ದ್ದಾರೆ. ಆದರೆ, ಕೆಲ ತಿಂಗಳ ಕಾಲ ಪ್ರಾಯೋಗಿಕ ಕಾರ್ಯನಿರ್ವಹಣೆ ಮಾಡ ಬೇಕಾಗುತ್ತದೆ. ಈ ಅವಧಿಯಲ್ಲಿ ಕಟ್ಟಡ, ಸೌಲಭ್ಯಗಳನ್ನು ರೂಪಿಸಿಕೊಳ್ಳುವುದು ಕಷ್ಟ. ಇಂತಹವರಿಗೆ ಐಟಿ ಪಾರ್ಕ್‌ ಉಪಯುಕ್ತವಾಗಲಿದೆ’ ಎಂದು ವಿವರಿಸಿದರು.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ ಸುಮಾರು 6 ಸಾವಿರ ಚದರ ಅಡಿಯ ಜಾಗವನ್ನು ಒದಗಿಸಲಾ ಗುತ್ತಿದೆ. ಅಗತ್ಯಕ್ಕೆ ತಕ್ಕಂತೆ ಒಳಾಂಗಣ ವಿನ್ಯಾಸ ರೂಪಿಸಿಕೊಳ್ಳುವ ಜವಾಬ್ದಾರಿ ಕಂಪೆನಿಯದು. ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜು ಆವರಣದ ಲ್ಲಿರುವ ಎಸ್‌ಟಿಪಿಐ ಕಚೇರಿ ಕೂಡ ಈ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.