ADVERTISEMENT

ಪೈಪ್‌ನಲ್ಲಿ ಅವಿತ ಚಿರತೆ ಸೆರೆ

ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 7:37 IST
Last Updated 30 ಜನವರಿ 2017, 7:37 IST
ನಂಜನಗೂಡು: ತಾಲ್ಲೂಕಿನ ಹೆಗ್ಗಡಹಳ್ಳಿ ಹೊರವಲಯದ ಕಬಿನಿ ಬಲದಂಡೆ ನಾಲೆಯ ಕೊಳವೆಯಲ್ಲಿ ಅವಿತು ಕೊಂಡಿದ್ದ ಚಿರತೆಯೊಂದು ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸತತ 5 ಗಂಟೆ ಕಾರ್ಯಾಚರಣೆ ನಡೆಸಿ ಬೋನಿಗೆ ಕೆಡವುವಲ್ಲಿ ಯಶಸ್ವಿಯಾದರು.
 
ಭಾನುವಾರ ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿ ನಾಯಿ ಬೇಟೆಯಾಡಿ ತಿನ್ನುತ್ತಿದ್ದ ಚಿರತೆ ಕಂಡ ಗ್ರಾಮಸ್ಥರು ಗದ್ದಲ ಎಬ್ಬಿಸಿದರು. ಇದರಿಂದ ಗಾಬರಿಗೊಂಡ ಚಿರತೆ ಸಮೀಪದ ಕಬಿನಿ ಬಲದಂಡೆ ನಾಲೆಯಿಂದ ಕಿರುನಾಲೆ ಗಳಿಗೆ ನೀರು ಹಾಯಿಸುವ ಕೊಳವೆಯಲ್ಲಿ ಅವಿತುಕೊಂಡಿತು. ಬಳಿಕ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
 
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪೈಪ್‌ನ ಒಂದು ಬದಿಗೆ ಬೋನ್ ಇರಿಸಿ, ಮತ್ತೊಂದು ಬದಿಯಿಂದ ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ನೀರು ಹಾಯಿಸಿ, ಪಟಾಕಿ ಸಿಡಿಸಿದರು. ಸತತವಾಗಿ 5 ಗಂಟೆ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
 
‘ಸುಮಾರು 5 ವರ್ಷ ವಯಸ್ಸಿನ ಚಿರತೆ ಸೆರೆಹಿಡಿಯಲಾಗಿದೆ. ನಾಗರ ಹೊಳೆ ಅರಣ್ಯಕ್ಕೆ ಬಿಡಲು ಸಾಗಿಸಲಾಗಿದೆ’ ಎಂದು ಆರ್ಎಫ್ಒ ಜಯಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
 
ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ನಿತಿನ್ ಕುಮಾರ್ ಹಾಗೂ ಸಿಬ್ಬಂದಿ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.