ADVERTISEMENT

ಒಳ್ಳೆಯ ಮಾವಿನ ಹಣ್ಣಿಗೆ ಕಾಯಬೇಕು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 6:43 IST
Last Updated 14 ಮಾರ್ಚ್ 2017, 6:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ಮಾರುಕಟ್ಟೆಗೆ ಇದೀಗ ಮಾವಿನಹಣ್ಣು ಬರತೊಡಗಿದ್ದು, ಬೆಲೆ ಹೆಚ್ಚಿದೆ. ಆಂಧ್ರಪ್ರದೇಶ, ತಮಿಳು ನಾಡಿನಲ್ಲಿ ಬೆಳೆದಿರುವ ಕೆಲವೊಂದು ತಳಿಯ ಮಾವಿನ ಹಣ್ಣುಗಳು ಅವಧಿಗೂ ಮುನ್ನವೇ ಕಾಲಿರಿಸಿವೆ.

ರಾಜ್ಯದಲ್ಲಿ ಬೆಳೆದಿರುವ ಮಾವಿನಹಣ್ಣು ಗ್ರಾಹಕರ ಕೈಸೇರಲು ಇನ್ನು ಮೂರು ವಾರ ಬೇಕು. ಜನವರಿಯಲ್ಲಿ ಹೂಬಿಟ್ಟು, ಕಾಯಾಗಿ ಮಾಗುತ್ತಿವೆ. ಈ ಮೂರು ವಾರದಲ್ಲಿ ಬಿರುಗಾಳಿ, ಅಲಿಕಲ್ಲು ಬೀಳದಿದ್ದರೆ ಗುಣಮಟ್ಟದ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.

ಮಳೆಯಾಶ್ರಯದಲ್ಲಿ ಬೆಳೆದಿರುವ ಮಾವು ಗಾತ್ರದಲ್ಲೂ ಕಡಿಮೆ ಇವೆ. ನಿರೀಕ್ಷಿಸಿದಷ್ಟು ಗಾತ್ರದ ಕಾಯಿಗಳು ರೂಪು ತಳೆಯುತ್ತಿಲ್ಲ. ತೇವಾಂಶದ ಕೊರತೆಯಿಂದ ಮರದಲ್ಲಿ ಗಟ್ಟಿಯಾಗಿಯೂ ನಿಲ್ಲುತ್ತಿಲ್ಲ. ಯುಗಾದಿ ಹೊತ್ತಿಗೆ ಪೂರ್ವ ಮುಂಗಾರಿನ ಗಾಳಿ, ಆಲಿಕಲ್ಲು ಮಿಶ್ರಿತ ಮಳೆ ಬಿದ್ದರೆ ಫಸಲು ನಾಶವಾಗುವ ಸಾಧ್ಯತೆ ಹೆಚ್ಚಿದೆ. ನೀರಾವರಿ ಪ್ರದೇಶದಲ್ಲಿ ಬೆಳೆದಿರುವ ಮಾವಿನ ಬೆಳೆ ಚೆನ್ನಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಜಿಲ್ಲೆಯಲ್ಲಿ ಹಂಪಾಪುರ, ಬಿಳಿಕೆರೆ, ನಂಜನಗೂಡು, ವರುಣಾ ಭಾಗಗಳಲ್ಲಿ ಹೆಚ್ಚಾಗಿ ಮಾವು ಬೆಳೆಯಲಾಗುತ್ತಿದೆ. ಉತ್ತಮ ಗುಣಮಟ್ಟದ ಮಾವು ಏಪ್ರಿಲ್ ಮೊದಲ ವಾರದಲ್ಲಿ ಮಾರುಕಟ್ಟೆ ಬರುವ ನಿರೀಕ್ಷೆ ಇದೆ.

ಬೀನ್ಸ್ ದುಬಾರಿ: ಬೀನ್ಸ್ ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ದರ ದಾಖಲಿಸಿದೆ. ಈ ತಿಂಗಳ ಆರಂಭದಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ದರ ಕೆ.ಜಿಗೆ ₹ 36 ಇದ್ದದ್ದು, ಇದೀಗ ₹ 39ಕ್ಕೆ ಏರಿಕೆ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹ 70ರಿಂದ ₹ 90ರ ವರೆಗೂ ಧಾರಣೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆವಕವೂ ಕಡಿಮೆಯಾಗಿದೆ. ಕಳೆದ ವರ್ಷ ಇದೇ ತಿಂಗಳಿನಲ್ಲಿ ಎಪಿಎಂಸಿ ಮಾರುಕಟ್ಟೆಗೆ ದಿನಕ್ಕೆ ಸರಾಸರಿ 186 ಕ್ವಿಂಟಲ್‌ನಷ್ಟು ಬೀನ್ಸ್ ಬರುತ್ತಿತ್ತು. ಇದೀಗ ಆವಕದ ಪ್ರಮಾಣ ದಿನವೊಂದಕ್ಕೆ 89 ಕ್ವಿಂಟಲ್‌ಗೆ ಕುಸಿದಿದೆ.

ಟೊಮೆಟೊ ಕೆ.ಜಿ ₹ 21ರಿಂದ 18ಕ್ಕೆ ಕಡಿಮೆಯಾಗಿರುವುದನ್ನು ಬಿಟ್ಟರೆ ಉಳಿದ ಯಾವ ತರಕಾರಿ ಬೆಲೆಯೂ ಇಳಿಕೆಯಾಗಿಲ್ಲ. ಕ್ಯಾರೆಟ್ ಕೆ.ಜಿ ₹ 15ರಿಂದ 16ಕ್ಕೆ, ಎಲೆಕೋಸು ₹ 5.50 ಯಿಂದ ₹ 7, ದಪ್ಪ ಮೆಣಸಿನ ಕಾಯಿ ₹ 29.50ಯಿಂದ ₹ 32, ಹೂ ಕೋಸು ₹ 14ರಿಂದ ₹ 21, ಹಸಿ ಮೆಣಸಿನಕಾಯಿ ₹ 17ರಿಂದ ₹ 17.50, ಬೀಟ್ರೂಟ್ ₹ 11ರಿಂದ ₹ 14ಕ್ಕೆ ಹೆಚ್ಚಿದೆ. ಹುಣಸೆಹಣ್ಣು ₹ 67ರಿಂದ ₹ 71ಕ್ಕೆ ಹೆಚ್ಚಿದ್ದು, ಬೆಳೆಗಾರರಲ್ಲಿ ನಿರೀಕ್ಷೆ ಗರಿಗೆದರಿಸಿದೆ.

ಕೋಳಿಮೊಟ್ಟೆ ದರ ಇಳಿಕೆ: ಕೋಳಿಮೊಟ್ಟೆ ಧಾರಣೆ ಒಂದಕ್ಕೆ ₹ 3.88ರಿಂದ 3.37ಕ್ಕೆ ಕಡಿಮೆಯಾಗಿದೆ. ಬ್ರಾಯ್ಲರ್ ಕೋಳಿ ಮಾಂಸ ಕೆ.ಜಿ.ಗೆ ₹ 59ರಿಂದ ₹ 69ಕ್ಕೆ ಏರಿಕೆಯಾ ಗಿದ್ದರೆ, ಕಲ್ ಬರ್ಡ್ ₹ 92ರಲ್ಲೇ ಸ್ಥಿರವಾಗಿದೆ.

ಅಕ್ಕಿ ದರ ಹೆಚ್ಚಾಗುತ್ತಿದೆ. ಹೆಸರು ಕಾಳು ದರ ಅಲ್ಪ ಇಳಿಕೆ ಕಂಡಿದ್ದರೆ, ಉದ್ದಿನಬೇಳೆ ದರ ₹ 80ರಿಂದ ₹ 94ಕ್ಕೆ ಹೆಚ್ಚಾಗಿದೆ.

**

ಉತ್ತಮ ಗುಣಮಟ್ಟದ ಮಾವಿನಹಣ್ಣು ಸಿಗಬೇಕಾದರೆ ಇನ್ನೂ ಮೂರು ವಾರಗಳು ಬೇಕು. ಮಳೆಯಾಶ್ರಿತದಲ್ಲಿ ಕಡಿಮೆ ಗುಣ ಮಟ್ಟದ ಫಸಲು ಬರುವ ನಿರೀಕ್ಷೆ ಇದೆ
-ಮಂಜುನಾಥ್, ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.