ADVERTISEMENT

‘ದಲಿತ ಚಳವಳಿಗೆ ಬೆಂಬಲಿಸಿದ್ದು ನಾನು’

ಬಿಜೆಪಿ ಮುಖಂಡ ಶ್ರೀನಿವಾಸಪ್ರಸಾದ್‌ಗೆ ಮಹದೇವಪ್ಪ ತಿರುಗೇಟು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 12:57 IST
Last Updated 24 ಮಾರ್ಚ್ 2018, 12:57 IST

ಮೈಸೂರು: ‘ದಲಿತ ಚಳಿವಳಿಗೆ ಬಂಡೆಯಂತೆ ಬೆನ್ನಿಗೆ ನಿಂತ ಕರ್ನಾಟಕದ ಮೊದಲ ರಾಜಕಾರಣಿ ನಾನು’ ಎನ್ನುವ ಮೂಲಕ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಬಿಜೆಪಿ ಮುಖಂಡ ವಿ.ಶ್ರೀನಿವಾಸಪ್ರಸಾದ್‌ಗೆ ತಿರುಗೇಟು ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ದಲಿತ ಚಳವಳಿಯನ್ನು ಶ್ರೀನಿವಾಸಪ್ರಸಾದ್‌ ಬೆಳೆಸಿಯೇ ಇಲ್ಲ. ದಲಿತ ಸಂಘಟನೆಗಳ ಬೆಂಬಲಕ್ಕೆ ನಿಂತವ ನಾನು. ಈ ಬಗ್ಗೆ ರಾಜ್ಯದ ಯಾವುದೇ ದಲಿತ ನಾಯಕರನ್ನು ಬೇಕಾದರೂ ಕೇಳಿನೋಡಿ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರು ನಂಜನಗೂಡು ಉಪಚುನಾವಣೆಗೆ ಮುನ್ನ ದಲಿತ ಸಮುದಾಯವನ್ನು ನನ್ನ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿದ್ದರು’ ಎಂದು ಶ್ರೀನಿವಾಸಪ್ರಸಾದ್‌ ತಮ್ಮ ಪುಸ್ತಕದಲ್ಲಿ ಆರೋಪಿಸಿದ್ದರು.

ADVERTISEMENT

ಚುನಾವಣೆಯ ಹಿನ್ನೆಲೆಯಲ್ಲಿ ದಲಿತ ಬಣಗಳ ಸಭೆ ಮಾಡಿರಲಿಲ್ಲ. ದಲಿತ ಚಳವಳಿಯನ್ನು ಬಲಗೊಳಿಸುವ ಸಲುವಾಗಿ ಅಂತಹ ಸಭೆಗಳು ಆಗಿಂದಾಗ್ಗೆ ನಡೆಯುತ್ತಿರುತ್ತವೆ ಎಂದು ಸಚಿವರು ಹೇಳಿದರು.

ಕೇಂದ್ರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ: ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿರುವ ಶ್ರೇಯ ಕಾಂಗ್ರೆಸ್‌ಗೆ ಸಲ್ಲುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿರುವ ಕಾಳಜಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ನಮ್ಮ ಶಿಫಾರಸನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತಂದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
**
ಚುನಾವಣೆಯಲ್ಲಿ ಸ್ಪರ್ಧೆ ಗುಟ್ಟುಬಿಡದ ಮಹದೇವಪ್ಪ

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಮಹದೇವಪ್ಪ ಅವರು ಗುಟ್ಟುಬಿಡಲು ಒಪ್ಪಲಿಲ್ಲ. ತಿ.ನರಸೀಪುರದ ಟಿಕೆಟ್‌ಗೆ ಅಪ್ಪ ಮತ್ತು ಮಗನ ನಡುವೆ ಪೈಪೋಟಿ ಇದೆಯೇ ಎಂಬ ಪ್ರಶ್ನೆಗೆ, ‘ಪೈಪೋಟಿಯ ಪ್ರಶ್ನೆ ಏಳುವುದಿಲ್ಲ’ ಎಂದು ಉತ್ತರಿಸಿದರು.

‘ಸಕಲೇಶಪುರದಿಂದ ಸ್ಪರ್ಧಿಸುವಂತೆಯೂ ನನ್ನನ್ನು ಕರೆಯುತ್ತಿದ್ದಾರೆ. ನಾನು ಸ್ಪರ್ಧಿಸಬೇಕೋ, ಬೇಡವೋ ಅಥವಾ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಹೈಕಮಾಂಡ್ ವಹಿಸುವ ಜವಾಬ್ದಾರಿಯನ್ನು ನಿಭಾಯಿಸುವುದಷ್ಟೇ ನನ್ನ ಕೆಲಸ. ಬೆಂಗಳೂರಿನ ಸಿ.ವಿ.ರಾಮನ್ ನಗರ ಕ್ಷೇತ್ರದ ಟಿಕೆಟ್‌ಗೆ ಅರ್ಜಿ ಹಾಕಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.