ADVERTISEMENT

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಶಕ್ತಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:25 IST
Last Updated 8 ನವೆಂಬರ್ 2017, 9:25 IST

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸುವುದಾಗಿ ಘೋಷಿಸಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ಜೆಡಿಎಸ್‌ ಪಕ್ಷದ ‘ಕುಮಾರ ಪರ್ವ–2018’ ಚುನಾವಣಾ ಪ್ರಚಾರದ ‘ವಿಕಾಸ ಯಾತ್ರೆ’ಗೆ ಮಂಗಳವಾರ ಮುನ್ನುಡಿ ಲಭಿಸಿತು.

ಯಾತ್ರೆಯ ಉದ್ಘಾಟನಾ ಸಮಾವೇಶ ಜೆಡಿಎಸ್‌ನ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಈ ಕ್ಷೇತ್ರದ ಹಾಲಿ ಶಾಸಕ ಜಿ.ಟಿ.ದೇವೇಗೌಡ ಅವರು ಸಮಾವೇಶ ಉದ್ದೇಶಿಸಿ ಮಾಡಿದ ಭಾಷಣ ಸಿದ್ದರಾಮಯ್ಯ ಅವರ ಸುತ್ತಲೇ ಗಿರಕಿ ಹೊಡೆಯಿತು. ಜೊತೆಗೆ ಈ ಕ್ಷೇತ್ರದ ಕುರುಬರ ಮತವನ್ನು ಸೆಳೆಯುವ ಶೈಲಿಯ ಭಾಷಣ ಹೊರಹೊಮ್ಮಿತು.

ವೇದಿಕೆಯಲ್ಲಿ ಆಸೀನರಾಗಿದ್ದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಪತ್ನಿ ಚನ್ನಮ್ಮ ಅವರು ಪುತ್ರ ಕುಮಾರಸ್ವಾಮಿ ಭಾಷಣ ಕೇಳಿ ಭಾವುಕರಾದರು. ಕಾರ್ಯಕ್ರಮ ನಾಲ್ಕು ಗಂಟೆ ವಿಳಂಬವಾಗಿದ್ದರಿಂದ ದೇವೇಗೌಡರು ಭಾಷಣ ಮಾಡಲಿಲ್ಲ.

ADVERTISEMENT

ಬೆಳಿಗ್ಗೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಅವರು ವಿಕಾಸ ಯಾತ್ರೆಗೆ ಅಧಿಕೃತ ಚಾಲನೆ ನೀಡಿದರು. ದೇವೇಗೌಡ ಹಾಗೂ ಚನ್ನಮ್ಮ ದಂಪತಿ ಸಂಕಲ್ಪ ನೆರವೇರಿಸಿದರು. ರಾಜ್ಯದಾದ್ಯಂತ ಪ್ರಚಾರ ಯಾತ್ರೆಗಾಗಿ ರೂಪಿಸಿರುವ ಹೈಟೆಕ್‌ ಬಸ್ಸಿನ ಮೇಲೇರಿದ ಕುಮಾರಸ್ವಾಮಿ ಅವರು ದೇಗುಲದ ಒಂದು ಸುತ್ತು ಬಂದರು.

ಪತ್ನಿ ಅನಿತಾ ಜೊತೆಗಿದ್ದರು. ಬಳಿಕ ಪೋಷಕರು ಹಾಗೂ ಪತ್ನಿ ಜೊತೆ ಉತ್ತನಹಳ್ಳಿಗೆ ತೆರಳಿ ಜ್ವಾಲಾಮುಖಿ ತ್ರಿಪುರ ಸುಂದರಿದೇವಿಯ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅಪ್ಪಣೆ ಕೇಳಿದರು. ದೇವಿಯ ಮೇಲಿನ ಹೂವು ಬಲಗಡೆಗೆ ಬಿದ್ದಿದ್ದರಿಂದ ಎಲ್ಲರ ಮೊಗದಲ್ಲಿ ಖುಷಿ ಮೂಡಿತು. ಈ ವಿಚಾರವನ್ನು ಸಮಾವೇಶದ ವೇಳೆ ಶಾಸಕ ಜಿ.ಟಿ.ದೇವೇಗೌಡ ಅವರು ಕೂಡ ಹಂಚಿಕೊಂಡರು.

ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್‌ನ ‘ಮನೆ ಮನೆಗೆ ಕಾಂಗ್ರೆಸ್‌’ ಹಾಗೂ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಸೆಡ್ಡು ಹೊಡೆದು ಜೆಡಿಎಸ್‌ ಆರಂಭಿಸಿರುವ ಈ ಯಾತ್ರೆಯಲ್ಲಿ ಬೈಕ್‌ ಹಾಗೂ ಎತ್ತಿನ ಗಾಡಿಯ ಮೆರವಣಿಗೆ ನಡೆಯಿತು. ಸಾವಿರಾರು ಕಾರ್ಯಕರ್ತರು ಜೆಡಿಎಸ್‌ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು.

‘ಕುಮಾರ ಪರ್ವ ಎಂಬುದು ನನ್ನ ಹೆಸರಿನ ಘೋಷಣೆ ಅಲ್ಲ. ಬದಲಾಗಿ ರಾಜ್ಯದ ಯುವಕರಿಗೆ ಜವಾಬ್ದಾರಿ ನೀಡಲು ಈ ಹೆಸರಿಡಲಾಗಿದೆ’ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಶಾಸಕರಾದ ಸಾ.ರಾ.ಮಹೇಶ್‌, ಎನ್‌.ಎಚ್‌.ಕೋನರೆಡ್ಡಿ, ಉಪಸಭಾಪತಿ ಮರಿತಿಬ್ಬೇಗೌಡ, ವಿಧಾನಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸಂಸದ ಪುಟ್ಟರಾಜು, ಮುಖಂಡ ಎಚ್‌.ವಿಶ್ವನಾಥ್‌, ಮೈಸೂರು ಮೇಯರ್‌ ಎಂ.ಜೆ.ರವಿಕುಮಾರ್‌ ಪಾಲ್ಗೊಂಡಿದ್ದರು. ಶಾಸಕ ರೇವಣ್ಣ ಹಾಜರಿರಲಿಲ್ಲ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.