ADVERTISEMENT

ಕಾಳಿಂಗರಾವ್‌ ಕೊಡುಗೆ ಅನನ್ಯ: ಮೆಚ್ಚುಗೆ

ಕಾವ್ಯ ಗಾಯನ ಸುಗಮ ಸಂಗೀತವಾದ ಬಗೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2014, 9:14 IST
Last Updated 1 ಸೆಪ್ಟೆಂಬರ್ 2014, 9:14 IST

ಮೈಸೂರು: ಕಾವ್ಯ ಗಾಯನವನ್ನು ಲಘು ಸಂಗೀತವೆಂದು ಮೂಗು ಮುರಿಯುತ್ತಿದ್ದ ಕಾಲದಲ್ಲಿ ಪಿ. ಕಾಳಿಂಗರಾವ್‌ ಸುಗಮ ಸಂಗೀತಕ್ಕೆ ನಿರ್ದಿಷ್ಟ ಚೌಕಟ್ಟು ನಿರ್ಮಿಸಿ ಹೊಸ ಪದ್ಧತಿ ರೂಢಿಗೆ ತಂದರು ಎಂದು ಸಂಗೀತ ವಿದ್ವಾಂಸ ಡಾ.ರಾ. ಸತ್ಯನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

ಕುವೆಂಪು ನಗರದ ವೀಣೆ ಶೇಷಣ್ಣ ಭವನದಲ್ಲಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ವತಿಯಿಂದ ಭಾನುವಾರ ಆಯೋಜಿಸಿದ್ದ ಪಿ. ಕಾಳಿಂಗರಾವ್‌ ಅವರ ಜನ್ಮಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸ್ತ್ರೀಯ ಸಂಗೀತ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲವದು. ಶಾಸ್ತ್ರೀಯ ಹಾಗೂ ಸುಗಮ ಸಂಗೀತದ ನಡುವೆ ಸ್ಪರ್ಧೆ ಉಂಟಾಗಲು ಪಿ. ಕಾಳಿಂಗರಾವ್‌ ಕಾರಣ. ಕಾವ್ಯ ಗಾಯನಕ್ಕೆ ಸುಗಮ ಸಂಗೀತದ ಮಾನ್ಯತೆ ತಂದುಕೊಟ್ಟರು. ಶಾಸ್ತ್ರೀಯ ಸಂಗೀತಕ್ಕೆ ಗೌರವ ನೀಡುತ್ತಲೇ, ಕರ್ನಾಟಕ ಸಂಗೀತದಲ್ಲಿ ಹೊಸ ಪ್ರಕಾರವನ್ನು ಹುಟ್ಟುಹಾಕಿದರು. ಕನ್ನಡ ಗೀತೆಗಳ ಮೇಲಿನ ವ್ಯಾಮೋಹ ಇದಕ್ಕೆ ಪ್ರೇರಣೆ ನೀಡಿತು ಎಂದು ಹೇಳಿದರು.

ಕಾಳಿಂಗರಾವ್‌ ಅವರು ಸ್ವಭಾವದಲ್ಲಿ ವಿನಯಶೀಲರು, ಸೃಜನಶೀಲರು ಆಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದು ಮೈಸೂರಿಗರಾದರು. ಸಾಂಸ್ಕೃತಿಕ ನಗರಿಯ ಸಂಗೀತಕ್ಕೆ ಬಹುದೊಡ್ಡ ಕೊಡುಗೆ ನೀಡಿದರು. ಕಾವ್ಯ ಗಾಯನವನ್ನು ಎಲ್ಲರೂ ಇಷ್ಟಪಡುವ ರೀತಿಯಲ್ಲಿ ಬೆಳೆಸಿದರು ಎಂದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷರಾದ ವೈ.ಕೆ. ಮುದ್ದುಕೃಷ್ಣ ಮಾತನಾಡಿ, ತಮ್ಮ ಬದುಕಿನ 40 ವರ್ಷವನ್ನು ಅವರು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕಳೆದರು. ಸಂಗೀತ ನಿರ್ದೇಶಕರಾಗಿ ಸಿನಿಮಾ ರಂಗದಲ್ಲಿ ಬೇರೂರುವ ಹೊತ್ತಿಗೆ ಕಾವ್ಯ ಗಾಯನದ ಕಡೆ ಆಸಕ್ತಿ ಹೊರಳಿತು. ಸಂಗೀತ ಮತ್ತು ರಂಗಭೂಮಿಯಲ್ಲಿ ಸಾಕಷ್ಟು ಪ್ರಯೋಗ ಮಾಡಿದರು. ಅವರನ್ನು ಶಾಸ್ತ್ರೀಯ ಸಂಗೀತದ ವಿದ್ವಾಂಸರು ಲಘುವಾಗಿ ಪರಿಗಣಿಸಿದರು. ಅದು ಕೇವಲ ರಂಜನೀಯ ಗೀತೆ ಎಂದು ವ್ಯಂಗ್ಯವಾಡಿದರು. ಆದರೆ, ಸುಗಮ ಸಂಗೀತಕ್ಕೆ ಪ್ರತ್ಯೇಕ ಮಾನ್ಯತೆ ತಂದುಕೊಡುವಲ್ಲಿ ಅವರು ಯಶಸ್ವಿಯಾದರು ಎಂದು ಸ್ಮರಿಸಿದರು.

ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷರಾದ ಗಂಗಮ್ಮ ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಿದುಷಿ ಎಚ್‌.ಆರ್‌. ಲೀಲಾವತಿ, ನಾದಬ್ರಹ್ಮ ಸಂಗೀತ ಸಭಾ ಅಧ್ಯಕ್ಷ ಕೆ.ವಿ. ಮೂರ್ತಿ, ಕಾಳಿಂಗರಾವ್‌ ಪುತ್ರ ಶರತ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.