ADVERTISEMENT

ಪಿಜಿಎಸ್‌ಸಿ ತಂಡಕ್ಕೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 4:38 IST
Last Updated 16 ಮಾರ್ಚ್ 2017, 4:38 IST

ಮೈಸೂರು: ಅತ್ಯುತ್ತಮ ಪ್ರದರ್ಶನ ನೀಡಿದ ಮಾನಸಗಂಗೋತ್ರಿ ಸ್ನಾತಕೋತ್ತರ ಕ್ರೀಡಾ ಮಂಡಳಿ (ಪಿಜಿಎಸ್‌ಸಿ) ತಂಡದವರು ಬುಧವಾರ ಇಲ್ಲಿ ಕೊನೆ ಗೊಂಡ ಮೈಸೂರು ವಿಶ್ವವಿದ್ಯಾನಿಲಯ ಅಂತರಕಾಲೇಜು, ಅಂತರ ವಲಯ (2ನೇ ಗುಂಪು) ಪುರುಷರ ಕ್ರೀಡಾ ಕೂಟದ ಸಮಗ್ರ ಪ್ರಶಸ್ತಿ ಜಯಿಸಿದರು.

ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ವಿ.ವಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ನಡೆದ ಕ್ರೀಡಾಕೂಟದಲ್ಲಿ ಈ ತಂಡದ ವರು 41 ಪಾಯಿಂಟ್‌ ಸಂಪಾದಿಸಿ ಈ ಸಾಧನೆ ಮಾಡಿದರು.

ಪಿಜಿಎಸ್‌ಸಿ ತಂಡದವರು ಹ್ಯಾಂಡ್‌ ಬಾಲ್‌, ಹಾಕಿ, ಟೇಬಲ್‌ ಟೆನಿಸ್‌, ಟೆನಿಸ್‌ ಕ್ರೀಡೆಗಳಲ್ಲಿ ಮೊದಲ ಸ್ಥಾನ, ಬ್ಯಾಡ್ಮಿಂಟನ್‌, ಬ್ಯಾಸ್ಕೆಟ್‌ಬಾಲ್‌, ಚೆಸ್‌, ಕ್ರಿಕೆಟ್‌, ಕಬಡ್ಡಿ, ಕೊಕ್ಕೊ ಮತ್ತು ವಾಲಿಬಾಲ್‌ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದರು.

ADVERTISEMENT

ಎಸ್‌ಬಿಆರ್‌ಆರ್‌ ಮಹಾಜನ ಕಾಲೇಜು ತಂಡದವರು ದ್ವಿತೀಯ (19 ಪಾಯಿಂಟ್‌) ಹಾಗೂ ಮಂಡ್ಯದ ಪ್ರಥಮದರ್ಜೆ (ಸ್ವಾಯತ್ತ) ಕಾಲೇಜು ತೃತೀಯ (17 ಪಾಯಿಂಟ್‌) ಸ್ಥಾನ ಗಳಿಸಿದವು.

ಬ್ಯಾಸ್ಕೆಟ್‌ಬಾಲ್‌ನಲ್ಲಿ ಮಂಡ್ಯದ ಪ್ರಥಮದರ್ಜೆ (ಸ್ವಾಯತ್ತ) ಕಾಲೇಜು ಚಾಂಪಿಯನ್‌ ಆಯಿತು. ಈ ತಂಡ ಫೈನಲ್‌ನಲ್ಲಿ ಪಿಜಿಎಸ್‌ಸಿ ತಂಡವನ್ನು ಮಣಿಸಿತು.
ವಾಲಿಬಾಲ್‌ನಲ್ಲಿ ಹಾಸನದ ಎನ್‌ಡಿ ಆರ್‌ಕೆ ಕಾಲೇಜು ತಂಡ ಮೊದಲ ಸ್ಥಾನ ಗಳಿಸಿತು. ಈ ತಂಡ ಫೈನಲ್‌ನಲ್ಲಿ ಪಿಜಿ ಎಸ್‌ಸಿ ತಂಡದ ಎದುರು ಗೆಲುವು ಸಾಧಿಸಿತು.
ಫುಟ್‌ಬಾಲ್‌ ಫೈನಲ್‌ನಲ್ಲಿ ಮಂಡ್ಯದ ಪ್ರಥಮದರ್ಜೆ (ಸ್ವಾಯತ್ತ) ಕಾಲೇಜು ತಂಡ ಮಣಿಸಿ ಮಹಾಜನ ಎಸ್‌ಬಿಆರ್‌ಆರ್‌ ತಂಡದವರು ಪ್ರಶಸ್ತಿ ಜಯಿಸಿದರು. ಹಾಕಿ ಸ್ಪರ್ಧೆಯಲ್ಲಿ ಪಿಜಿಎಸ್‌ಸಿ ತಂಡ ಚಾಂಪಿಯನ್ ಆಯಿತು. ಫೈನಲ್‌ನಲ್ಲಿ ಸೇಂಟ್‌ ಜೋಸೆಫ್‌ ತಂಡವನ್ನು ಪರಾಭವ ಗೊಳಿಸಿದರು.

ಸಿಂಡಿಕೇಟ್‌ ಸದಸ್ಯ ಎಂ.ಎಸ್‌.ಎಸ್‌.ಕುಮಾರ್‌, ಪಿಜಿಎಸ್‌ಸಿ ಅಧ್ಯಕ್ಷ ಪ್ರೊ.ಎಸ್‌.ರವಿ, ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಅವರು ಪಾರಿತೋಷಕ ಪ್ರದಾನ ಮಾಡಿದರು. ಕ್ರೀಡಾಕೂಟದಲ್ಲಿ 50 ತಂಡಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.