ADVERTISEMENT

ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಊಟ

​ಪ್ರಜಾವಾಣಿ ವಾರ್ತೆ
Published 27 ಮೇ 2017, 5:27 IST
Last Updated 27 ಮೇ 2017, 5:27 IST

ಮೈಸೂರು: ಗರ್ಭಿಣಿ ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನ ಪೌಷ್ಟಿಕ ಊಟವನ್ನು ವಿತರಿಸುವ ‘ಮಾತೃಪೂರ್ಣ’ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಂದು ಜಿಲ್ಲಾಧಿಕಾರಿ ಡಿ.ರಂದೀಪ್ ಮನವಿ ಮಾಡಿದರು.

ಕಾರ್ಯಕ್ರಮದ ಅನುಷ್ಠಾನ ಕುರಿತು ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಈ ಯೋಜನೆಯನ್ನು ಪ್ರಾಯೋಗಿಕವಾಗಿ ರಾಜ್ಯದ 4 ತಾಲ್ಲೂಕುಗಳಲ್ಲಿ ಜಾರಿಗೊಳಿಸಲಾಗಿದ್ದು, ಎಚ್.ಡಿ.ಕೋಟೆ ತಾಲ್ಲೂಕು ಆಯ್ಕೆಯಾಗಿದೆ.

ಗರ್ಭಿಣಿ ಹಾಗೂ ಬಾಣಂತಿಯರ ಪೌಷ್ಟಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದೆ. ಅನ್ನ, ಸಾಂಬಾರು, ಪಲ್ಯದ ಜತೆಗೆ ಬೇಯಿಸಿದ ಮೊಟ್ಟೆ, ಚಿಕ್ಕಿ, 200 ಎಂ.ಎಲ್ ಹಾಲು, ತರಕಾರಿ ಒಳಗೊಂಡ ಪೌಷ್ಟಿಕ ಆಹಾರವನ್ನು ಮಧ್ಯಾಹ್ನ ಬಿಸಿಯೂಟದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಯೋಜನೆ ಅನುಷ್ಠಾನಕ್ಕೆ ಹಲವಾರು ಸಮಸ್ಯೆಗಳಿವೆ. ಗರ್ಭಿಣಿ ಹಾಗೂ ಬಾಣಂತಿಯರು ಅಂಗನವಾಡಿಗೆ ಬಂದು ಎಲ್ಲರ ಒಟ್ಟಿಗೆ ಆಹಾರ ಸೇವಿಸಲು ಹಿಂಜರಿಯುತ್ತಾರೆ. ಕೆಲವರು ಬೇರೆಯವರು ಮಾಡಿದ ಅಡುಗೆ ಸೇವಿಸಲು ಹಿಂಜರಿಯುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಪೌಷ್ಟಿಕ ಆಹಾರವನ್ನು ಮನೆಗೆ ನೀಡುವಂತೆ ಕೆಲವರ ಕೋರಿಕೆಯಾಗಿದೆ. ಕೆಲವರು ಮೊಟ್ಟೆ ಸೇವಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದರು.

ಆರೋಗ್ಯದ ದೃಷ್ಟಿಯಿಂದ ಯೋಜನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಮನೆಗೆ ಆಹಾರ ನೀಡಿದರೆ ಗರ್ಭಿಣಿ ಹಾಗೂ ಬಾಣಂತಿಯರ ಬದಲಿಗೆ ಬೇರೆಯವರೂ ಸೇವಿಸಬಹುದು. ಇದರಿಂದ ಯೋಜನೆ ಸಾಫಲ್ಯವಾಗುವುದಿಲ್ಲ. ಇದಕ್ಕಾಗಿ ಅಂಗನವಾಡಿಯಲ್ಲೇ ಪೌಷ್ಟಿಕ ಆಹಾರ ಸೇವಿಸುವಂತೆ ಮನವೊಲಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಕೆ.ರಾಧಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು, ಆಹಾರ ಇಲಾಖೆ ಹಿರಿಯ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.