ADVERTISEMENT

ನಾಟಕ ಅಕಾಡೆಮಿ; 50 ಪ್ರಶಸ್ತಿ ಪ್ರದಾನ

ಜ. 4ರಂದು ಕಲಾಮಂದಿರದಲ್ಲಿ ಸಮಾರಂಭ; ಪ್ರಶಸ್ತಿ ಪುರಸ್ಕೃತರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:36 IST
Last Updated 2 ಜನವರಿ 2017, 11:36 IST

ಮೈಸೂರು: ಕರ್ನಾಟಕ ನಾಟಕ ಅಕಾ ಡೆಮಿಯು 2015 ಹಾಗೂ 2016ನೇ ಸಾಲಿನ ಒಟ್ಟು 50 ಪ್ರಶಸ್ತಿಗಳನ್ನು ಜ. 4ರಂದು ಪ್ರದಾನ ಮಾಡಲಿದೆ. ‘ಅಂದು ಸಂಜೆ 5.30 ಗಂಟೆಗೆ ನಗರದ ಕಲಾಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಕಲಾವಿದರು, ಗ್ರಂಥ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.

2015ನೇ ಸಾಲಿನ ಗೌರವ ಪ್ರಶಸ್ತಿ ಮನುಬಾಯಿ ನಾಕೋಡ, ಕಲ್ಚರ್ಡ್‌ ಕಾಮಿಡಿಯನ್‌ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಮಧುಕೇಶ ಚಿಂದೋಡಿ, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ ಗೂಡು ಸಾಹೇಬ ಚಟ್ನಿಹಾಳ, ಪದ್ಮಶ್ರೀ ಚಿಂದೋಡಿಲೀಲಾ ದತ್ತಿ ಪುರಸ್ಕಾರ ಮಮತಾ ಗುಡೂರು ಅವರಿಗೆ ನೀಡಲಾ ಗುವುದು’ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಎಲ್‌.ಬಿ.ಶೇಖ್ ಮಾಸ್ತರ ತಿಳಿಸಿದರು.

‘2016ನೇ ಸಾಲಿನ ಗೌರವ ಪ್ರಶಸ್ತಿ ಸಂಗೀತ ನಿರ್ದೇಶಕ ಹಂಸಲೇಖ, ಕಲ್ಚರ್ಡ್‌ ಕಾಮಿಡಿಯನ್‌ ಕೆ.ಹಿರಣ್ಣಯ್ಯ ದತ್ತಿ ಪುರಸ್ಕಾರ ಆರ್‌. ಮಹದೇವಪ್ಪ, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ ಬಿ.ಗಂಗಾಧರ, ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ ಉಮಾ ರಾಣೆಬೆನ್ನೂರು ಅವರಿಗೆ ಪ್ರದಾನ ಮಾಡಲಾಗುವುದು. ಇದರೊಂದಿಗೆ ಎರಡೂ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಕಲಾವಿದರಿಗೆ, ನೇಪಥ್ಯದಲ್ಲಿ ದುಡಿದವರಿಗೆ ಹಾಗೂ ರಂಗಭೂಮಿ ಕುರಿತ ಕೃತಿಗಳಿಗೆ ನೀಡ ಲಾಗುವುದು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

‘ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಸಂಜೆ 4 ಗಂಟೆಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಪ್ರಶಸ್ತಿ ಪುರಸ್ಕೃತ ಮೆರವಣಿಗೆ ನಡೆಯಲಿದೆ. ಪೇಟ ತೊಡಿಸಿ, ಸಾರೋಟದಲ್ಲಿ ಕರೆದೊಯ್ಯ ಲಾಗುವುದು. ಡೊಳ್ಳು, ಕಂಸಾಳೆ, ಪೂಜಾಕುಣಿತ, ಗೊರವರ ಕುಣಿತ, ವೀರಗಾಸೆ ಮೊದಲಾದ ಜನಪದ ಕಲಾತಂಡಗಳೊಂದಿಗೆ ಕಲಾಮಂದಿರ ದವರೆಗೆ ಮೆರವಣಿಗೆ ತೆರಳಲಿದೆ. ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ ಚಾಲನೆ ನೀಡುವರು’ ಎಂದರು.

‘ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಪಂಡಿತ್‌ ದೇವೇಂದ್ರಪ್ಪ ಮುಧೋಳ ಹಾಗೂ ಪಂಡಿತ್‌ ವೆಂಕಟೇಶ್‌ ಆಲ್ಕೊಡ ಮತ್ತು ತಂಡಗಳು ರಂಗಗೀತೆ ಪ್ರಸ್ತುತಪಡಿಸಲಿವೆ. ಸಮಾರಂಭವನ್ನು ಸಾಹಿತಿ ಸಾಹಿತಿ ಬರಗೂರ ರಾಮಚಂದ್ರಪ್ಪ ಉದ್ಘಾಟಿಸುವರು.

ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡುವರು. ಪ್ರಶಸ್ತಿ ಪುರಸ್ಕೃತ ಕುರಿತ ‘ರಂಗದಂಬಾರಿ’ ಸಂಚಿಕೆಯನ್ನು ಸಚಿವ ತನ್ವೀರ್ ಸೇಠ್ ಬಿಡುಗಡೆಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸುವರು’ ಎಂದು ವಿವರಿಸಿದರು. ನಾಟಕ ಅಕಾಡೆಮಿ ರಿಜಿಸ್ಟ್ರಾರ್‌ ಮಂಜುನಾಥ ಆರಾಧ್ಯ, ಸದಸ್ಯ ಬಿ.ಎಂ.ರಾಮಚಂದ್ರ, ಮೈಸೂರು ತಾಲ್ಲೂಕು ಕಸಾಪ ಅಧ್ಯಕ್ಷ ಶಿವಮೂರ್ತಿ ಕಾನ್ಯಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.