ADVERTISEMENT

ದೇಸಿ ಕಡ್ಡಿ ಪೊರಕೆಗೆ ಕುಗ್ಗಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 10:01 IST
Last Updated 5 ಡಿಸೆಂಬರ್ 2016, 10:01 IST

ಹುಣಸೂರು: ತಾಲ್ಲೂಕಿನಲ್ಲಿ ದೇಸಿ ಹುಲ್ಲುಕಡ್ಡಿ ಪೊರಕೆ ತಯಾರಿಸಿ ಹೊಟ್ಟೆ ತುಂಬಿಸಿಕೊಳ್ಳುವ ಎಷ್ಟೋ ಕುಟುಂಬ ಗಳಿವೆ. ಆದರೆ, ಆಧುನಿಕ ಪೊರಕೆಗಳ ಭರಾಟೆಯಲ್ಲಿ ಹುಲ್ಲುಕಡ್ಡಿ ಪೊರಕೆ ಮೂಲೆ ಸೇರಿವೆ. ಕುಟುಂಬಗಳೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಹೌದು. ತಾಲ್ಲೂಕಿನ ಮಾರಗೋಡನ ಹಳ್ಳಿಯ ಕೆಲವೊಂದು ಕುಟುಂಬಗಳಿಗೆ ಪೊರಕೆಯೇ ಜೀವನಾಧಾರ. ಆದರೆ, ಆಧುನಿಕತೆಯ ಬಿರುಗಾಳಿಯ ಸುಳಿಗೆ ಈ ಕುಟುಂಬಗಳೂ ಸಿಲುಕಿ ನಲುಗಿವೆ.

ಬೇಸಿಗೆ ಬಂತೆಂದರೆ ಸಾಕು, ಮಹಿಳೆಯರು ಹೊಲಗಳ ಬದು ಹಾಗೂ ಖರಾಬು ಜಾಗದಲ್ಲಿ ಬೆಳೆಯುತ್ತಿದ್ದ ಹುಲ್ಲುಕಡ್ಡಿ ಕೊಯ್ದು, ಒಣಗಿಸಿ ಪೊರಕೆ ತಯಾರಿಸುತ್ತಾರೆ. ಬಳಿಕ ತಲೆ ಮೇಲೆ ಹೊತ್ತು ಊರೂರು ತಿರುಗಿ ಮಾರಾಟ ಮಾಡುತ್ತಾರೆ.

ಇದರಿಂದ ಬದುಕು ಸಾಗಿಸುತ್ತಾರೆ. ಆದರೆ, ಈಗ ಜನರು ಆಧುನಿಕ ಪೊರಕೆಗೆ ಮೊರೆ ಹೋಗಿದ್ದಾರೆ. ಇದರಿಂದ ಪೊರಕೆ ನಂಬಿದ್ದ ಕುಟುಂಬಗಳು ಬೀದಿಗೆ ಬಂದಿವೆ.

‘ದಿನಕ್ಕೆ ಕನಿಷ್ಠ 50ರಿಂದ 60 ಪೊರಕೆ ಸಿದ್ಧಗೊಳಿಸುವಷ್ಟು ಹುಲ್ಲುಕಡ್ಡಿ ಕೊಯ್ದು ಮನೆಗೆ ತರುತ್ತೇವೆ. ಮನೆಯಂಗಳದಲ್ಲಿ ಒಣಗಿಸಿ, ಅದರಲ್ಲಿನ ಮುಳ್ಳು ತೆಗೆದು ಹದಗೊಳಿಸಿ ಪೊರಕೆ ಸಿದ್ಧಪಡಿಸುತ್ತೇವೆ. ಆದರೆ, ಇತ್ತೀಚೆಗೆ ಹುಲ್ಲುಕಡ್ಡಿ ಪೊರಕೆ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ. ಎಲ್ಲರೂ ಬ್ರಾಂಡೆಡ್ ಪೊರಕೆ ಹಿಂದೆ ಬಿದ್ದಿದ್ದಾರೆ’ ಎಂದು ಊರೂರು ತಿರುಗಿ ಪೊರಕೆ ಮಾರಾಟ ಮಾಡುವ ನಾಗಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ದಿನವೊಂದಕ್ಕೆ 50 ಪೊರಕೆ ಮಾರಾಟ ಮಾಡಬಹುದು. ಕೂಲಿ ನಂಬಿ ಜೀವನ ನಡೆಸುವ ಕೃಷಿ ಕಾರ್ಮಿಕರಿಗೆ ಇದು ಒಂದು ‘ಸಣ್ಣ ಕಸುಬು’. ಇದರಿಂದ ಬಂದ ಹಣ ಜೀವನಕ್ಕೆ ಬಳಸುತ್ತೇವೆ. ಕುಟುಂಬಕ್ಕೆ ಪೊರಕೆ ಆಧಾರವಾಗಿದ್ದು, ಪಡಿತರ ಇತ್ಯಾದಿ ಖರೀದಿಸಿ ಜೀವನ ಸಾಗಿಸುತ್ತಿದ್ದೇವೆ’ ಎಂದು ಹೇಳುತ್ತಾರೆ.
ಆಧುನಿಕ ಪೊರಕೆ: ಮಾರುಕಟ್ಟೆಗೆ ವಿವಿಧ ಬ್ರಾಂಡ್‌ನ ಪೊರಕೆಗಳು ಲಗ್ಗೆ ಇಟ್ಟಿವೆ. ವಿವಿಧ ಕಂಪೆನಿ ಬಗೆಬಗೆಯ ಪೊರಕೆ ಸಿದ್ಧಪಡಿಸಿ ಮಾರಾಟ ಮಾಡುತ್ತಿವೆ.

ಈ ಪೊರಕೆಗಳಿಗೆ ಮಹಿಳೆಯರು ಮನಸೋತು ಕಡ್ಡಿ ಪೊರಕೆ ಮರೆಯು ತ್ತಿದ್ದಾರೆ. ಗ್ರಾಮೀಣ ಮಹಿಳೆಯರೂ ಇದರ ಹಿಂದೆ ಬಿದ್ದಿರುವುದು ವಿಪರ್ಯಾಸದ ಸಂಗತಿ.

ಆಧುನಿಕ ಪೊರಕೆಗಳು ಮಾರು ಕಟ್ಟೆಗೆ ಲಗ್ಗೆ ಇಡುವುದಕ್ಕೂ ಮೊದಲು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹುಲ್ಲುಕಡ್ಡಿ ಪೊರಕೆ, ತೆಂಗಿನ ಕಡ್ಡಿ ಪೊರಕೆ, ಈಚಲು ಕಡ್ಡಿ ಪೊರಕೆಗಳೇ ಮನೆಯಂಗಳ ಸ್ವಚ್ಛಗೊಳಿಸುತ್ತಿದ್ದವು.

ಆದರೆ, ಈಗ ಅವುಗಳ ಜಾಗಕ್ಕೆ ಆಧುನಿಕ ಪೊರಕೆಗಳು ಬಂದಿವೆ. ಗುಡಿಸಲು ಮನೆಯಲ್ಲೂ ಬ್ರಾಂಡೆಡ್ ಪೊರಕೆಗಳು ಕಾರುಬಾರು ನಡೆಸುತ್ತಿವೆ. ಇದು ಪೊರಕೆ ಸಿದ್ಧಪಡಿಸುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

‘ಬ್ರಾಂಡೆಡ್ ಪೊರಕೆಗಳಿಗೆ ಮಾರುಕಟ್ಟೆಯಲ್ಲಿ ₹ 100ರಿಂದ 150 ದರ ಇದೆ. ಆದರೆ, ನಾವು ಕೇವಲ ₹ 10ಗೆ ಹುಲ್ಲುಕಡ್ಡಿ ಪೊರಕೆ ಮಾರಾಟ ಮಾಡಿದರೂ ಕೇಳುವವರೇ ಇಲ್ಲದಂತಾಗಿದೆ. ಹೀಗಾದರೇ ನಾವು ಬುದುಕುವುದಾದರೂ ಹೇಗೆ’ ಎಂದು ನಾಗಮ್ಮ ಅಳಲು ತೋಡಿಕೊಳ್ಳುತ್ತಾರೆ.

ಹಳ್ಳಿಯ ಕೆಲವು ಮನೆಗಳಲ್ಲಿ ಈಗಲೂ ಹುಲ್ಲುಕಡ್ಡಿ ಪೊರಕೆ ಕಾಣಬ ಹುದು.  ಸಾಂಪ್ರದಾಯಕ ಕುಟುಂಬ ಗಳಲ್ಲಿ ಬಲು ಬೇಡಿಕೆ ಇದೆ. ಕೆಲವರು ಹುಲ್ಲುಕಡ್ಡಿ ಪೊರಕೆಯಿಂದ ಮಕ್ಕಳಿಗೆ ಇಳಿ ತೆಗೆಯಲು ಬಳಸುತ್ತಾರೆ.
– ಎಚ್‌.ಎಸ್‌.ಸಚ್ಚಿತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.