ADVERTISEMENT

‘ಜಾನಪದದತ್ತ ಹರಿಯಲಿ ಚಿತ್ತ’ 

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 6:16 IST
Last Updated 16 ಏಪ್ರಿಲ್ 2017, 6:16 IST

ಮೈಸೂರು: ‘ಇಂದಿನ ಬಹಳಷ್ಟು ಸಮಸ್ಯೆಗಳಿಗೆ ಜಾನಪದದಲ್ಲಿ ಪರಿಹಾರಗಳಿದ್ದು, ಜಾನಪದದ ಕಡೆಗೆ ಮುಖ ಮಾಡುವ ಅಗತ್ಯ ಇದೆ’ ಎಂದು ಮೈಸೂರು ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಪ್ರಾಧ್ಯಾಪಕ ಎಸ್‌.ವೆಂಕಟೇಶ್‌ ಅಭಿಪ್ರಾಯಪಟ್ಟರು.

ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಎಚ್‌.ಡಿ.ಕೋಟೆಯ ಮಲಾರ ಕಾಲೊನಿಯ ಸಮಾಗಮ ಸಾಂಸ್ಕೃತಿಕ ಸೇವಾ ಟ್ರಸ್ಟ್‌ ಸಹಯೋಗದಲ್ಲಿ ನಗರದ ಕಲಾಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ಜಾನಪದ ಪರಿಷತ್‌ ಜಲ್ಲಾ ಘಟಕ ಅಧ್ಯಕ್ಷರೂ ಆಗಿರುವ ಮಾತೃಭೂಮಿ ಪ್ರಶಸ್ತಿ ಪುರಸ್ಕೃತ ಕ್ಯಾತನಹಳ್ಳಿ ಎಚ್‌.ಪ್ರಕಾಶ್‌ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಸಂಸ್ಕೃತಿ ಹೆಸರಿನಲ್ಲಿ ಜಾನಪದ ಸೊಗಡನ್ನು ಮರೆಯುತ್ತಿದ್ದೇವೆ. ಜಾನಪದವು ಜೀವನದ ಮೂಲ ಬೇರು. ಅದನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಸಾಹಿತಿ ಬನ್ನೂರು ಕೆ. ರಾಜು ಮಾತನಾಡಿ, ಕ್ಯಾತನಹಳ್ಳಿ ಪ್ರಕಾಶ್‌ ಅವರು ಜಾನಪದವನ್ನು ಬೆಳೆಸುವ ಕೈಂಕರ್ಯ ಮಾಡುತ್ತಿದ್ದಾರೆ ಎಂದರು. ವಿಶ್ರಾಂತ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಡಿ.ಎನ್‌.ಕೃಷ್ಣಮೂರ್ತಿ, ದಸಂಸ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಪುಟ್ಟನಂಜಯ್ಯ, ಸಮಾಗಮ ಸಾಂಸ್ಕೃತಿಕ ಸೇವಾ ಟ್ರಸ್ಟ್‌ನ ಪಿ.ಸೋಮಶೇಖರ್‌ ಇದ್ದರು.

ADVERTISEMENT

ತರಾತುರಿ ಸಿದ್ಧತೆ; ಮುಖ್ಯಮಂತ್ರಿಗೆ ಪತ್ರಜೂನ್‌ನಲ್ಲಿ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ನಡೆಸಲು ಮುಂದಾಗಿ­ರುವುದು ಸರಿಯಲ್ಲ ಎಂದು ಸಾಹಿತಿ ಬನ್ನೂರು ರಾಜು ಅಸಮಾಧಾನ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನವು ವಾರ್ಷಿಕ ಕಾರ್ಯಕ್ರಮ. 82ನೇ ಸಮ್ಮೇಳನ ಮುಗಿದು ಈಗ ಮೂರು ತಿಂಗಳಾಗಿದೆ. ಸಮ್ಮೇಳನವನ್ನು ಆಯೋಜಿಸಲು ಸಿದ್ಧತೆಗೆ ಕನಿಷ್ಠ 6 ತಿಂಗಳು ಹಿಡಿಯುತ್ತದೆ. ತರಾತುರಿಯಲ್ಲಿ ಏರ್ಪಡಿಸಿದರೆ ಹಣಬಾಕರ ಪಿತೂರಿಗೆ ಸಮ್ಮೇಳನ ಬಲಿಯಾಗುತ್ತದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಕ್ರಮಗಳು ನಡೆದಿವೆಯೆಂದು ಆರೋಪಿಸಿದ ಅವರು, ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ತನಿಖೆ ನಂತರ ಸಮ್ಮೇಳನ ಪ್ರಕ್ರಿಯೆ ನಡೆಸಬೇಕೆಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.