ADVERTISEMENT

ದಸರೆಗೆ ಕ್ರೀಡಾ ಸಾಧಕರ ದಂಡು

ಕೆ.ಓಂಕಾರ ಮೂರ್ತಿ
Published 20 ಸೆಪ್ಟೆಂಬರ್ 2017, 6:49 IST
Last Updated 20 ಸೆಪ್ಟೆಂಬರ್ 2017, 6:49 IST
ರಾಜೇಶ್ವರಿ ಗಾಯಕವಾಡ್‌
ರಾಜೇಶ್ವರಿ ಗಾಯಕವಾಡ್‌   

ಮೈಸೂರು: ‘ಹಿಂದೆ ದಸರಾ ಮಹೋತ್ಸವದಲ್ಲಿ ಒಮ್ಮೆಯೂ ಭಾಗಿಯಾಗಿರಲಿಲ್ಲ. ಈ ಬಗ್ಗೆ ನನಗೆ ಬೇಸರವಿದೆ. ಆದರೆ, ಈಗ ಕ್ರೀಡಾಕೂಟ ಉದ್ಘಾಟನೆ ನೆಪದಲ್ಲಿ ಅವಕಾಶ ಸಿಕ್ಕಿರುವುದು ಆ ಬೇಸರ ತಗ್ಗಿಸಿದೆ' -ಹೀಗೆಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದು ಭಾರತ ಕ್ರಿಕೆಟ್‌ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್‌.

ಸೆ. 21ರಂದು ಸಂಜೆ 4 ಗಂಟೆಗೆ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ದಸರಾ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜೇಶ್ವರಿ ಜೊತೆಗೆ ವೇದಾ ಕೃಷ್ಣಮೂರ್ತಿ ಪಾಲ್ಗೊಳ್ಳಲಿದ್ದಾರೆ. ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಎಂ.ಎಸ್‌.ತೇಜ್‌ಕುಮಾರ್‌ ಅವರು ಕ್ರೀಡಾಜ್ಯೋತಿ ಬೆಳಗಲಿದ್ದಾರೆ.

‘ನಮ್ಮ ಕ್ರೀಡಾ ಸಾಧನೆಗೆ ಸಂದ ಗೌರವವಿದು. ದಸರಾ ಕ್ರೀಡಾಕೂಟ ಉದ್ಘಾಟಿಸುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ನಾವೆಲ್ಲ ಅದೃಷ್ಟವಂತರು‌’ ಎಂದು ಈ ಕ್ರೀಡಾಪಟುಗಳು ಖುಷಿ ವ್ಯಕ್ತಪಡಿಸಿದ್ದಾರೆ.

ADVERTISEMENT

‘ದಸರೆ ಎಂದರೆ ದೊಡ್ಡ ಉತ್ಸವ. ದೊಡ್ಡದೊಡ್ಡ ಸಾಧಕರು ಭಾಗವಹಿಸುತ್ತಾರೆ. ಉತ್ತರ ಕರ್ನಾಟಕದ ನಮಗೆ ಈ ಮಹೋತ್ಸವದ ಬಗ್ಗೆ ಸದಾ ಕುತೂಹಲ. ಟಿ.ವಿಯಲ್ಲಿ ನೋಡಿ, ಪತ್ರಿಕೆಯಲ್ಲಿ ಓದಿ ತಿಳಿದುಕೊಳ್ಳುತ್ತಿದ್ದೆವು. ಈ ಬಾರಿ ಖುದ್ದಾಗಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ. ಸಹೋದರಿ ಜೊತೆ ಮೈಸೂರಿಗೆ ಬರುತ್ತೇನೆ’ ಎಂದು ರಾಜೇಶ್ವರಿ ಹೇಳಿದರು.

‘ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ವೇದಿಕೆ ಕಲ್ಪಿಸಿರುವುದು ಕ್ರಿಕೆಟ್‌. ವಿಶ್ವಕಪ್‌ನಲ್ಲಿ ತೋರಿದ ಪ್ರದರ್ಶನದಿಂದ ನಮ್ಮನ್ನು ಎಲ್ಲರೂ ಈಗ ಗುರುತಿಸುತ್ತಿದ್ದಾರೆ’ ಎಂದು ಅವರು ಹೇಳುತ್ತಾರೆ.

ತೇಜ್‌ಕುಮಾರ್‌ ಅವರಿಗೆ ಎರಡನೇ ಬಾರಿ ದಸರಾ ಕ್ರೀಡಾಕೂಟ ಉದ್ಘಾಟನೆಯಲ್ಲಿ ಭಾಗವಹಿಸುವ ಅವಕಾಶ ಲಭಿಸಿದೆ. ಮೂರು ವರ್ಷಗಳ ಹಿಂದೆಯೂ ಅವರು ಪಾಲ್ಗೊಂಡಿದ್ದರು.‌

‘ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾಪಟುಗಳಿಗೆ ಮೊದಲ ವೇದಿಕೆಯಾಗಿರುವುದೇ ದಸರಾ ಕ್ರೀಡಾಕೂಟ. ನಾನು ಚಿಕ್ಕಂದಿನಿಂದ ನಾಡಹಬ್ಬವನ್ನು ವೀಕ್ಷಿಸುತ್ತಿದ್ದೇನೆ. ಈಗ ಕ್ರೀಡಾಕೂಟ ಉದ್ಘಾಟನೆಗೆ ಮತ್ತೊಮ್ಮೆ ಅವಕಾಶ ಲಭಿಸಿದೆ’ ಎಂದರು.

ಮಹಿಳಾ ಕ್ರಿಕೆಟ್‌ನಲ್ಲಿ ಸದ್ದು ಮಾಡುತ್ತಿರುವ ವೇದಾ ಅವರಿಗೂ ಈ ಅವಕಾಶ ಖುಷಿ ಉಂಟು ಮಾಡಿದೆ. ‘ಬಾಲ್ಯದಲ್ಲಿ ತಂದೆ ಜೊತೆ ದಸರಾ ಸಂಭ್ರಮ ಕಣ್ತುಂಬಿಕೊಂಡಿದ್ದೆ. ಈಗ ಕ್ರೀಡಾಕೂಟ ಉದ್ಘಾಟಿಸಲು ಅವಕಾಶ ಲಭಿಸಿದೆ. ಈ ಅವಕಾಶ ಅತೀವ ಸಂತೋಷ ತಂದಿದೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.