ADVERTISEMENT

ನಮ್ಮ ಕುಟುಂಬ ಒಡೆಯಲು ಸಾಧ್ಯವಿಲ್ಲ-–ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:38 IST
Last Updated 15 ಜುಲೈ 2017, 6:38 IST

ಮೈಸೂರು: ‘ನನ್ನ ಕುಟುಂಬವನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ. ರೇವಣ್ಣ, ಬಾಲಕೃಷ್ಣ ಮಾತ್ರ ನನ್ನ ಕುಟುಂಬವಲ್ಲ. ಪಕ್ಷದ ಎಲ್ಲ ಕಾರ್ಯಕರ್ತರು ನನ್ನ ಕುಟುಂಬ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಇಲ್ಲಿನ ದಟ್ಟಗಳ್ಳಿಯ ಸಾ.ರಾ. ಸಮುದಾಯ ಭವನದಲ್ಲಿ ಸೋಮವಾರ ಪಕ್ಷ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕುಟುಂಬಕ್ಕೆ ಆಸ್ತಿ ಮಾಡುವ ಅಥವಾ ಹಣ ಲೂಟಿ ಮಾಡುವ ಉದ್ದೇಶದಿಂದ ನಾನು ರಾಜಕಾರಣಕ್ಕೆ ಬಂದಿಲ್ಲ. ಸೂಟ್‌ಕೇಸ್‌ನ ಅವಶ್ಯವೂ ನನಗಿಲ್ಲ. ಕುಮಾರಸ್ವಾಮಿ ಏನು ಮಾಡುತ್ತಾನೆ ಎಂದು ಮೂದಲಿಸಿ ದವರಿಗೆ ಸವಾಲು ನೀಡಲು ಏಕಾಂಗಿಯಾಗಿ ಹೋರಾಡುತ್ತಿದ್ದೇನೆ’ ಎಂದರು.

ADVERTISEMENT

‘ಹಿಂದೆ ಪಕ್ಷದಲ್ಲಿ ಇದ್ದವರು ಸೂಟ್‌ಕೇಸ್‌ ತೆಗೆದುಕೊಂಡಿದ್ದೂ ನಿಜ, ಮುಂದಿನ ಸೀಟಿನಲ್ಲಿ ಕುಳಿತಿದ್ದೂ ನಿಜ. ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಅವರು ಸೂಟ್‌ಕೇಸ್‌ ಪಡೆಯಲಿಲ್ಲವೇ? ಈಗ ಅವರಿಗೆ ಪ್ರಜ್ವಲ್‌ ರೇವಣ್ಣ ಮೇಲೆ ವಿಶೇಷ ಪ್ರೀತಿ ಬಂದಿದೆ. ಅವರೆಲ್ಲ ಪಕ್ಷದೊಳಗೆ ಇದ್ದಾಗ ನಾನು ಚಿತ್ರಹಿಂಸೆ ಅನುಭವಿಸಿದ್ದೇನೆ. ಪಕ್ಷ ಅಧಿಕಾರದಲ್ಲಿದ್ದಾಗ ಮಂತ್ರಿ ಮಾಡಲು ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ’ ಎಂದು ಹೇಳಿದರು.

‘ನಾನೇ ಮುಖ್ಯಮಂತ್ರಿಯಾಗ­ಬೇಕೆಂಬ ಆಸೆಯೂ ಇಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕು. ಜೆಡಿಎಸ್‌ ಪಕ್ಷ ಆಡಳಿತ ನಡೆಸಬೇಕೆಂಬ ಎಚ್‌.ಡಿ. ದೇವೇಗೌಡರ ಕನಸು ನನಸಾಗಬೇಕು ಅಷ್ಟೆ’ ಎಂದು ತಿಳಿಸಿದರು.

‘ಹಣ ಮಾಡದ ರಾಜಕಾರಣಿಗಳಲ್ಲಿ ವಿಶ್ವನಾಥ್‌ ಕೂಡ ಒಬ್ಬರು. ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಕರೆತಂದು ಮುಖ್ಯಮಂತ್ರಿಯಾಗಿಸಿದರು. ಇಂಥ ವ್ಯಕ್ತಿಯನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತಿದೆ. ಶಕ್ತಿ ತುಂಬಿದ ವ್ಯಕ್ತಿಯನ್ನೇ ಬೀದಿಗೆ ತಂದು ನಿಲ್ಲಿಸಿದರು. ಹಾಗೆಯೇ, ಉಪಮುಖ್ಯಮಂತ್ರಿಯನ್ನಾಗಿ ಮಾಡಿದ ಎಚ್‌.ಡಿ.ದೇವೇಗೌಡ ಅವರ ಭಾವಚಿತ್ರಕ್ಕೆ ಚಪ್ಪಾಲಿ ಹಾರ ಹಾಕಿ ಸಿದ್ದರಾಮಯ್ಯ ಪ್ರತಿಭಟನೆ ನಡೆಸಿದ್ದರು. ಅಪ್ಪ, ಮಕ್ಕಳು ಪಕ್ಷವೆಂದು ಹೇಳಿ ಈಗ ತಮ್ಮ ಪುತ್ರನಿಗೆ ವೇದಿಕೆ ಸಿದ್ಧಪಡಿ ಸುತ್ತಿದ್ದಾರೆ’ ಎಂದು ಹರಿಹಾಯ್ದರು.

‘ವರುಣಾ, ತಿ.ನರಸೀಪುರ ಕ್ಷೇತ್ರಗಳಲ್ಲಿ ಮರಳು ದಂಧೆ ನಡೆಯುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಂದವರು ಭ್ರಷ್ಟಾಚಾರವನ್ನೇ ಹೊದ್ದು ಮಲಗಿದ್ದಾರೆ. ಬಿಜೆಪಿಗಿಂತ ಭ್ರಷ್ಟಾಚಾರ ಹತ್ತು ಪಟ್ಟು ಹೆಚ್ಚಿದೆ’ ಎಂದು ಆರೋಪಿಸಿದರು.

‘ಆಗಸ್ಟ್‌ನಲ್ಲಿ ಒಂದು ತಿಂಗಳು ವಿಜಯಪುರದಲ್ಲಿ ಇರುತ್ತೇನೆ. ಅಲ್ಲಿ 10 ಲಕ್ಷ ರೈತರನ್ನು ಸೇರಿಸಿ ರೈತರ ಸಮಾವೇಶ ನಡೆಸುತ್ತೇನೆ. ಹಿಂದೆ ಇಂಥ ಸಮಾವೇಶ ನಡೆದಿರಬಾರದು. ಆ ರೀತಿಯಲ್ಲಿ ಆಯೋಜಿಸಲಾಗುವುದು’ ಎಂದರು.

ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್‌ ಮಾತನಾಡಿ, ‘ಪಕ್ಷಕ್ಕೆ ಕೇವಲ ವಿಶ್ವನಾಥ್‌ ಒಬ್ಬ ಬಂದಿಲ್ಲ. ಕುರುಬ ಸಮುದಾಯ ಹಾಗೂ ಅಲ್ಪಸಂಖ್ಯಾತ ಸಮುದಾಯದ ಸಾವಿರಾರು ಮಂದಿ ಬಂದಿದ್ದಾರೆ. ಪಕ್ಷವು ಜನಮನ ತಲುಪಿಸುವ ರೀತಿ ಯೋಜನೆ ರೂಪಿಸಬೇಕು.  ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸುವುದು ನನ್ನ ಕನಸು’ ಎಂದರು.

ಜೆಡಿಎಸ್‌ ರಾಷ್ಟ್ರೀಯ ಉಪಾಧ್ಯಕ್ಷ ಫಾರೂಕ್‌, ಜಫರುಲ್ಲಾ, ವಿಧಾನ ಪರಿಷತ್‌ ಸದಸ್ಯರಾದ ಬಸವರಾಜ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ಸಂದೇಶ್ ನಾಗರಾಜ್‌, ಶಾಸಕರಾದ ಸಾ.ರಾ.ಮಹೇಶ್‌, ಜಿ.ಟಿ.ದೇವೇಗೌಡ, ಮೇಯರ್‌ ಎಂ.ಜೆ.ರವಿಕುಮಾರ್‌, ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ಅಪ್ಪಾಜಿ ಗೌಡ, ಜಿ.ಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಇದ್ದರು.

***

‘ಹುಣಸೂರು ಕ್ಷೇತ್ರದ ಅಭ್ಯರ್ಥಿ ವಿಶ್ವನಾಥ್‌’

ಮೈಸೂರು: ಕಾಂಗ್ರೆಸ್‌ ತೊರೆದು ಈಚೆಗೆ ಜೆಡಿಎಸ್‌ ಸೇರಿರುವ ಎಚ್‌.ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಂದು ಶಾಸಕ ಜಿ.ಟಿ.ದೇವೇಗೌಡ ಘೋಷಿಸಿದರು.

ಹಲವು ದಿನಗಳಿಂದ ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲವನ್ನು ಬಗೆಹರಿಸಲು ಈ ಮೂಲಕ ಪ್ರಯತ್ನ ನಡೆಸಿದರು.

‘ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ನಾನು, ಪತ್ನಿ ಹಾಗೂ ಪುತ್ರ ಪಕ್ಷದ ಒಳಿತಿಗಾಗಿ ಯಾವುದೇ ತ್ಯಾಗಕ್ಕೆ ಸಿದ್ಧ’ ಎಂದು ಅವರು ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಹೇಳಿದರು.

‘ಹಿಂದೆ ಜೆಡಿಎಸ್‌ ಮುಖಂಡರನ್ನು ವಿಶ್ವನಾಥ್‌ ಬಯ್ದಿದ್ದರು. ಆದರೆ, ಸೋನಿಯಾ ಗಾಂಧಿ ಅವರನ್ನು ಬಯ್ದವರು ಈಗ ರಾಜ್ಯದ ಮುಖ್ಯಮಂತ್ರಿ ಆಗಿಲ್ಲವೇ? ಅವರಿಗಿಂತ ಕೆಟ್ಟದಾಗಿ ಏನೂ ವಿಶ್ವನಾಥ್‌ ಬಯ್ದಿಲ್ಲ’ ಎಂದರು.

ಕುಮಾರಸ್ವಾಮಿ ಮಾತನಾಡಿ, ‘ಜಿ.ಟಿ.ದೇವೇಗೌಡರ ಹೃದಯ ವೈಶಾಲ್ಯ ದೊಡ್ಡದು. ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಹರೀಶ್‌, ಲಲಿತಾ ದೇವೇಗೌಡ ಅವರ ಸೇವೆ ದೊಡ್ಡದು. ವಿಶ್ವನಾಥ್ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಡುತ್ತಿದ್ದಾರೆ’ ಎಂದರು.

‘ಮಂಗಳೂರು ಕರ್ನಾಟಕದ ಸ್ಮಶಾನ’
ಮೈಸೂರು
:  ‘ಮಂಗಳೂರು ಕರ್ನಾಟಕದ ಸ್ಮಶಾನವಾಗಿದೆ. ಒಂದು ಜಿಲ್ಲೆಯ ಕೋಮು ಗಲಭೆ ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ’ ಎಂದು ಜೆಡಿಎಸ್‌ ಮುಖಂಡ ಎಚ್‌.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಭಾರತ-ಪಾಕಿಸ್ತಾನ ಮಾಡಿಕೊಂಡಿವೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ ಪ್ರತಿಭಟನೆ ಮಾಡಲು ಅವಕಾಶ ಕೊಡಲಿಲ್ಲ ಎಂದು ಬಿಜೆಪಿ ಮುಖಂಡರು ಕೂಗಾಡುತ್ತಿದ್ದಾರೆ. ಶಾಂತಿ ನೆಲೆಸಲು ಬೇಕಾದ ವಾತಾವರಣವನ್ನೇ ನಿರ್ಮಿಸುತ್ತಿಲ್ಲ’ ಎಂದರು.

‘ಎರಡು ರಾಷ್ಟ್ರೀಯ ಪಕ್ಷಗಳೂ ತಮ್ಮ ಮತಕ್ಕಾಗಿ ಕರಾವಳಿ ಪ್ರದೇಶವನ್ನು ಗಲಭೆ ಪೀಡಿತ ಪ್ರದೇಶವಾಗಿ ಮಾಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ತಿಂಗಳ ಹಿಂದೆ ಮಂಗಳೂರು ಕರ್ನಾಟಕದಲ್ಲಿದೆ ಎಂಬುದೇ ಗೊತ್ತಿರಲಿಲ್ಲ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.