ADVERTISEMENT

ಕುಡಿಯುವ ನೀರು ಪೂರೈಕೆಗೆ ಕೊಳವೆಬಾವಿ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶಿವಶಂಕರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:53 IST
Last Updated 25 ಅಕ್ಟೋಬರ್ 2016, 9:53 IST
ಕುಡಿಯುವ ನೀರು ಪೂರೈಕೆಗೆ ಕೊಳವೆಬಾವಿ
ಕುಡಿಯುವ ನೀರು ಪೂರೈಕೆಗೆ ಕೊಳವೆಬಾವಿ   

ಮೈಸೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಕೊಳೆವೆ ಬಾವಿ ಕೊರೆಸುವ ಪ್ರಯತ್ನ ಮಾಡುತ್ತೇವೆ. ಅದು ಸಾಧ್ಯವಾಗದಿದ್ದರೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಒದಗಿಸುವುದು ಅಥವಾ ಟ್ಯಾಂಕರ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಪಿ.ಶಿವಶಂಕರ್‌ ಭರವಸೆ ನೀಡಿದರು.

ಜಿ.ಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಎತ್ತಿದ ಪ್ರಶ್ನೆಗೆ ಅವರು ಉತ್ತರಿಸಿದರು. ‘ಈ ವರ್ಷ ಕೇವಲ ಶೇ 57 ಮಳೆಯಾಗಿದ್ದು, ಶೇ 43ರಷ್ಟು ಕೊರತೆ ಉಂಟಾಗಿದೆ. ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಶೇ 80ರಷ್ಟು ಮಳೆ ಆಗಬೇಕಿತ್ತು. ಆದರೆ, ತುಂಬಾ ಕೊರತೆ ಉಂಟಾಗಿದೆ. 1.21 ಲಕ್ಷ ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಪರಿಹಾರ ಕೋರಿ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದರು.

‘ಕುಡಿಯುವ ನೀರಿನ ಸಂಬಂಧ 2015–16ನೇ ಸಾಲಿನಲ್ಲಿ ಯಾವುದೇ ಹೊಸ ಯೋಜನೆಗೆ ಅನುಮೋದನೆ ಲಭಿಸಿರಲಿಲ್ಲ. ಈ ಸಾಲಿನಲ್ಲಿ ₹ 82 ಕೋಟಿ ಲಭಿಸಿದೆ. ಅದನ್ನು ಮುಂದುವರಿದ ಯೋಜನೆಗಳ ಕಾಮಗಾರಿಗಾಗಿ ಬಳಸಲಾಗಿದೆ. ಮುಂದುವರಿದ ಯೋಜನೆಗಳಿಗೆ ಮತ್ತಷ್ಟು ಹಣವನ್ನು ಮುಖ್ಯಮಂತ್ರಿ ಬಳಿ ಕೋರಲಾಗುವುದು. ಭೀಕರ ಬರಗಾಲ ಇರುವುದರಿಂದ ಹೊಸದಾಗಿ ಕೊಳವೆ ಬಾವಿ ಕೊರೆಸಲು ಮನವಿ ಮಾಡಿದ್ದೇವೆ. ತಾಲ್ಲೂಕುಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದ್ದು, ತುರ್ತು ಕಾಮಗಾರಿ ಬಗ್ಗೆ  ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘13 ವಾರಗಳಿಗೆ ಆಗುವಷ್ಟು ಮೇವು ದಾಸ್ತಾನು ಇದೆ ಎಂಬುದಾಗಿ ಪಶುಪಾಲನ ಇಲಾಖೆಯವರು ಮಾಹಿತಿ ನೀಡಿದ್ದಾರೆ. ಅಲ್ಲದೆ, 16 ಸ್ಥಳಗಳಲ್ಲಿ ನವೆಂಬರ್‌ನಿಂದ ಮೇವಿನ ಬ್ಯಾಂಕ್‌ ತೆಗೆಯಲು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಿರುವ ನಿಯಮಗಳ ಪ್ರಕಾರ ಹಣಕಾಸಿನ ಪರಿಹಾರ ನೀಡಲು ಸಾಧ್ಯವಿಲ್ಲ. ಈಗಿನ ದರದ ಪ್ರಕಾರ ಟನ್‌ ಮೇವಿಗೆ ₹ 6,000 ಇದೆ. ರೈತರಿಗೆ ಶೇ 50ರಷ್ಟು ಸಹಾಯಧನ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಸಮಸ್ಯೆ ಮುಂದುವರಿದರೆ ಡಿಸೆಂಬರ್‌ನಲ್ಲಿ ಗೋಶಾಲೆ ತೆರೆಯಲಾಗುವುದು. ಅಲ್ಲದೆ, ಪ್ರತಿ ಹೋಬಳಿಯಲ್ಲಿ ಮೇವಿನ ಬ್ಯಾಂಕ್‌ ತೆರೆಯುವ ಬಗ್ಗೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಬೇಕಾಗುತ್ತದೆ ಎಂದರು.

‘ಸಭೆಗೆ ಇಬ್ಬರು ಅಧಿಕಾರಿಗಳು ಬಂದಿಲ್ಲ ಅಷ್ಟೆ. ಇನ್ನುಳಿದವರು ಬಂದಿದ್ದಾರೆ. ಕೆಲವರು ತಡವಾಗಿ ಬಂದಿದ್ದಾರೆ’ ಎಂದು ಸದಸ್ಯರಿಗೆ ಮನವರಿಕೆ ಮಾಡಿದರು.

‘ಸಭೆಗೆ ಗೈರು ಹಾಜರಾದವರ ಬಗ್ಗೆ ಅಧಿಕಾರಿಗಳ ಬಗ್ಗೆ ಕ್ರಮಕ್ಕೆ ನಿರ್ಣಯ ಕೈಗೊಳ್ಳಬಹುದು. ಹಾಗೆಯೇ, ಪ್ರತಿ ಹೋಬಳಿಯಲ್ಲಿ ಮೇವಿನ ಬ್ಯಾಂಕ್‌ ತೆರೆಯಲು ನಿರ್ಣಯ ತೆಗೆದುಕೊಳ್ಳಬಹುದು. ಕಾರ್ಯಪಡೆಗೆ ಜಿ.ಪಂ ಸದಸ್ಯರ ಅಭಿಪ್ರಾಯ ತಿಳಿಸುವುದು, ಕಾರ್ಯಪಡೆಗೆ ಜಿ.ಪಂ ಸದಸ್ಯರನ್ನು ನೇಮಿಸುವ ಬಗ್ಗೆ ನಿರ್ಣಯ ಕೈಗೊಳ್ಳಬಹುದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.