ADVERTISEMENT

ಕಾರಾಗೃಹ ಸಿಬ್ಬಂದಿ ಶೀಘ್ರ ದ್ವಿಗುಣ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 9:17 IST
Last Updated 24 ಜೂನ್ 2017, 9:17 IST
ಕಾರಾಗೃಹ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಎಚ್‌.ಎನ್‌.ಸತ್ಯನಾರಾಯಣ ರಾವ್‌ ಅವರು ವೀಕ್ಷಕ ನಾಗರಾಜಗೌಡ ಫಡಿಗೌಡ ಪಾಟೀಲ ಅವರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಿದರು
ಕಾರಾಗೃಹ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಎಚ್‌.ಎನ್‌.ಸತ್ಯನಾರಾಯಣ ರಾವ್‌ ಅವರು ವೀಕ್ಷಕ ನಾಗರಾಜಗೌಡ ಫಡಿಗೌಡ ಪಾಟೀಲ ಅವರಿಗೆ ಸರ್ವೋತ್ತಮ ಪ್ರಶಸ್ತಿ ಪ್ರದಾನ ಮಾಡಿದರು   

ಮೈಸೂರು: ಕಾರಾಗೃಹ ಇಲಾಖೆಯನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ 1,811 ಹುದ್ದೆಗೆ ಮಂಜೂರಾತಿ ನೀಡಿದ್ದು, ಮುಂದಿನ 3 ವರ್ಷಗಳಲ್ಲಿ ಸಿಬ್ಬಂದಿಯ ಸಂಖ್ಯೆ ದ್ವಿಗುಣಗೊಳ್ಳಲಿದೆ ಎಂದು ಕಾರಾಗೃಹ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಎಚ್‌.ಎನ್‌.ಸತ್ಯನಾರಾಯಣ ರಾವ್‌ ಹೇಳಿದರು.

ಇಲ್ಲಿನ ಕೇಂದ್ರ ಕಾರಾಗೃಹದ ಸಿಬ್ಬಂದಿ ತರಬೇತಿ ಸಂಸ್ಥೆಯ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆದ 44ನೇ ತಂಡದ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.

‘ರಾಜ್ಯದ ಎಲ್ಲ ಜೈಲುಗಳಲ್ಲಿ 1,742 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಣಾಮಕಾರಿ ಸುಧಾರಣೆಗೆ ಸರ್ಕಾರ ಒಲವು ತೋರಿದೆ. ಕಾರಾಗೃಹ ಹಾಗೂ ಪೊಲೀಸ್‌ ಇಲಾಖೆಯನ್ನು ಸಂಬಳಕ್ಕಾಗಿ ಸೇರಬಾರದು. ಸೇವಾ ಮನೋಭಾವ ಹೊಂದಿರುವ ಆಸಕ್ತರು ಮಾತ್ರ ಈ ಹುದ್ದೆ ಆಯ್ಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ವಿಡಿಯೊ ಕಾನ್ಫರೆನ್ಸ್‌ ಮೂಲಕ ಕೈದಿಗಳ ವಿಚಾರಣೆ ನಡೆಸುವ ವ್ಯವಸ್ಥೆ ಒಂದು ವರ್ಷದಲ್ಲಿ ರಾಜ್ಯದ ಎಲ್ಲ ಜೈಲುಗಳಲ್ಲಿ ಜಾರಿಗೆ ಬರಲಿದೆ. ಸಂಬಂಧಿಸಿದ ಉಪಕರಣಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ಉಪ ಕಾರಾಗೃಹಗಳಿಗೂ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ’ ಎಂದರು.

‘ವಿಚಾರಣಾಧೀನ ಹಾಗೂ ಶಿಕ್ಷೆಗೆ ಗುರಿಯಾದ 14,800 ಕೈದಿಗಳು ರಾಜ್ಯದ ಜೈಲುಗಳಲ್ಲಿದ್ದಾರೆ. ಜೈಲುಗಳ ಸಾಮರ್ಥ್ಯಕ್ಕಿಂತ ಸರಾಸರಿ ಶೇ 150ರಷ್ಟು ಹೆಚ್ಚುವರಿ ಕೈದಿಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಕೇಂದ್ರ ಕಾರಾಗೃಹ ಸ್ಥಳಾಂತರಕ್ಕೆ ಮೈಸೂರಿನಲ್ಲಿ ಭೂಮಿ ಸಿಗುತ್ತಿಲ್ಲ. ಸ್ಥಳ ಹುಡುಕಾಟ ಪ್ರಕ್ರಿಯೆ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರ ಕಾರಾಗೃಹ ಮಂಜೂರಾಗಿದೆ’ ಎಂದು ತಿಳಿಸಿದರು.

ದಕ್ಷಿಣ ವಲಯದ ಐಜಿಪಿ ವಿಪುಲ್‌ ಕುಮಾರ್‌, ಪೊಲೀಸ್‌ ಕಮಿಷನರ್‌ ಡಾ.ಎ.ಸುಬ್ರಮಣ್ಯೇಶ್ವರರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ, ಪ್ರಾಂಶುಪಾಲ ವಿ.ಶೇಷುಮೂರ್ತಿ ಇದ್ದರು.

ಎನ್‌.ಎಫ್‌.ಪಾಟೀಲ ಸರ್ವೋತ್ತಮ
ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ನಿಯೋಜನೆಗೊಂಡಿರುವ ವೀಕ್ಷಕ ನಾಗರಾಜಗೌಡ ಫಡಿಗೌಡ ಪಾಟೀಲ ಅವರು ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎಸ್‌.ದೊರೆನಾಯ್ಕ ಉತ್ತಮ ಪ್ರಶಿಕ್ಷಣಾರ್ಥಿ, ಗಂಗರಾಜು ಅವರು ಡಿಜಿಪಿ ಮತ್ತು ಐಜಿಪಿ ಕಪ್‌ ಪಡೆದಿದ್ದಾರೆ. ಒಳಾಂಗಣ ವಿಭಾಗದಲ್ಲಿ ಹನುಮಪ್ಪ ಹಳ್ಳಿ (ಪ್ರಥಮ), ಕೆ.ಸಿ.ಸುರೇಶ್‌ (ದ್ವಿತೀಯ), ಹೊರಾಂಗಣ ವಿಭಾಗದಲ್ಲಿ ರಮೇಶ್‌ ಕಲ್ಲಪ್ಪ ಢವಳೇಶ್ವರ (ಪ್ರಥಮ), ವೀರೇಶ್‌ ಹಂದ್ರಾಳು (ದ್ವಿತೀಯ), ಫೈರಿಂಗ್‌ ವಿಭಾಗದಲ್ಲಿ ಮಹೇಶಗೌಡ (ಪ್ರಥಮ), ಕೆಂಪಣ್ಣ ಕೋಳಿ (ದ್ವಿತೀಯ) ಪ್ರಶಸ್ತಿ ಪಡೆದರು.

ಅಂಕಿ–ಅಂಶ

61 ಒಟ್ಟು ವೀಕ್ಷಕ ಪ್ರಶಿಕ್ಷಣಾರ್ಥಿಗಳು

34 ಬಿ.ಎ, ಬಿ.ಎಸ್ಸಿ ಪದವೀಧರರು

16 ಡಿ.ಇಡಿ, ಬಿ.ಇಡಿ ಪೂರೈಸಿದವರು

5 ಡಿಪ್ಲೊಮಾ ಶಿಕ್ಷಣ ಪಡೆದವರು

1 ಎಂಜಿನಿರಿಂಗ್‌ ಪದವೀಧರ

* * 

ದೇಶದಲ್ಲಿಯೇ ಮಾದರಿ ಕಾರಾಗೃಹ ವ್ಯವಸ್ಥೆ ರಾಜ್ಯದಲ್ಲಿ ಇದೆ. ಸೇವೆಗೆ ನಿಯೋಜನೆಗೊಂಡ ಸಿಬ್ಬಂದಿ ಶಿಸ್ತು, ನಿಷ್ಠೆ, ಸಂಯಮದಿಂದ ಕಾರ್ಯನಿರ್ವಹಿಸಬೇಕು
ಜಿ.ವೀರಭದ್ರಸ್ವಾಮಿ
ಎಐಜಿಪಿ, ಕಾರಾಗೃಹ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.