ADVERTISEMENT

ಚುರುಕು ಪಡೆದುಕೊಂಡ ಪ್ರಚಾರ

​ಪ್ರಜಾವಾಣಿ ವಾರ್ತೆ
Published 23 ಜೂನ್ 2017, 8:51 IST
Last Updated 23 ಜೂನ್ 2017, 8:51 IST

ಮೈಸೂರು: ಮಹಾನಗರ ಪಾಲಿಕೆಯ 32ನೇ ವಾರ್ಡ್‌ನ ಉಪಚುನಾವಣೆ ಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ ಕಣಕ್ಕಿಳಿದಿರುವ ಪ್ರಮುಖ ಪಕ್ಷಗಳಾದ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಪ್ರಚಾರ ಚುರುಕು ಪಡೆದುಕೊಂಡಿದೆ.

ಜುಲೈ 2ರಂದು ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ.ಪ್ರಕಾಶ್‌, ಜೆಡಿಎಸ್‌ ಅಭ್ಯರ್ಥಿ ಎಸ್‌ಬಿಎಂ ಮಂಜು, ಬಿಜೆಪಿ ಅಭ್ಯರ್ಥಿ ಕೆ.ಮಾದೇಶ್ ತಮ್ಮ ಬೆಂಬಲಿಗರೊಂದಿಗೆ ಗುರುವಾರ ವಿವಿಧ ಬಡಾವಣೆಗಳಿಗೆ ತೆರಳಿ ಪ್ರಚಾರ ನಡೆಸಿದರು. ಮಾದೇಶ ಅವರು ಬಿಜೆಪಿ ಪ್ರಚಾರ ಕಚೇರಿ ಕೂಡಾ ಉದ್ಘಾಟಿಸಿದರು.

2001–02ರಲ್ಲಿ ಮೇಯರ್‌ ಆಗಿದ್ದ ಪ್ರಕಾಶ್‌ ಅವರು ಪಾಲಿಕೆಯ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿ ಎರಡು ಬಾರಿ ಯಶಸ್ಸು ಕಂಡಿದ್ದಾರೆ. ಎಸ್‌ಬಿಎಂ ಮಂಜು 2013ರಲ್ಲಿ ಈ ವಾರ್ಡ್‌ನಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಈ ಹಿಂದೆ ಕಾರ್ಪೊರೇಟರ್‌ ಆಗಿದ್ದ ಸಿ.ಮಹದೇಶ್‌ಗೆ ಮತ್ತೆ ಟಿಕೆಟ್‌ ಲಭಿಸಿತ್ತು.

ADVERTISEMENT

ಹೀಗಾಗಿ, ಮಂಜು 31ನೇ ವಾರ್ಡ್‌ ನಿಂದ ಸ್ಪರ್ಧಿಸಿದ್ದರು. ಬಿಜೆಪಿಯ ಗಿರೀಶ್‌ ಪ್ರಸಾದ್‌ ಎದುರು ಅಲ್ಪ ಮತಗಳಿಂದ ಪರಾಭವಗೊಂಡಿದ್ದರು. ಕನ್ನಡ ಪರ ಹೋರಾಟಗಾರರೂ ಆಗಿರುವ ಕೆ.ಮಾದೇಶ್‌ 2007ರಲ್ಲಿ ಈ ವಾರ್ಡ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಮೂರು ವರ್ಷಗಳ ಹಿಂದೆ ಅವರು ಬಿಜೆಪಿ ಸೇರಿದ್ದರು.

ಉಪಚುನಾವಣೆಯಲ್ಲಿ ಸ್ಪರ್ಧೆ ಕೋರಿ ನಾಮಪತ್ರ ಸಲ್ಲಿಸಿರುವ ಏಳೂ ಅಭ್ಯರ್ಥಿಗಳ ನಾಮಪತ್ರ ಅಂಗೀಕೃತ ವಾಗಿದೆ. ಚುನಾವಣಾಧಿಕಾರಿ ವಿ.ಪ್ರಿಯಾದರ್ಶಿನಿ ಅವರು ಪಾಲಿಕೆ ಮುಖ್ಯ ಕಚೇರಿಯ ಚುನಾವಣಾ ಶಾಖೆಯಲ್ಲಿ ನಾಮಪತ್ರ ಪರಿಶೀಲನೆ ನಡೆಸಿದರು.

ಭಾರತೀಯ ಡಾ.ಬಿ.ಆರ್‌. ಅಂಬೇ ಡ್ಕರ್‌ ಜನತಾ ಪಕ್ಷದಿಂದ ಮಂಗಳಾ ಗೌರಿ ಸ್ಪರ್ಧಿಸಿದ್ದಾರೆ. ಪಕ್ಷೇತರರಾಗಿ ಬಿ.ಜೆ. ಮಹಾಬಲರಾಜ್‌, ಲಲನಾ ಧನರಾಜ್‌, ಕೆ.ಪ್ರೇಮಕುಮಾರ್‌ ನಾಮಪತ್ರ ಸಲ್ಲಿಸಿದ್ದಾರೆ.

ಉಮೇದುವಾರಿಕೆ ಹಿಂಪಡೆಯಲು ಜೂನ್‌ 24 ಕೊನೆಯ ದಿನ. ಒಂಟಿಕೊಪ್ಪಲಿನಲ್ಲಿರುವ ನಿರ್ಮಲಾ ಶಾಲೆ, ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 12 ಮತಗಟ್ಟೆ ಸ್ಥಾಪಿಸಲಾಗಿದೆ.

ಮತ ಎಣಿಕೆ ಕಾರ್ಯ ಜುಲೈ 5ರಂದು ಸಯ್ಯಾಜಿ ರಾವ್‌ ರಸ್ತೆಯಲ್ಲಿರುವ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ನಡೆಯಲಿದೆ. ಸಿ.ಮಹದೇಶ್ ಸದಸ್ಯತ್ವ ವಜಾಗೊಂಡ ಕಾರಣ ಉಪಚುನಾವಣೆ ನಡೆಯುತ್ತಿದೆ. ವಾರ್ಡ್‌ನಲ್ಲಿ ಒಟ್ಟು 10,201 ಮತದಾರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.