ADVERTISEMENT

ಗೋ ಮಾಂಸ ಭಕ್ಷಣೆ; ಪರ, ವಿರೋಧ ಧರಣಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2017, 9:00 IST
Last Updated 28 ಜೂನ್ 2017, 9:00 IST

ಮೈಸೂರು: ಕಲಾಮಂದಿರದ ಮನೆಯಂಗಳ ಸಭಾಂಗಣದಲ್ಲಿ ಗೋಮಾಂಸ ಸೇವನೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ನರಸಿಂಹರಾಜ ಕ್ಷೇತ್ರದ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ, ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾ ಕಾರ್ಯಕರ್ತರು ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ (ಎಫ್‌ಟಿಎಸ್ ವೃತ್ತ) ಪ್ರತಿಭಟನೆ ನಡೆಸಿದರು.

ಆಹಾರ ಸೇವನೆ ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ಅದನ್ನು ಬಹಿರಂಗವಾಗಿ ಪ್ರದರ್ಶಿಸಿ, ಇತರರ ಮನಸ್ಸಿಗೆ ನೋವುಂಟು ಮಾಡುವುದು ಎಷ್ಟು ಸರಿ ಎಂದು ಕಾರ್ಯಕರ್ತರು ಪ್ರಶ್ನಿಸಿದರು. ‘ಪ್ರಗತಿಪರ ಎಂದು ಬಿಂಬಿಸಿಕೊಳ್ಳುವ ಮುಖಂಡರೇ ಹೀಗೆ ಮಾಡಿದರೆ ಹೇಗೆ? ನಾವು ಮಾಡುವ ಕ್ರಿಯೆಯಿಂದ ಇತರರಿಗೆ ನೋವು ಉಂಟಾಗುತ್ತದೆ ಎನ್ನುವುದಾದರೆ ಅದನ್ನು ಮಾಡುವುದು ಸರಿಯೇ ಎಂದು ವಿಮರ್ಶೆ ಮಾಡಬೇಕಿತ್ತು. ಉದ್ದೇಶಪೂರ್ವಕವಾಗಿ ಇತರರ ಮನಸ್ಸಿಗೆ ನೋವುಂಟು ಮಾಡಲೆಂದೇ ಗೋಮಾಂಸ ಭಕ್ಷಿಸಿದ್ದಾರೆ’ ಎಂದು ಆರೋಪಿಸಿದರು.

ಇದನ್ನೆಲ್ಲಾ ಕಂಡೂ ಕಾಣದಂತೆ ಕಲಾಮಂದಿರದ ಸಿಬ್ಬಂದಿ ಇದ್ದುದ್ದು ಸರಿಯಲ್ಲ. ನಂತರ, ಚಾರ್ವಾಕ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿರುವುದು ಕೇವಲ ಕಣ್ಣೊರೆಸುವ ತಂತ್ರ. ಇಂತಹ ಬೇಜವಾಬ್ದಾರಿ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಗೋಮಾಂಸವನ್ನು ಮನೆಯಲ್ಲಿ ತಿನ್ನುವುದು ಬಿಟ್ಟು ಬಹಿರಂಗವಾಗಿ ಭಕ್ಷಿಸುವ ಮೂಲಕ ಇತರರೂ ಗೋಮಾಂಸ ತಿನ್ನಬೇಕು ಎನ್ನುವ ಸಂದೇಶ ನೀಡಿದ್ದಾರೆ. ಈ ಮೂಲಕ ಇತರರ ಆಹಾರ ಪದ್ಧತಿ ಮೇಲೆ ಒತ್ತಡ ಹೇರಿದ್ದಾರೆ ಎಂದರು.

ಉಪಮೇಯರ್ ರತ್ನಾ ಲಕ್ಷ್ಮಣ, ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ ಸು.ಮುರುಳಿ, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ರೇಣುಕಾ, ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷ ಪ್ರಕಾಶ್, ಒಬಿಸಿ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ, ಯುವ ಮೋರ್ಚಾ ಕಾರ್ಯದರ್ಶಿ ಸಂಪತ್ತು ಪ್ರತಿಭಟನೆಯಲ್ಲಿದ್ದರು.

ಅವಮಾನ: ಆಕ್ರೋಶ
ಮೈಸೂರು: ಗೋಮಾಂಸ ಭಕ್ಷಣೆ ಕುರಿತು ಸಂಸದ ಪ್ರತಾಪಸಿಂಹ ನೀಡಿರುವ ಹೇಳಿಕೆ ವಿರುದ್ಧ ಮೈಸೂರು ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ವಿ.ವಿಯ ಗೋಪುರ ಗಡಿಯಾರ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಗೋಮಾಂಸ ಸೇವಿಸುವವರು ಬೇಕಿದ್ದರೆ ಅವರ ಮನೆಯಲ್ಲಿ ನಾಯಿ, ನರಿಗಳನ್ನು ತಿನ್ನಲಿ ಎಂದು ಸಂಸದರು ಹೇಳುವ ಮೂಲಕ ಬಹುಸಂಖ್ಯಾತರನ್ನು ಅವರು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಹೇಳಿಕೆ ನೀಡುವ ಹಾಗೂ ದಲಿತ ವಿರೋಧಿಯಾಗಿರುವ ಪ್ರತಾಪಸಿಂಹ ಅವರನ್ನು ಕೂಡಲೇ ಸಂಸತ್ ಸದಸ್ಯತ್ವದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿಯ ಯುವಮೋರ್ಚಾ ಕಾರ್ಯಕರ್ತರು ಗೋಮಾಂಸ ಭಕ್ಷಣೆಯಿಂದ ಮೈಲಿಗೆಯಾಯಿತೆಂದು ಕಲಾಮಂದಿರಕ್ಕೆ ಗೋಮೂತ್ರ ಪ್ರೋಕ್ಷಣೆ ಮಾಡಿರುವುದು ಅಸ್ಪೃಶ್ಯತಾ ಆಚರಣೆಯ ಪ್ರತೀಕ. ಇವರ ವಿರುದ್ಧ ಅಸ್ಪೃಶ್ಯತಾ ಆಚರಣಾ ಕಾಯ್ದೆಯಡಿ ದೂರು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ಗೋಮಾಂಸ ಭಕ್ಷಣೆಗಾಗಿ ಪ್ರೊ.ಬಿ.ವಿ. ಮಹೇಶ್‌ಚಂದ್ರಗುರು ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ನೀಡಿರುವ ದೂರು ಹಾಸ್ಯಾಸ್ಪದ. ದೂರನ್ನು ವಾಪಸ್ ಪಡೆಯದಿದ್ದರೆ ಅವರ ವಿರುದ್ಧ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ದಲಿತ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ಸರಣಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಮಹೇಶ್‌ಚಂದ್ರ ಗುರು ವಜಾಕ್ಕೆ ಒತ್ತಾಯ
ಮೈಸೂರು: ಪ್ರಧಾನಮಂತ್ರಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮಹೇಶ್‌ಚಂದ್ರ ಗುರು ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಸರ್ಕಾರದ ವಿರುದ್ಧವೇ ಮಾತನಾಡುವುದು ನಾಗರಿಕ ಸೇವಾ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ. ಮೈಸೂರಿನ ಕಲಾಮಂದಿರದಲ್ಲಿ ಬಹಿರಂಗವಾಗಿ ಗೋಮಾಂಸ ಭಕ್ಷಿಸುವುದರ ಜತೆಗೆ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ಮಾತನಾಡಿದ್ದಾರೆ. ಕೂಡಲೇ ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.