ADVERTISEMENT

ನ್ಯಾಯಾಂಗ ವಿಚಾರಣೆಗೆ ದೇವನೂರ ಒತ್ತಾಯ

ಜಾತಿ ನಿಂದನೆ: ಪರಶುರಾಮ್‌ ಬಂಧನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಜುಲೈ 2014, 11:36 IST
Last Updated 1 ಜುಲೈ 2014, 11:36 IST
ನ್ಯಾಯಾಂಗ ವಿಚಾರಣೆಗೆ ದೇವನೂರ ಒತ್ತಾಯ
ನ್ಯಾಯಾಂಗ ವಿಚಾರಣೆಗೆ ದೇವನೂರ ಒತ್ತಾಯ   

ಮೈಸೂರು: ಜಾತಿ ನಿಂದನೆ ಆರೋಪದ ಮೇಲೆ ‘ಒಡನಾಡಿ’ ಸೇವಾ ಸಂಸ್ಥೆ ಮುಖ್ಯಸ್ಥ ಪರಶುರಾಮ್‌ ಅವರನ್ನು ಬಂಧಿಸಿರುವ ಪ್ರಕರಣ ಆತಂಕ ಮೂಡಿಸಿದ್ದು, ಸತ್ಯಾಸತ್ಯತೆ ಅರಿಯಲು ಸರ್ಕಾರ ನ್ಯಾಯಾಂಗ ವಿಚಾರಣೆಗೆ ಆದೇಶಿಸಬೇಕು ಎಂದು ಸಾಹಿತಿ ದೇವನೂರ ಮಹಾದೇವ ಒತ್ತಾಯಿಸಿದರು.

ಬಂಧನದ ಬಳಿಕ ಅಸ್ವಸ್ಥರಾದ ಪರಶುರಾಮ್‌ ಅವರನ್ನು ಚಿಕಿತ್ಸೆಗಾಗಿ ದಾಖಲಿಸಿರುವ ಕೆ.ಆರ್‌. ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಅಸಹಾಯಕ ಮಹಿಳೆಯರು, ಶೋಷಿತ ಮಕ್ಕಳಿಗೆ ಆಧಾರವಾಗಿರುವ ‘ಒಡನಾಡಿ’ಯ ಪರಶುರಾಮ್‌ ಹಾಗೂ ಸ್ಟ್ಯಾನ್ಲಿ ಅವರನ್ನು ಸಮಾಜ ಗೌರವಿಸಬೇಕು. ಪೊಲೀಸ್‌ ಇಲಾಖೆಗೆ ಪೂರಕ­ವಾಗಿ ಕಾರ್ಯ­ನಿರ್ವಹಿಸುತ್ತಾ ಮಾನವಕಳ್ಳ ಸಾಗಣೆ ವಿರುದ್ಧ ಹೋರಾಟ ಮಾಡುವ ಇಬ್ಬರನ್ನೂ ಸೌಜನ್ಯದಿಂದ ನಡೆಸಿಕೊಳ್ಳ­ಬೇಕು. ಆದರೆ, ಪ್ರಕರಣವನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸದೇ ಕ್ರಮ ಕೈಗೊಂಡಿರುವುದು ಬೇಸರ ಮೂಡಿಸಿದೆ. ಅಂತಃಕರಣ ಮಿಡಿಯುವ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಿರುವ ‘ಒಡನಾಡಿ’ಯ ಸದಸ್ಯರ ಬೆಂಬಲಕ್ಕೆ ನಾವಿದ್ದೇವೆ. ಇಂತಹ ಷಡ್ಯಂತ್ರಗಳಿಗೆ ಪರಶುರಾಮ್‌ ಮತ್ತು ಸ್ಟ್ಯಾನ್ಲಿ ಧೃತಿಗೆಡಬಾರದು ಎಂದು ಭರವಸೆ ನೀಡಿದರು.

ಇದು ಸುಳ್ಳು ಮೊಕದ್ದಮೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ‘ಒಡನಾಡಿ’ಯ ಸೇವೆ ಸಹಿಸದ ಕೆಲವರು ರೂಪಿಸಿದ ಸಂಚು ಎಂಬ ಅನುಮಾನವೂ ಹುಟ್ಟುತ್ತದೆ. ಈ ಪ್ರಕರಣದಲ್ಲಿ ದಲಿತ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗವಾಗಿದೆ. ಇದರಿಂದ ಜಾತಿ ನಿಂದನೆ ಪ್ರಕರಣಗಳನ್ನು ಸಮಾಜ ಅನುಮಾನದಿಂದ ನೋಡುವ ವಾತಾವರಣ ನಿರ್ಮಾಣವಾಗುತ್ತದೆ ಎಂಬ ಆತಂಕ ಕಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ಅವರಿಗೆ ‘ಒಡನಾಡಿ’ಯ ಸೇವೆಗಳ ಕುರಿತು ತಿಳಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಅಭಿರುಚಿ ಪ್ರಕಾಶನದ ಗಣೇಶ್‌ ಇದ್ದರು.

ಹಿನ್ನೆಲೆ: ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಲಕ್ಷ್ಮೀಪುರಂ ಠಾಣೆಯಲ್ಲಿ ಮೇ 27ರಂದು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಒಡನಾಡಿ’ಯ ಪರಶುರಾಮ್‌ ಅವರನ್ನು ಶನಿವಾರ ರಾತ್ರಿ ಪೊಲೀಸರು ಬಂಧಿಸಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.