ADVERTISEMENT

ಕಬಿನಿಯಿಂದ ತಮಿಳುನಾಡಿಗೆ ನೀರು: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 8:46 IST
Last Updated 25 ಜುಲೈ 2017, 8:46 IST

ನಂಜನಗೂಡು: ಕಬಿನಿಯಿಂದ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ಹುಲ್ಲಹಳ್ಳಿ, ರಾಮಪುರ, ಕಬಿನಿ ಬಲದಂಡೆ, ಎಡದಂಡೆ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತರು ಆಗ್ರಹಪಡಿಸಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಸೆಳೇಯಲು ತಾಲ್ಲೂಕಿನ ರೈತಸಂಘ, ಕಬ್ಬು ಬೆಳೆಗಾರರ ಸಂಘ, ಹಸಿರುಸೇನೆ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಇಲ್ಲಿನ ದೇವರಾಜ ಅರಸು ಸೇತುವೆ ಮೇಲೆ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ವಿದ್ಯಾಸಾಗರ್, ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ರಾಜ್ಯದ ರೈತರಿಗೆ ವಂಚಿಸುತ್ತಿದೆ ಎಂದು ಆರೋಪಿಸಿದರು.

ADVERTISEMENT

‘ತಕ್ಷಣ ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ಈ ಭಾಗದ ನಾಲೆಗಳಿಗೆ ನೀರು ಹರಿಸಬೇಕು’ ಎಂದು ಒತ್ತಾಯಿಸಿದರು.

ಸಂಚಾರ ಅಸ್ತವ್ಯಸ್ತ: ಮೈಸೂರು–ಊಟಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ದೇವರಾಜ ಅರಸು ಸೇತುವೆ ಮೇಲೆ ರೈತರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದು, ವಾಹನ ಸಂಚಾರದ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಸೇತುವೆಯ ಎರಡು ಬದಿಯಲ್ಲಿ ವಾಹನಗಳು ನಿಂತು ಪ್ರಯಾಣಿಕರು ಪರದಾಡಿದರು.

ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಇಇ ಮರಿಸ್ವಾಮಿ, ‘ರೈತರ ಬೇಡಿಕೆಯಂತೆ ಇಂದಿನಿಂದ ಹುಲ್ಲಹಳ್ಳಿ ಹಾಗೂ ರಾಮಪುರ ನಾಲೆಗಳಿಗೆ ನೀರು ಹರಿಸಲಾಗುವುದು’ ಎಂದು ಭರವಸೆ ನೀಡಿದರು.ಜುಲೈ 26ರಂದು ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದೆ. ಅಲ್ಲಿ ಕಬಿನಿ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಹರಿಸಲು ನಿರ್ಧರಿಸಲಾಗುವುದು. ಆ ಬಳಿಕ ರೈತರು ರಸ್ತೆ ತಡೆ ಪ್ರತಿಭಟನೆ ವಾಪಸು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.